ನವದೆಹಲಿ: ಈಜುಕೊಳದಲ್ಲಿ ಮುಳುಗಿ 6 ವರ್ಷದ ಬಾಲಕ ಸಾವು, ನಿರ್ಲಕ್ಷ್ಯದ ಆರೋಪ

ನವದೆಹಲಿ: ಈಜುಕೊಳದಲ್ಲಿ ಮುಳುಗಿ ಆರು ವರ್ಷದ ಬಾಲಕ ದಾರುಣವಾಗಿ ಸಾವನ್ನಪ್ಪಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಮಂಜೀತ್ ಕುಮಾರ್ ಅವರ ಪುತ್ರ ತಕ್ಷ್ ರಥಿ ಮೃತ ಬಾಲಕ ಎಂದು ಗುರುತಿಸಲಾಗಿದೆ.

ಮೃತ ಬಾಲಕ ತಕ್ಷ್ ರಥಿ ಇತರ ಮಕ್ಕಳೊಂದಿಗೆ ಪಿತಂಪುರಾದ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ಸಮುದಾಯ ಕೇಂದ್ರದ ಒಳಗಿರುವ ಮಲಿಕ್ ಈಜುಕೊಳದಲ್ಲಿ ಆಟವಾಡಲು ತೆರಳಿದ್ದ.
ಈ ವೇಳೆ ಬಾಲಕ ನೋಡನೋಡುತ್ತಿದ್ದಂತೆ ನೀರಿನಲ್ಲಿ ಮುಳುಗಿದ್ದಾನೆ. ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಬಾಲಕನನ್ನು ಕೂಡಲೇ ಆಸ್ಪತ್ರೆ ಸಾಗಿಸಲಾಯಿತು. ಆದರೆ ದುರಾದೃಷ್ಟವಶಾತ್ ಬಾಲಕ ಮಾರ್ಗಮಧ್ಯವೇ ಸಾವನ್ನಪ್ಪಿದ್ದಾನೆ.
ಈಜುಕೊಳ ನಿರ್ವಾಹಕರ ನಿರ್ಲಕ್ಷ್ಯದಿಂದ ಈ ಸಾವು ಸಂಭವಿಸಿದೆ ಎನ್ನುವ ಆರೋಪದ ಮೇಲೆ ದೂರು ದಾಖಲಾಗಿದೆ. ಈಜುಕೊಳದಲ್ಲಿ ಸಿಸಿಟಿವಿ ಅಳವಡಿಸಿಲ್ಲ ಮತ್ತು ಸರಿಯಾದ ಸುರಕ್ಷತಾ ಕ್ರಮಗಳು ಯಾವುದೂ ಇರಲಿಲ್ಲ ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.