ಸಾಮಾಜಿಕ ಜಾಲತಾಣದ ರಿವ್ಯೂ ನೆಪದಲ್ಲಿ ಸೈಬರ್ ವಂಚನೆ: ಸಾವಿರಾರು ಮಂದಿಗೆ ಲಕ್ಷಾಂತರ ರೂಪಾಯಿ ನಷ್ಟ

ಬೆಂಗಳೂರು :ಸಾರ್ವಜನಿಕರ ಹಣವನ್ನು ಸುಲಭವಾಗಿ ಲಪಟಾಯಿಸಲು ಸೈಬರ್ ವಂಚಕರು ದಿನಕ್ಕೊಂದು ಹೊಸ ಮಾರ್ಗ ಹುಡುಕುತ್ತಿದ್ದಾರೆ. ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಕಂಪನಿಗಳ ಕುರಿತು ರಿವ್ಯೂ ನೀಡಿದರೆ ಹಣ ನೀಡುವುದಾಗಿ ನಂಬಿಸಿ ಮೋಸ ಮಾಡುತ್ತಿರುವ ಪ್ರಕರಣಗಳು ವರದಿ ಆಗುತ್ತಿವೆ.
ಅದರಲ್ಲೂ ಸಾವಿರಾರು ಕಂಪನಿಗಳ ನೆಲೆ ಆಗಿರುವ ಬೆಂಗಳೂರಿನಲ್ಲಿ ರಿವ್ಯೂ ಹೆಸರಿನಲ್ಲಿ ವಂಚಿಸುವ ಜಾಲ ಸಕ್ರಿಯವಾಗಿದೆ.

ಹೂಡಿಕೆ ಮಾಡುವಂತೆ ಪ್ರಚೋದನೆ ನೀಡಿ ಮೋಸ ಮಾಡುವುದು, ನಕಲಿ ಸಹಾಯವಾಣಿ, ಆನ್‌ಲೈನ್ ಹಣ ವರ್ಗಾವಣೆ, ವೈರಸ್ ದಾಳಿ, ಅಶ್ಲೀಲ ವಿಡಿಯೊ ಅಪ್‌ಲೋಡ್ ಮಾಡುವ ಮೂಲಕ ವಂಚನೆ ನಡೆಸುತ್ತಿದ್ದ ಸೈಬರ್ ವಂಚಕರು ಈಗ ರಿವ್ಯೂ ಹೆಸರಿನಲ್ಲೂ ವಂಚನೆಗೆ ಇಳಿದಿದ್ದಾರೆ.
ವಂಚನೆಯ ಹೊಸ ಹೊಸ ವಿಧಾನಗಳನ್ನು ಪತ್ತೆಹಚ್ಚಿ ನಾಗರಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಅಷ್ಟರಲ್ಲಿ ಸೈಬರ್ ವಂಚನೆಗೆ ಮತ್ತೊಂದು ವಿಧಾನ ಕಂಡುಕೊಂಡಿರುತ್ತಾರೆ. ರಿವ್ಯೂ ಹೆಸರಿನಲ್ಲಿ ವಂಚನೆಗೆ ಒಳಗಾದವರು ನಗರದ ಹಲವು ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸುತ್ತಿದ್ದಾರೆ ಎಂದು ಸೈಬರ್ ಠಾಣೆಯ ಪೊಲೀಸರು ಹೇಳಿದರು.
₹57 ಲಕ್ಷ ಕಳೆದುಕೊಂಡ ವ್ಯಕ್ತಿ:
ಗೂಗಲ್ ರಿವ್ಯೂ ಹೆಸರಿನಲ್ಲಿ ವಂಚನೆ ಒಳಗಾಗಿರುವ ಬಸಪ್ಪ ಗಾರ್ಡನ್ ನಿವಾಸಿ ಜಗದೀಶನ್ ಅವರು ₹57 ಲಕ್ಷ ಕಳೆದುಕೊಂಡಿದ್ದಾರೆ. ಹಲಸೂರು ಉಪ ವಿಭಾಗದ ಕೇಂದ್ರ ಸೈಬರ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
‘ಜಗದೀಶನ್ ಅವರ ವಾಟ್ಸ್‌ಆಯಪ್‌ಗೆ ಬ್ರ್ಯಾಂಡ್ ಮಾರ್ಕ್ ಅಸೋಸಿಯೇಟ್ಸ್ ಕಂಪನಿಯ ಹೆಸರಿನಲ್ಲಿ ಸಂದೇಶ ಬಂದಿತ್ತು. ಗೂಗಲ್ ರಿವ್ಯೂ ನೀಡಿದರೆ ಹಣ ನೀಡುವುದಾಗಿ ವಂಚಕರು ನಂಬಿಸಿದ್ದರು. ಜಗದೀಶನ್ ಅವರು ರಿವ್ಯೂ ನೀಡಿದ್ದಕ್ಕೆ ಆರಂಭದಲ್ಲಿ ₹2 ಸಾವಿರ ನೀಡಿದ್ದರು. ನಂತರ, ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ನೀಡುವುದಾಗಿ ನಂಬಿಸಿದ್ದರು. ಟೆಲಿಗ್ರಾಂ ಮೂಲಕ ಸೈಬರ್ ವಂಚಕರು ಕಳುಹಿಸಿದ್ದ ಬ್ಯಾಂಕ್ ಖಾತೆಗಳಿಗೆ ದೂರುದಾರ ಹಣ ಜಮೆ ಮಾಡಿದ್ದರು’ ಎಂದು ಪೊಲೀಸರು ಹೇಳಿದರು.
ರೆಸ್ಟೋರೆಂಟ್ ರಿವ್ಯೂ ಕೆಲಸಕ್ಕೆ ಸೇರಿಸಿಕೊಂಡು ಮೋಸ: ‘ಈಜೀಪುರದ ಖಾಸಗಿ ಕಂಪನಿ ಉದ್ಯೋಗಿ ಎಸ್.ರಮ್ಯಾ ಅವರಿಗೆ ಪ್ರಿಯಾ ಎಂಬುವರು ಕರೆ ಮಾಡಿ ಸೀ ವ್ಯಾಲಿ ಕಂಪನಿಯಲ್ಲಿ ರೆಸ್ಟೋರೆಂಟ್ ರಿವ್ಯೂ ಕೆಲಸ ಮಾಡುವಂತೆ ಕೇಳಿಕೊಂಡಿದ್ದರು. ಆಕೆಯ ಮಾತು ನಂಬಿದ್ದ ದೂರುದಾರೆ, ಟೆಲಿಗ್ರಾಂ ಗ್ರೂಪ್‌ಗೆ ಸೇರಿದ್ದರು. ಆರೋಪಿಗಳು ನೀಡಿದ್ದ ಟಾಸ್ಕ್ ಪೂರ್ಣಗೊಳಿಸಿ ಕೆಲಸ ಆರಂಭಿಸಿದ್ದರು. ಅದಾದ ಮೇಲೆ ದೂರುದಾರೆಯಿಂದ ₹12 ಲಕ್ಷ ಪಡೆದು ವಂಚಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ. ಈ ಪ್ರಕರಣದ ತನಿಖೆಯನ್ನೂ ಕೇಂದ್ರ ಸೈಬರ್ ಠಾಣೆಯ ಪೊಲೀಸರು ಆರಂಭಿಸಿದ್ದಾರೆ.
ಕೊಡುಗೆಯ ನೆಪ…
ಎಲೆಕ್ಟ್ರಾನಿಕ್ ಉಪಕರಣಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಾಗುವುದು ಎಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಜಾಹೀರಾತು ಪ್ರಕಟಿಸಿ ವಂಚನೆ ನಡೆಸಲಾಗುತ್ತಿದೆ. ಸ್ವದೇಶಿ ಇ-ಕಾರ್ಮಸ್ ಸಂಸ್ಥೆಗಳ ಹೆಸರಿನಲ್ಲೇ ಕಡಿಮೆ ಬೆಲೆಗೆ ವಸ್ತುಗಳನ್ನು ನೀಡಲಾಗುವುದು ಎಂಬುದಾಗಿ ವಂಚಕರು ಜಾಹೀರಾತು ನೀಡುತ್ತಾರೆ. ಸಾಮಾಜಿಕ ಜಾಲತಾಣಗಳ ಬಳಕೆದಾರರು ಜಾಹೀರಾತನ್ನು ನೈಜವೆಂದು ಭಾವಿಸಿ ಅದರ ಮೇಲೆ ಕ್ಲಿಕ್ಕಿಸಿದರೆ ವಿಳಾಸ ನಮೂದಿಸುವಂತೆ ಕೇಳುತ್ತದೆ. ಅದಾದ ಮೇಲೆ ಫೋನ್ ಪೇ ಗೂಗಲ್ ಪೇ ಮೂಲಕ ಮಾತ್ರವೇ ಹಣ ಪಾವತಿಸಬೇಕು. ‘ಕ್ಯಾಶ್ ಆನ್ ಡೆಲಿವರಿ’ ವ್ಯವಸ್ಥೆ ಇರುವುದಿಲ್ಲ. ಗೂಗಲ್ ಪೇ ಅಥವಾ ಫೋನ್ ಪೇ ಮೂಲಕ ಹಣ ಪಾವತಿಸಿದರೆ ಗ್ರಾಹಕರ ಬ್ಯಾಂಕ್ ಖಾತೆಯಿಂದ ಹಣ ಕಡಿತಗೊಳ್ಳುತ್ತದೆ. ಬುಕಿಂಗ್‌ಗೆ ಸಂಬಂಧಿಸಿದಂತೆ ಯಾವುದೇ ಸಂದೇಶ ಬರುವುದಿಲ್ಲ. ವಾರ ತಿಂಗಳು ಕಳೆದರೂ ಮನೆಗೂ ವಸ್ತುಗಳು ತಲುಪುತ್ತಿಲ್ಲ ಎಂದು ಹಣ ಕಳೆದುಕೊಂಡವರು ನೋವು ತೋಡಿಕೊಂಡಿದ್ದಾರೆ.
‘ಸ್ವದೇಶಿ ಇ-ಕಾಮರ್ಸ್ ಸಂಸ್ಥೆಗಳ ಹೆಸರಿನಲ್ಲಿ ವಂಚನೆ ಪ್ರಕರಣಗಳು ಹೆಚ್ಚಾಗಿವೆ. ಸೈಬರ್ ವಂಚಕರು ₹1350 ಬೆಲೆಯ ವಸ್ತುವನ್ನು ಕೇವಲ ₹299ಕ್ಕೆ ₹1500 ಬೆಲೆ ವಸ್ತುವನ್ನು ₹350ಕ್ಕೆ ನೀಡುವುದಾಗಿ ಜಾಹೀರಾತು ಪ್ರಕಟಿಸಿ ಸಾವಿರಾರು ಮಂದಿಗೆ ವಂಚಿಸಿದ್ದಾರೆ. ಸಣ್ಣ ಮೊತ್ತ ಕಳೆದುಕೊಂಡ ಕಾರಣಕ್ಕೆ ಗ್ರಾಹಕರೂ ದೂರು ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ’ ಎಂದು ಸೈಬರ್ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
63 ಖಾತೆಗಳಿಗೆ ಹಣ ಜಮೆ
‘ಸೈಬರ್ ವಂಚಕರು ಕಳಹಿಸಿದ್ದ ವಿವಿಧ ಬ್ಯಾಂಕ್‌ಗಳ 63 ಖಾತೆಗಳಿಗೆ ಜಗದೀಶನ್ ಅವರು ಹಣ ಜಮೆ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ವಂಚಕರು ₹36 ಸಾವಿರ ಮಾತ್ರ ವಾಪಸ್ ನೀಡಿ ವಂಚಿಸಿದ್ದಾರೆ’ ಎಂದು ಪೊಲೀಸರು ಹೇಳಿದರು.
