ಪೇರಳೆ ಹಣ್ಣು ಕದ್ದಿದ್ದಕ್ಕೆ ಬಾಲಕಿಗೆ ಕ್ರೂರ ಶಿಕ್ಷೆ; ವೀಡಿಯೋ ವೈರಲ್ ಬೆನ್ನಲ್ಲೇ ಆಕ್ರೋಶ

ಉನಾ : ತೋಟವೊಂದರಲ್ಲಿ ಪೇರಳೆ ಹಣ್ಣು ಕಳ್ಳತನ ಮಾಡಿದ ಎಂಬ ಕ್ಷುಲ್ಲಕ ಕಾರಣಕ್ಕಾಗಿ ಅಪ್ರಾಪ್ತ ಬಾಲಕಿಯ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿರುವ ಘೋರ ಘಟನೆ ನಡೆದಿದೆ. ಕೇವಲ ಹಣ್ಣು ಕಿತ್ತಿದ್ದಕ್ಕಾಗಿ ಬಾಲಕಿಯನ್ನು ಬಲವಂತವಾಗಿ ಮನೆಗೆ ಎಳೆದೊಯ್ದ ಆರೋಪಿಯು, ಆಕೆಯನ್ನು ಮೆಟ್ಟಿಲುಗಳಿಗೆ ಸರಪಳಿಯಿಂದ ಕಟ್ಟಿಹಾಕಿ ಅತ್ಯಂತ ಕ್ರೂರವಾಗಿ ನಡೆಸಿಕೊಂಡಿದ್ದಾನೆ. ಈ ಭೀಕರ ಕೃತ್ಯವನ್ನು ಮರ್ಚೆಂಟ್ ನೇವಿಯಲ್ಲಿ ಕೆಲಸ ಮಾಡುವ ಯುವಕನೊಬ್ಬ ತನ್ನ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ವೀಡಿಯೋದಲ್ಲಿ ಬಾಲಕಿ ತನ್ನನ್ನು ಬಿಡುವಂತೆ ಹಾಗೂ ಪ್ರಾಣ ಉಳಿಸುವಂತೆ ಗೋಳಾಡುತ್ತಿರುವ ದೃಶ್ಯ ಎಂತಹವರ ಮನಕಲಕುವಂತಿದೆ.

ವೀಡಿಯೋ ಚಿತ್ರೀಕರಿಸುವ ಸಂದರ್ಭದಲ್ಲಿ ಯುವಕನು ಈ ಅಮಾನವೀಯ ನಡೆಯನ್ನು ಪ್ರಶ್ನಿಸಿದಾಗ, ಆರೋಪಿಯು ಕಿಂಚಿತ್ತೂ ಪಶ್ಚಾತ್ತಾಪವಿಲ್ಲದೆ ತನ್ನ ಕೃತ್ಯವನ್ನು ಸಮರ್ಥಿಸಿಕೊಳ್ಳಲು ಯತ್ನಿಸಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್ ಆದ ಬೆನ್ನಲ್ಲೇ ಮಕ್ಕಳ ಸಹಾಯವಾಣಿ ಮತ್ತು ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಸ್ಥಳಕ್ಕೆ ಧಾವಿಸಿದ್ದಾರೆ.
ಅಧಿಕಾರಿಗಳ ಮಧ್ಯಪ್ರವೇಶದ ನಂತರ ಆರೋಪಿಯು ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಸದ್ಯ ಆತನ ವಿರುದ್ಧ ಗಂಭೀರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪೊಲೀಸರು ಘಟನೆಯ ಕುರಿತು ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದಾರೆ.