ಪಬ್ನಲ್ಲಿ ಶುರುವಾದ ಕಿರಿಕಿರಿ ನಡುರಸ್ತೆಗೆ ಶಿಫ್ಟ್: ಯುವತಿಯರ ರೌದ್ರಾವತಾರಕ್ಕೆ ಬೆಚ್ಚಿಬಿದ್ದ ಸಾರ್ವಜನಿಕರು

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಕೋರಮಂಗಲದಲ್ಲಿ ಹೈಡ್ರಾಮಾವೊಂದು ನಡೆದಿದೆ. ಯುವಕನೊಬ್ಬ ತಮಗೆ ಕಿರಿಕಿರಿ ನೀಡಿದ್ದಾನೆ ಎಂದು ಆರೋಪಿಸಿ ಇಬ್ಬರು ಯುವತಿಯರು ಆತನಿಗೆ ನಡುರಸ್ತೆಯಲ್ಲೇ ಪೊಲೀಸರೆದುರೇ ಮನಬಂದಂತೆ ಹೊಡೆದ ಘಟನೆ ಬೆಳಕಿಗೆ ಬಂದಿದೆ. ಪಬ್ವೊಂದರ ಒಳಗೆ ಯುವಕ ತಮಗೆ ತೊಂದರೆ ನೀಡಿದ್ದಾನೆ ಎಂದು ಆಕ್ರೋಶಗೊಂಡ ಯುವತಿಯರು, ಆತನನ್ನು ರಸ್ತೆಗೆ ಎಳೆದು ತಂದು ಹಲ್ಲೆ ಮಾಡಿದ್ದಾರೆ. ಸ್ಥಳದಲ್ಲಿದ್ದ ಪೊಲೀಸರು ಯುವತಿಯರನ್ನು ತಡೆಯಲು ಪ್ರಯತ್ನಿಸಿ, ‘ಹೊಡೆಯಬೇಡಿ, ಠಾಣೆಗೆ ಬಂದು ದೂರು ನೀಡಿ’ ಎಂದು ಎಷ್ಟೇ ಮನವಿ ಮಾಡಿದರೂ ಕೇಳದ ಯುವತಿಯರು ಪೊಲೀಸರ ಎದುರಲ್ಲೇ ಯುವಕನಿಗೆ ಹೊಡೆದಿದ್ದಾರೆ.
ಈ ಘಟನೆಯ ದೃಶ್ಯಗಳನ್ನು ಸ್ಥಳೀಯರು ಮೊಬೈಲ್ನಲ್ಲಿ ಸೆರೆಹಿಡಿದಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ. ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಾರ್ವಜನಿಕರು ಈ ಹೈಡ್ರಾಮಾವನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಎರಡೂ ಕಡೆಯವರಿಗೂ ಪೊಲೀಸರು ದೂರು ನೀಡುವಂತೆ ಸೂಚಿಸಿದರೂ, ಈವರೆಗೆ ದೂರು ನೀಡಲು ಮುಂದೆ ಬಂದಿಲ್ಲ ಎಂದು ತಿಳಿದುಬಂದಿದೆ. ಸದ್ಯ ವೈರಲ್ ವಿಡಿಯೋ ಆಧಾರದ ಮೇಲೆ ಕೋರಮಂಗಲ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
