ಸಿನಿಮಾ ಥರದ ಮದುವೆ ಕತೆ: 10 ಗಂಡಸರ ಭವಿಷ್ಯ ಹಾಳು ಮಾಡಿದ ಖತರ್ನಾಕ್ ಮಹಿಳೆ

ಎರ್ನಾಕುಲಂ: ಆನ್‌ಲೈನ್‌ನಲ್ಲಿ ಮದುವೆ ಜಾಹೀರಾತು ನೀಡಿ ವಿವಿಧ ಜಿಲ್ಲೆಗಳಲ್ಲಿ ಹತ್ತು ಗಂಡಸರನ್ನು ಮದುವೆಯಾದ ಖತರ್ನಾಕ್ ಮಹಿಳೆಯನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.
ಎರ್ನಾಕುಲಂನ ಕಾಂಜಿರಾಮಟ್ಟಂ ಮೂಲದ ರೇಷ್ಮಾ ಬಂಧಿತ ಮಹಿಳೆ. ಈಕೆ ಎರಡು ವರ್ಷದ ಮಗುವಿನ ತಾಯಿ ಕೂಡ ಹೌದು.
ನಿನ್ನೆ ಬೆಳಗ್ಗೆ ಮದುವೆಗೆ ಸಿದ್ಧತೆ ನಡೆಸುತ್ತಿದ್ದ ರೇಷ್ಮಾಳನ್ನು ಆರ್ಯನಾಡ್ ಪೊಲೀಸರು ಬಂಧಿಸಿದ್ದಾರೆ. ರೇಷ್ಮಾ, ಸಿನಿಮಾದ ಕತೆಗಳಿಗೆ ಹೋಲುವ ಕತೆಗಳನ್ನು ಸೃಷ್ಟಿಸಿ, ವಿವಿಧ ಜಿಲ್ಲೆಗಳಲ್ಲಿ ಹತ್ತು ಪುರುಷರನ್ನು ನಂಬಿಸಿ ಮದುವೆಯಾಗಿ ವಂಚನೆ ಮಾಡಿದ್ದಾಳೆ.
ನಿನ್ನೆ ಬೆಳಿಗ್ಗೆ ರೇಷ್ಮಾಳನ್ನು ಆಕೆಯ ಭಾವಿ ಗಂಡ ಹಾಗೂ ಪಂಚಾಯತಿ ಸದಸ್ಯ ನೀಡಿದ ದೂರಿನ ಆಧಾರದ ಮೇರೆಗೆ ಆರ್ಯನಾಡ್ ಪೊಲೀಸರು ಬಂಧಿಸಿದರು. ರೇಷ್ಮಾ ಮತ್ತೊಂದು ವಿವಾಹ ವಂಚನೆ ಮಾಡಿದ ನಂತರ ಮದುವೆಯಾಗಲು ಆರ್ಯನಾಡ್‌ಗೆ ಬಂದಿದ್ದಳು ಮತ್ತು ಮುಂದಿನ ತಿಂಗಳು ತಿರುವನಂತಪುರಂನಿಂದ ಬೇರೊಬ್ಬರನ್ನು ಮದುವೆಯಾಗಲು ಪ್ಲಾನ್ ಮಾಡುತ್ತಿದ್ದಳು. ಅಷ್ಟರಲ್ಲಿ ಆಕೆಯ ಬಂಡವಾಳ ಬಯಲಾಗಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ.
ರೇಷ್ಮಾ 45 ದಿನಗಳ ಹಿಂದೆ ಬೇರೊಬ್ಬರನ್ನು ಮದುವೆಯಾಗಿ ವಂಚನೆ ಮಾಡಿದ್ದಳು. ರೇಷ್ಮಾಳ ವರ್ತನೆಯ ಬಗ್ಗೆ ಅನುಮಾನ ಬಂದ ನಂತರ, ಪಂಚಾಯತಿ ಸದಸ್ಯ ಮತ್ತು ಸಂಬಂಧಿಕರೊಬ್ಬರು ರೇಷ್ಮಾಳ ಬ್ಯಾಗ್ ಪರಿಶೀಲಿಸಿದಾಗ ವಂಚನೆ ಬೆಳಕಿಗೆ ಬಂದಿದೆ. ಮದುವೆಗೆ ಕೆಲವು ಗಂಟೆಗಳ ಮೊದಲು, ರೇಷ್ಮಾ ಬ್ಯೂಟಿ ಪಾರ್ಲರ್‌ಗೆ ಪ್ರವೇಶಿಸಿದಾಗ ಪಂಚಾಯತತಿ ಸದಸ್ಯ ಅಥವಾ ಭಾವಿ ಪತಿ ಆಕೆಯ ಬ್ಯಾಗ್ ಪರಿಶೀಲಿಸಿದರು. ಪರಿಶೀಲನೆಯ ಸಮಯದಲ್ಲಿ, ಆಕೆಯ ಹಿಂದಿನ ಮದುವೆಯ ದಾಖಲೆಗಳು ಸಹ ಕಂಡುಬಂದಿವೆ.
ಮದುವೆ ಜಾಹೀರಾತಿನಲ್ಲಿ ಪಂಚಾಯತಿ ಸದಸ್ಯ ನೋಂದಾಯಿಸಿದ್ದ ಫೋನ್ ಸಂಖ್ಯೆಗೆ ಮೇ 29ರಂದು ಮೊದಲ ಕರೆ ಬಂದಿತು. ಯುವತಿಯ ತಾಯಿ ಎಂದು ಪರಿಚಯಿಸಿಕೊಂಡ ಮಹಿಳೆ, ರೇಷ್ಮಾಳ ಫೋನ್ ಸಂಖ್ಯೆಯನ್ನು ಯುವಕನಿಗೆ ನೀಡಿದ್ದಳು. ನಂತರ, ಇಬ್ಬರೂ ಪರಸ್ಪರ ಮಾತನಾಡಿದರು. ಜೂನ್ 4 ರಂದು, ಇಬ್ಬರೂ ಕೊಟ್ಟಾಯಂನ ಮಾಲ್‌ನಲ್ಲಿ ಭೇಟಿಯಾಗಿ ಪರಸ್ಪರ ಮಾತನಾಡಿದರು. ಈ ವೇಳೆ ರೇಷ್ಮಾ, ತಾನು ದತ್ತು ಪುತ್ರಿ ಮತ್ತು ನನ್ನ ತಾಯಿಗೆ ಮದುವೆ ಮಾಡಲು ಇಷ್ಟವಿಲ್ಲ. ಹೀಗಾಗಿ ಸದಾ ನನಗೆ ಕಿರುಕುಳ ನೀಡುತ್ತಿದ್ದಾಳೆ ಎಂದು ಕತೆ ಕಟ್ಟಿದ್ದಳು.
ಇದನ್ನು ನಂಬಿದ ಪಂಚಾಯಿತಿ ಸದಸ್ಯ, ಶೀಘ್ರದಲ್ಲೇ ಮದುವೆಯಾಗುವುದಾಗಿ ಆಕೆಗೆ ಭರವಸೆ ನೀಡಿದ್ದ. ಮೇ 5 ರ ಸಂಜೆ, ರೇಷ್ಮಾಳನ್ನ ತಿರುವನಂತಪುರದ ವೆಂಪಯಂಗೆ ಕರೆದೊಯ್ದು ತನ್ನ ಸ್ನೇಹಿತನ ಮನೆಯಲ್ಲಿ ಇರಿಸಿಕೊಂಡಿದ್ದ. ಈ ಮಧ್ಯೆ, ರೇಷ್ಮಾಳ ವರ್ತನೆ ಅನುಮಾನ ಮೂಡಿಸಿದ್ದು, ನಂತರ, ಆಕೆಯ ಬ್ಯಾಗ್ ಪರಿಶೀಲಿಸಿದಾಗ ಅಸಲಿ ವಿಚಾರ ಗೊತ್ತಾಗಿದೆ. ಬಳಿಕ ಪೊಲೀಸರಿಗೆ ದೂರು ನೀಡಲಾಯಿತು. ಸದ್ಯ ಆಕೆಯನ್ನು ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.