ಚೀನಾ ಗಡಿ ವಿವಾದವೇ ಭಾರತದ ಅತಿದೊಡ್ಡ ಸವಾಲು : ಸಿಡಿಎಸ್

ನವದೆಹಲಿ:ಚೀನ ಗಡಿ ವಿವಾದ ಭಾರತದ ಅತಿದೊಡ್ಡ ಸವಾಲಾಗಿದ್ದು, ಅದು ಹಾಗೆಯೇ ಉಳಿಯುತ್ತದೆ ಎಂದು ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಜನರಲ್ ಅನಿಲ್ ಚೌಹಾಣ್ ಶುಕ್ರವಾರ ಅಭಿಪ್ರಾಯ ಹೊರ ಹಾಕಿದ್ದಾರೆ.

ವ್ಯಾಪಾರ ಮತ್ತು ಸುಂಕದ ವಿಷಯಗಳಲ್ಲಿ ಅಮೆರಿಕದೊಂದಿಗಿನ ಸಂಬಂಧಗಳು ಕುಸಿದು ಭಾರತವು ಚೀನದೊಂದಿಗೆ ಸ್ನೇಹ ಬೆಳೆಸಿಕೊಳ್ಳುತ್ತಿರುವ ವೇಳೆ ಜನರಲ್ ಅನಿಲ್ ಚೌಹಾಣ್ ಅವರ ಈ ಹೇಳಿಕೆಗಳು ಬಂದಿವೆ.
ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಜನರಲ್ ಚೌಹಾಣ್, ಭಾರತದ ವಿರುದ್ಧ ಪಾಕಿಸ್ಥಾನದ ಪ್ರಾಕ್ಸಿ ಯುದ್ಧವನ್ನು ಇನ್ನೊಂದು ಪ್ರಮುಖ ವಿಷಯವೆಂದು ಪಟ್ಟಿ ಮಾಡಿದರು.
“ದೇಶಗಳ ಮುಂದಿರುವ ಸವಾಲುಗಳು ಕ್ಷಣಿಕವಲ್ಲ. ಅವು ವಿಭಿನ್ನ ರೂಪಗಳಲ್ಲಿ ಅಸ್ತಿತ್ವದಲ್ಲಿವೆ. ಚೀನಾದೊಂದಿಗಿನ ಗಡಿ ವಿವಾದವು ಭಾರತದ ಅತಿದೊಡ್ಡ ಸವಾಲು ಎಂದು ನಾನು ಭಾವಿಸುತ್ತೇನೆ ಮತ್ತು ಅದು ಹಾಗೆಯೇ ಮುಂದುವರಿಯುತ್ತದೆ. ನಮ್ಮ ಎರಡೂ ಎದುರಾಳಿಗಳು ಪರಮಾಣು ಶಕ್ತಿಗಳು, ಮತ್ತು ನಾವು ಅವರ ವಿರುದ್ಧ ಯಾವ ರೀತಿಯ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಬಯಸುತ್ತೇವೆ ಎಂಬುದನ್ನು ನಿರ್ಧರಿಸುವುದು ಯಾವಾಗಲೂ ಒಂದು ಸವಾಲಾಗಿ ಉಳಿಯುತ್ತದೆ” ಎಂದು ಹೇಳಿದರು.