ರೈಲು ಮತ್ತು ಪ್ಲಾಟ್‌ಫಾರ್ಮ್ ಮಧ್ಯೆ ಬಿದ್ದ ಮಗು; ಮಗನ ಪ್ರಾಣ ಉಳಿಸಲು ಚಲಿಸುವ ರೈಲಿನಡಿ ಹಾರಿದ ಸಾಹಸಿ ತಂದೆ!

ಬಾಂಗ್ಲಾದೇಶ: ವ್ಯಕ್ತಿಯೊಬ್ಬರು ಚಲಿಸುತ್ತಿರುವ ರೈಲು-ಪ್ಲಾಟ್‌ಫಾರ್ಮ್ ಮಧ್ಯೆ ಬಿದ್ದ ತಮ್ಮ ಮಗುವನ್ನು ರಕ್ಷಿಸಿ ಹೀರೋ ಎನಿಸಿಕೊಂಡಿದ್ದಾರೆ. ಬಾಂಗ್ಲಾದೇಶದ ಕಿಶೋರ್‌ಗಂಜ್‌ನ ಭೈರಬ್ ರೈಲು ನಿಲ್ದಾಣದಲ್ಲಿ ಏಪ್ರಿಲ್ 28 ರಂದು ಮಧ್ಯಾಹ್ನ 3.30 ರ ಸುಮಾರಿಗೆ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಢಾಕಾಗೆ ಹೋಗುವ ಟೈಟಾಸ್ ಕಮ್ಯೂಟರ್ ರೈಲು ನಿಲ್ದಾಣದಿಂದ ಚಲಿಸಲು ಪ್ರಾರಂಭಿಸಿದಾಗ, ಇಳಿಯಲು ಆತುರಪಟ್ಟ ತಂದೆಯ ಕೈಯಿಂದ ಒಂದು ವರ್ಷದ ಮಗು ಜಾರಿ ರೈಲು ಮತ್ತು ಪ್ಲಾಟ್‌ಫಾರ್ಮ್ ನಡುವಿನ ಕಿರಿದಾದ ಅಂತರಕ್ಕೆ ಬಿದ್ದಿತ್ತು.
ಕ್ಷಣಾರ್ಧವೂ ವಿಳಂಬ ಮಾಡದ ತಂದೆ, ತನ್ನ ಮಗುವನ್ನು ರಕ್ಷಿಸಲು ಚಲಿಸುವ ರೈಲಿನ ಕೆಳಗೆ ಹಾರಿದರು. ಮಗುವನ್ನು ಗಟ್ಟಿಯಾಗಿ ಅಪ್ಪಿಕೊಂಡ ಅವರು ಪ್ಲಾಟ್‌ಫಾರ್ಮ್‌ನ ಗೋಡೆಗೆ ಒರಗಿ ಮಲಗಿದರು. ಚಲಿಸುವ ರೈಲಿನ ಬೋಗಿಗಳು ಅವರ ಮೇಲೆಯೇ ಹಾದುಹೋದರೂ, ತಂದೆಯ ಸಮಯಪ್ರಜ್ಞೆಯಿಂದ ಇಬ್ಬರೂ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದರು. ರೈಲು ಸಂಪೂರ್ಣವಾಗಿ ಹಾದುಹೋದ ನಂತರ, ಅಲ್ಲಿದ್ದ ಜನರು ಮತ್ತು ಮಗುವಿನ ತಾಯಿ ಹಳಿಗಳ ಮೇಲೆ ಇಳಿದು ಮಗುವನ್ನು ಸುರಕ್ಷಿತವಾಗಿ ಮೇಲೆತ್ತಿಕೊಂಡರು. ಮಗು ಗಾಯಗಳಿಲ್ಲದೆ ಪಾರಾಗಿದ್ದು, ಈ ಎದೆನಡುಗಿಸುವ ದೃಶ್ಯಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
