ಚಂಡೀಗಢ: ಪಂಜಾಬ್ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿಗೆ ಕ್ಲೀನ್ ಸ್ವೀಪ್ ಬಿಗ್ ವಿಕ್ಟರಿ!

ಚಂಡೀಗಢ: ಮುಂದಿನ ವರ್ಷದ ಪಂಜಾಬ್ ವಿಧಾನಸಭಾ ಚುನಾವಣೆಗೆ ಮುನ್ನ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಆಡಳಿತಾರೂಢ ಆಮ್ ಆದ್ಮಪಾರ್ಟಿ ಭರ್ಜರಿ ಜಯ ಗಳಿಸಿದೆ. ಚುನಾವಣಾ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ಶೇಕಡ 50ರಷ್ಟು ಅಂದರೆ ಸುಮಾರು 950 ವಾರ್ಡ್ ಗಳಲ್ಲಿ ಅರವಿಂದ್ ಕೇಜ್ರವಾಲ್ ನೇತೃತ್ವದ ಪಕ್ಷ ಜಯ ಸಾಧಿಸಿದೆ. ಎಂಟು ಮಹಾನಗರ ಪಾಲಿಕೆಗಳ ಪೈಕಿ ಮೊಹಾಲಿ, ಬಟಿಂಡಾ, ಬರ್ನಾಲಾ, ಮೋಗಾ ಮತ್ತು ಬಟಾಲಾ ಹೀಗೆ ಐದನ್ನು ಆಮ್ ಆದ್ಮತೆಕ್ಕೆಗೆ ಹಾಕಿಕೊಂಡಿದ್ದರೆ, ಅಬೋಹಾರ್ ಮತ್ತು ಪಠಾಣ್ ಕೋಟ್ ನಲ್ಲಿ ಬಿಜೆಪಿ, ಕಪುರ್ತಾಲಾದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ.

ಒಟ್ಟು 390 ವಾರ್ಡ್ ಗಳಲ್ಲಿ ಜಯ ಗಳಿಸಿರುವ ಕಾಂಗ್ರೆಸ್ ಎರಡನೇ ಸ್ಥಾನ ಗಳಿಸಿದ್ದರೆ, ಶಿರೋಮಣಿ ಅಕಾಲಿದಳ 191 ಹಾಗೂ ಬಿಜೆಪಿ 170 ವಾರ್ಡ್ ಗಳಲ್ಲಿ ಗೆದ್ದಿವೆ. ಅಚ್ಚರಿಯ ವಿಷಯವೆಂದರೆ 251 ವಾರ್ಡ್ ಗಳನ್ನು ಗೆದ್ದಿರುವ ಪಕ್ಷೇತರರು ಸ್ಥಾನ ಗಳಿಕೆಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಒಂಬತ್ತು ತಿಂಗಳ ಒಳಗೆ ವಿಧಾನಸಭಾ ಚುನಾವಣೆ ನಡೆಯಲಿದ್ದು, ಬಹುತೇಕ ಮಹಾನಗರ ಪಾಲಿಕೆ, ನಗರಸಭೆ ಮತ್ತು ನಗರ ಪಂಚಾಯ್ತಿಗಳಲ್ಲಿ ಆಮ್ ಆದ್ಮ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ.
“ಇದು ಉಚಿತ ವಿದ್ಯುತ್, ಆಮ್ ಆದ್ಮ ಕ್ಲಿನಿಕ್ ಗಳು, ಒಳ್ಳೆಯ ಶಾಲೆ ಮತ್ತು ಉದ್ಯೋಗದಲ್ಲಿ ಪಾರದರ್ಶಕತೆಯ ಕ್ರಮಗಳಿಗೆ ಸಂದ ವಿಜಯ. ವಿಭಜನಕಾರಿ ರಾಜಕೀಯವನ್ನು ಪಂಜಾಬ್ ಸೋಲಿಸಿದೆ” ಎಂದು ಭಗವಂತ ಮಾನ್ ಎಕ್ಸ್ ಪೋಸ್ಟ್ ನಲ್ಲಿ ಹೇಳಿದ್ದಾರೆ.
“ಪಂಜಾಬ್ ಜನತೆ “ಈಡಿ ಪಾರ್ಟಿ”ಯನ್ನು ನಿರ್ಮೂಲನೆ ಮಾಡಿದ್ದಾರೆ ಹಾಗೂ ಭಗವಂತ್ ಮಾನ್ ಅವರ ಒಳ್ಳೆಯ ಕೆಲಸಗಳನ್ನು ಪ್ರೋತ್ಸಾಹಿಸಿದ್ದಾರೆ” ಎಂದು ಪಕ್ಷದ ಸಂಚಾಲಕ ಅರವಿಂದ್ ಕೇಜ್ರವಾಲ್ ಅಭಿಪ್ರಾಯಪಟ್ಟಿದ್ದಾರೆ.
ಮೊಹಾಲಿಯಲ್ಲಿ ಮಾತ್ರ ಆಮ್ ಆದ್ಮ ಪಕ್ಷ ನಿಕಟ ಸ್ಪರ್ಧೆ ಎದುರಿಸಿದ್ದರೆ, ಉಳಿದ ನಾಲ್ಕು ಮಹಾನಗರ ಪಾಲಿಕೆಗಳಲ್ಲಿ ಭರ್ಜರಿ ಗೆಲುವು ಸಾಧಿಸಿದೆ. 2017 ಮತ್ತು 2022ರ ಹೀನಾಯ ಸೋಲಿನ ಬಳಿಕ ಚೇತರಿಸಿಕೊಳ್ಳುವ ಪ್ರಯತ್ನದಲ್ಲಿರುವ ಶಿರೋಮಣಿ ಅಕಾಲಿದಳ ತನ್ನ ಭದ್ರಕೋಟೆಯಾದ ಬಟಿಂಡಾ ಜಿಲ್ಲೆಯಲ್ಲಿ ಕೆಲ ವಿಭಾಗಗಳನ್ನು ಗೆದ್ದಿದ್ದರೂ ಮಹಾನಗರ ಪಾಲಿಕೆಯ 50 ವಾರ್ಡ್ ಗಳ ಪೈಕಿ ಮೂರನ್ನು ಮಾತ್ರ ಗೆದ್ದಿದೆ.