ಬುರ್ಖಾ ಧರಿಸಿ ಕಂಪ್ಯೂಟರ್ ಅಂಗಡಿ ಲೂಟಿ ಮಾಡಿದ್ದ ಖತರ್ನಾಕ್ ತಂದೆ-ಮಗನ ಬಂಧನ

ಬೆಂಗಳೂರು: ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಬುರ್ಖಾ ಹಾಕಿಕೊಂಡು ಕಂಪ್ಯೂಟರ್ ಅಂಗಡಿ ಒಡೆದು ಕಂಪ್ಯೂಟರ್ ಬಿಡಿಭಾಗಗಳನ್ನು ಕಳವು ಮಾಡಿದ್ದ ಅಪ್ಪ-ಮಗನನ್ನು ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಾಗವಾರ ನಿವಾಸಿ ಮಂಜುನಾಥ್ (49) ಮತ್ತು ಈತನ ಪುತ್ರ ಹೇಮಂತ್ (22) ಬಂಧಿತರು. ಆರೋಪಿಗಳಿಂದ 80 ಲಕ್ಷ ರೂ.ಮೌಲ್ಯದ ಕಂಪ್ಯೂಟರ್ ಬಿಡಿ ಭಾಗಗಳು ಹಾಗೂ 2.29 ಲಕ್ಷ ರೂ. ನಗದು ಜಪ್ತಿ ಮಾಡಲಾಗಿದೆ. ಆರೋಪಿಗಳು ಮಾ.14ರಂದು ರಘು ಎಂಬವರ ಕಂಪ್ಯೂಟರ್ ಅಂಗಡಿಯಲ್ಲಿ ಕಳ್ಳತನ ಮಾಡಿದ್ದರು. ಆರೋಪಿ ಮಂಜುನಾಥ್ ನಾಗವಾರದಲ್ಲಿ ಸ್ವಂತ ಮನೆ ಹೊಂದಿದ್ದು, ಕೆಲ ಮನೆಗಳನ್ನು ಬಾಡಿಗೆಗೆ ನೀಡಿದ್ದಾರೆ.
ದೂರುದಾರ ತಮಿಳುನಾಡು ಮೂಲದ ರಘು, ಮಂಜುನಾಥ್ ಅವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಬಳಿಕ ನಾಗವಾರದಲ್ಲಿ ಟಿ.ಚೆನ್ನಯ್ಯ ಲೇಔಟ್ನಲ್ಲೇ ಸ್ವಂತ ಮನೆ ಹೊಂದಿದರಲ್ಲದೆ ಹಾಗೂ ಎಚ್ ಬಿಆರ್ ಲೇಔಟ್ನಲ್ಲಿ ಕಂಪ್ಯೂಟರ್ ರಿಪೇರಿ ಅಂಗಡಿ ನಡೆಸುತ್ತಿದ್ದ. ಕಳೆದ ವರ್ಷ ಹೇಮಂತ್ನನ್ನು ತಮ್ಮ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಸಿಕೊಂಡಿದ್ದರು. ಸರಿಯಾಗಿ ಕೆಸಲ ಮಾಡದ್ದರಿಂದ ತಿಂಗಳ ಹಿಂದೆ ತೆಗೆದು ಹಾಕಿದ್ದರಿಂದ ಕೋಪಗೊಂಡಿದ್ದ. ತಂದೆ ಮಂಜುನಾಥ್ ಜತೆ ಸೇರಿ ಇಬ್ಬರು ಬುರ್ಖಾ ಧರಿಸಿಕೊಂಡು ಬಂದು ಕಂಪ್ಯೂಟರ್ ಅಂಗಡಿಯ ಬೀಗ ಒಡೆದು, ಕಳ್ಳತನ ಮಾಡಿದ್ದರು. ರಘು ನೀಡಿದ್ದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
