ಮಂಗಳೂರು: ಶ್ರೀನಿವಾಸ ವಿವಿಯಲ್ಲಿ ಬಿಬಿಎ ವಿದ್ಯಾರ್ಥಿಗಳ ಮೇಲೆ ಅಮಾನುಷ ರ‍್ಯಾಗಿಂಗ್ – ಅಪಹರಿಸಿ, ಬೆಲ್ಟ್ ಹಾಗೂ ಹ್ಯಾಂಗರ್‌ನಿಂದ ಹ*ಲ್ಲೆ!

ಮಂಗಳೂರು: ನಗರದ ಪಾಂಡೇಶ್ವರದಲ್ಲಿರುವ ಶ್ರೀನಿವಾಸ ವಿಶ್ವವಿದ್ಯಾಲಯದ (Srinivas University) ಬಿಬಿಎ ಪೋರ್ಟ್ ಶಿಪ್ಪಿಂಗ್ ಲಾಜಿಸ್ಟಿಕ್ಸ್ ವಿಭಾಗದ ವಿದ್ಯಾರ್ಥಿಗಳು ಹಾಗೂ ಅವರ ಸ್ನೇಹಿತರ ಮೇಲೆ ಹಿರಿಯ ವಿದ್ಯಾರ್ಥಿಗಳ ಗುಂಪೊಂದು ಅಮಾನುಷವಾಗಿ ರ‍್ಯಾಗಿಂಗ್ ನಡೆಸಿ, ಕೊಲೆ ಬೆದರಿಕೆಯೊಡ್ಡಿರುವ ತಡವಾಗಿ ಬೆಳಕಿಗೆ ಬಂದಿದೆ. ಸಂತ್ರಸ್ತ ವಿದ್ಯಾರ್ಥಿ ನೀಡಿದ ದೂರಿನನ್ವಯ ಮಂಗಳೂರು ನಗರ ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಕೇರಳದ ತ್ರಿಶೂರ್ ಮೂಲದ 19 ವರ್ಷದ ಪ್ರಥಮ ವರ್ಷದ ಬಿಬಿಎ ವಿದ್ಯಾರ್ಥಿ ಹಾಗೂ ಅವರ ಸಹಪಾಠಿ ಈ ಅಮಾನುಷ ರ‍್ಯಾಗಿಂಗ್‌ಗೆ ಒಳಗಾದವರಾಗಿದ್ದಾರೆ.ಪೋಲಿಸ್ ಕಮಿಷನರ್ ನೀಡಿದ ಮಾಹಿತಿಯಂತೆ, ಸೆಪ್ಟೆಂಬರ್ 19 ರಂದು ಮಧ್ಯಾಹ್ನ ಸಂತ್ರಸ್ತ ವಿದ್ಯಾರ್ಥಿಗಳು ಕಾಲೇಜಿನ ಹೊರಗೆ ನಡೆದುಕೊಂಡು ಹೋಗುತ್ತಿದ್ದಾಗ ಅಡ್ಡಗಟ್ಟಿದ ಸೀನಿಯರ್ಸ್ ಗುಂಪು, ಅವರನ್ನು ಬಲವಂತವಾಗಿ ಬೈಕ್‌ನಲ್ಲಿ ಅಪಹರಿಸಿಕೊಂಡು ಹೋಗಿದೆ. ಬಳಿಕ ನಿರ್ಜನ ಮನೆಯೊಂದರ ಕೊಠಡಿಯಲ್ಲಿ ಕೂಡಿಹಾಕಿ ಹೊರಗಿನಿಂದ ಲಾಕ್ ಮಾಡಿದ್ದಾರೆ. ಕೊಠಡಿಯಲ್ಲಿ ಇಬ್ಬರೂ ಜೂನಿಯರ್ ವಿದ್ಯಾರ್ಥಿಗಳ ಬಟ್ಟೆಗಳನ್ನು ಬಿಚ್ಚಿಸಿ ಕೇವಲ ಚಡ್ಡಿಯಲ್ಲಿ ನಿಲ್ಲಿಸಿದ ಆರೋಪಿಗಳು, ಅವರು ಚೀರದಂತೆ ಬಾಯಿಗೆ ಬಟ್ಟೆ ತುರುಕಿದ್ದಾರೆ. ನಂತರ ಬೆಲ್ಟ್ ಹಾಗೂ ಹ್ಯಾಂಗರ್‌ಗಳಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
