ವಾರಣಾಸಿ ಕಾಲೇಜಿನಲ್ಲಿ ಹಾಡಹಗಲೇ ಶೂಟೌಟ್: ಅಸೈನ್‌ಮೆಂಟ್ ಸಲ್ಲಿಸಲು ನಿಂತಿದ್ದ ಬಿಎಸ್‌ಸಿ ವಿದ್ಯಾರ್ಥಿಯ ಭೀಕರ ಹ*ತ್ಯೆ

ವಾರಣಾಸಿಯ ಉದಯ್ ಪ್ರತಾಪ್ ಕಾಲೇಜಿನಲ್ಲಿ ಶುಕ್ರವಾರ ಮಧ್ಯಾಹ್ನ ನೂರಾರು ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಸಮ್ಮುಖದಲ್ಲೇ ಪದವಿಪೂರ್ವ ವಿದ್ಯಾರ್ಥಿಯೊಬ್ಬನನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದೆ. ಮೃತನನ್ನು ಘಾಜಿಪುರ ಜಿಲ್ಲೆಯ ನಿವಾಸಿ ಹಾಗೂ ಬಿಎಸ್ಸಿ ನಾಲ್ಕನೇ ಸೆಮಿಸ್ಟರ್ ವಿದ್ಯಾರ್ಥಿ ಸೂರ್ಯ ಪ್ರತಾಪ್ ಸಿಂಗ್ ಎಂದು ಗುರುತಿಸಲಾಗಿದೆ. ಸಮಾಜ ವಿಜ್ಞಾನ ವಿಭಾಗದಲ್ಲಿ ಅಸೈನ್ಮೆಂಟ್ ಸಲ್ಲಿಸಲು ಸರದಿಯಲ್ಲಿ ನಿಂತಿದ್ದಾಗ, ಅದೇ ಕಾಲೇಜಿನ ವಿದ್ಯಾರ್ಥಿ ಮಂಜಿತ್ ಚೌಹಾಣ್ ಎಂಬಾತ ವಾಗ್ವಾದ ನಡೆಸಿ ಪಿಸ್ತೂಲ್‌ನಿಂದ ಗುಂಡು ಹಾರಿಸಿದ್ದಾನೆ. ಹಳೆಯ ದ್ವೇಷವೇ ಈ ಕೃತ್ಯಕ್ಕೆ ಕಾರಣ ಎನ್ನಲಾಗಿದ್ದು, ಘಟನೆ ಬಳಿಕ ಆರೋಪಿ ಪರಾರಿಯಾಗಿದ್ದಾನೆ. ಸದ್ಯ ಕಾಲೇಜು ಆವರಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ವಿದ್ಯಾರ್ಥಿಗಳ ಆಕ್ರೋಶದ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.
