ಬೊಲಿವಿಯಾ: ವಾಯುಪಡೆಯ ವಿಮಾನ ಪತನ; ಕನಿಷ್ಠ 15 ಮಂದಿ ಸಾ*ವು, 30ಕ್ಕೂ ಹೆಚ್ಚು ಜನರಿಗೆ ಗಾಯ

ಎಲ್ ಆಲ್ಲೊ : ದೇಶದ ಕೇಂದ್ರ ಬ್ಯಾಂಕ್ನಿಂದ ಹೊಸದಾಗಿ ಮುದ್ರಿತ ನೋಟುಗಳನ್ನು ಸಾಗಿಸುತ್ತಿದ್ದ ಬೊಲಿವಿಯನ್ ವಾಯುಪಡೆಯ ‘ಹರ್ಕ್ಯುಲಸ್ ವಿಮಾನವು ಶುಕ್ರವಾರ ಸಂಜೆ ಎಲ್ ಆಲ್ಲೊ ನಗರದ ಜನನಿಬಿಡ ರಸ್ತೆಯಲ್ಲಿ ಪತನಗೊಂಡ ಪರಿಣಾಮ ಕನಿಷ್ಠ 15 ಮಂದಿ ಮೃತಪಟ್ಟಿದ್ದು, 30 ಮಂದಿ ಗಾಯಗೊಂಡಿದ್ದಾರೆ.
ಎಲ್ ಆಲ್ಲೊ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪಕ್ಕದಲ್ಲಿರುವ ಜನನಿಬಿಡ ವಸತಿ ಪ್ರದೇಶದಲ್ಲಿ ಟೇಕ್ಆಫ್ ಆದ ಕೆಲವೇ ಕ್ಷಣಗಳಲ್ಲಿ ವಾಯುಪಡೆಯ ವಿಮಾನ ನಿಯಂತ್ರಣ ತಪ್ಪಿ ನೆಲಕ್ಕುರುಳಿತು. ವಿಮಾನ ಪತನವಾದ ತೀವ್ರತೆಗೆ ಅವಶೇಷಗಳು ರಸ್ತೆಯಾದ್ಯಂತ ಚದರಿಕೊಂಡಿದ್ದು, ಹಲವಾರು ವಾಹನಗಳು ಹಾನಿಗೊಳಗಾಗಿವೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಸ್ಥಳೀಯ ಆಡಳಿತದ ಪ್ರಕಾರ, ಘಟನೆ ನಡೆದ ಪ್ರದೇಶದಲ್ಲಿದ್ದ ನಾಗರಿಕರು ಹಾಗೂ ವಿಮಾನದಲ್ಲಿದ್ದ ಸಿಬ್ಬಂದಿ ಇಬ್ಬರೂ ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ಸಾಗಿಸಲಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಅಪಘಾತದ ನಿಖರ ಕಾರಣ ತಿಳಿದು ಬಂದಿಲ್ಲ. ಹವಾಮಾನ ಪರಿಸ್ಥಿತಿ ಹಾಗೂ ತಾಂತ್ರಿಕ ಅಂಶಗಳ ಪರಿಶೀಲನೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ಕುರಿತು ಸಮಗ್ರ ತನಿಖೆ ಆರಂಭಿಸಲಾಗಿದ್ದು, ವಿಮಾನದ ಬ್ಲಾಕ್ ಬಾಕ್ಸ್ ಮತ್ತು ಸಂಬಂಧಿತ ತಾಂತ್ರಿಕ ಮಾಹಿತಿಯನ್ನು ವಿಶ್ಲೇಷಿಸುವ ಪ್ರಕ್ರಿಯೆ ಮುಂದುವರಿದಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ದೃಶ್ಯಗಳು ಅಪಘಾತದ ಭೀಕರತೆಯನ್ನು ಪ್ರತಿಬಿಂಬಿಸಿವೆ. ಅವಶೇಷಗಳ ಸುತ್ತ ದೊಡ್ಡ ಸಂಖ್ಯೆಯಲ್ಲಿ ಜನರು ಜಮಾಯಿಸಿರುವುದು ಕಂಡುಬಂದಿದ್ದು, ನೆಲದ ಮೇಲೆ ಚದರಿದ ಕರೆನ್ಸಿ ನೋಟುಗಳನ್ನು ಕೆಲವರು ಎತ್ತಿಕೊಳ್ಳುತ್ತಿರುವ ದೃಶ್ಯಗಳೂ ವೈರಲ್ ಆಗಿವೆ. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಜನರನ್ನು ಸ್ಥಳದಿಂದ ದೂರ ಸರಿಸಲು ಅಧಿಕಾರಿಗಳು ಜಲ ಫಿರಂಗಿಗಳನ್ನು ಬಳಸಿದ್ದಾರೆ.
ಘಟನೆಯ ನಂತರ ಎಲ್ ಆಲ್ಲೊ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮುನ್ನೆಚ್ಚರಿಕಾ ಕ್ರಮವಾಗಿ ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಬೊಲಿವಿಯಾನಾ ಡಿ ಅವಿಯಾಸಿಯನ್ ಪ್ರಕಟಣೆಯಲ್ಲಿ ಪತನಗೊಂಡ ವಿಮಾನವು ತನ್ನ ದಳಕ್ಕೆ ಸೇರಿಲ್ಲ ಎಂದು ಸ್ಪಷ್ಟಪಡಿಸಿದೆ.
ದೇಶದ ರಾಜಧಾನಿ ಲಾ ಪಾಜ್ ಸಮೀಪದಲ್ಲಿರುವ ಎಲ್ ಆಲ್ಲೊ ನಗರವು ಸಮುದ್ರಮಟ್ಟದಿಂದ ಸುಮಾರು 4,000 ಮೀಟರ್ಗಳಿಗಿಂತ ಹೆಚ್ಚಿನ ಎತ್ತರದಲ್ಲಿದೆ. ಬೊಲಿವಿಯಾದ ಪ್ರಮುಖ ನಗರ ಕೇಂದ್ರಗಳಲ್ಲಿ ಒಂದಾದ ಇದು, ಎಲ್ ಆಲ್ಲೊ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ದೇಶೀಯ ಹಾಗೂ ಅಂತರರಾಷ್ಟ್ರೀಯ ಹಾರಾಟಗಳಿಗೆ ಪ್ರಮುಖ ಕೇಂದ್ರವಾಗಿಯೂ ಕಾರ್ಯನಿರ್ವಹಿಸುತ್ತದೆ.