ಬೈಕ್ ಕದ್ದು ಸರಗಳ್ಳತನ: ಉಪ್ಪಿನಂಗಡಿಯಲ್ಲಿ ಆರೋಪಿ ಬಂಧನ

ಪುತ್ತೂರು: ಮೈಸೂರಿನಲ್ಲಿ ಬೈಕ್ ಕದ್ದು ಅದನ್ನು ಬಳಸಿ ಉಪ್ಪಿನಂಗಡಿಯಲ್ಲಿ ಸರಗಳ್ಳತನ ಮಾಡಿದ ಆರೋಪಿಯನ್ನು ಬಂಧಿಸುವಲ್ಲಿ ಉಪ್ಪಿನಂಗಡಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತನನ್ನು ಸುಳ್ಯ, ಆಲೆಟ್ಟಿ ನಿವಾಸಿ ಅಬ್ದುಲ್ ರೆಹಮಾನ್ (31) ಎಂದು ಗುರುತಿಸಲಾಗಿದೆ. ಆರೋಪಿತನಿಂದ ಅಂದಾಜು ರೂ. 4,54,000 ಮೌಲ್ಯದ ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ ಪಲ್ಸರ್ ಬೈಕ್ ಸೇರಿದಂತೆ, ಒಟ್ಟು 5,05,000 ಮೌಲ್ಯದ ಸೊತ್ತನ್ನು ವಶಪಡಿಸಿಕೊಳ್ಳಲಾಗಿದೆ. ಸದ್ರಿ ಬೈಕ್ ಗೆ ಸಂಬಂಧಿಸಿ ಮೈಸೂರು ನಗರದ ವಿಜಯ ನಗರ ಪೊಲೀಸ್ ಠಾಣೆಯಲ್ಲಿ ದ್ವಿಚಕ್ರ ವಾಹನ ಕಳ್ಳತನ ಪ್ರಕರಣ ದಾಖಲಾಗಿರುತ್ತದೆ
ಆರೋಪಿ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ನೆಲ್ಯಾಡಿ, ಪಡುಬೆಟ್ಟು ಎಂಬಲ್ಲಿ ಬೈಕ್ ನಲ್ಲಿ ಬಂದಿದ್ದ ಇಬ್ಬರು ಮಹಿಳೆಯೊಬ್ಬರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕದ್ದು ಪರಾರಿಯಾಗಿದ್ದರು. ಈ ಕುರಿತಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿ ಪತ್ತೆ ಕಾರ್ಯದಲ್ಲಿ ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಅರುಣ್ ನಾಗೇಗೌಡ ಮಾರ್ಗದರ್ಶನದಲ್ಲಿ ಉಪ್ಪಿನಂಗಡಿ ಪೊಲೀಸ್ ವೃತ್ತ ನಿರೀಕ್ಷಕ ರವಿ ಬಿ.ಎಸ್ ನೇತೃತ್ವದಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡವು ಕಾರ್ಯಚರಣೆ ನಡೆಸಿರುತ್ತದೆ.