ಬಿಹಾರ ಚುನಾವಣೆ: ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ್‌ನಿಂದ ಗ್ಯಾರಂಟಿಗಳ ಘೋಷಣೆ; ಆರ್‌ಜೆಡಿಯಿಂದ 27 ನಾಯಕರ ಉಚ್ಚಾಟನೆ

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣಾ (Bihar Elections) ಕಣ ರಂಗೇರಿದೆ. ಪ್ರಮುಖ ಪಕ್ಷಗಳ ರಾಜಕೀಯ ಚಟುವಟಿಕೆ ಗರಿಗೆದರಿದೆ. ಕರ್ನಾಟಕ ಮಾದರಿಯ ಗ್ಯಾರಂಟಿಗಳನ್ನು ನೀಡಿ ಬಿಹಾರ ಮತದಾರರನ್ನು ಸೆಳೆಯಲು ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ್ (Mahagathbandhan) ಮುಂದಾಗಿದೆ.

ಪಾಟ್ನಾದಲ್ಲಿ ಪ್ರಣಾಳಿಕೆ ಬಿಡುಗಡೆಗೆ ಮುನ್ನ, ಕಾಂಗ್ರೆಸ್ ನಾಯಕ ಕೃಷ್ಣ ಅಲ್ಲವರು ಬಿಹಾರ ಜನತೆಗೆ ಮಹಾಘಟಬಂಧನ್‌ನ ಪ್ರಮುಖ ಭರವಸೆಗಳ ಕುರಿತು ಪೋಸ್ಟ್ ಹಂಚಿಕೊಂಡಿದ್ದಾರೆ. ಮಹಿಳೆಯರಿಗೆ ಪ್ರತಿ ತಿಂಗಳು 2,500 ರೂ., 25 ಲಕ್ಷ ರೂ.ವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ, ಭೂರಹಿತ ಕುಟುಂಬಗಳಿಗೆ ಭೂಮಿ (3-5 ಡಿಸ್ಮಿಲ್ = 1300-2176 square feet) ನೀಡಲಾಗುವುದು ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಸೋಮವಾರ ‘ಪಕ್ಷ ವಿರೋಧಿ ಚಟುವಟಿಕೆ’ ಆರೋಪದ ಮೇಲೆ 27 ನಾಯಕರನ್ನು ಆರು ವರ್ಷಗಳ ಅವಧಿಗೆ ಪಕ್ಷದಿಂದ ಹೊರಹಾಕಿದೆ. ಪಕ್ಷದ ರಾಜ್ಯ ಪ್ರಧಾನ ಕಚೇರಿಯ ಅಧಿಕೃತ ಹೇಳಿಕೆಯ ಪ್ರಕಾರ, ಹಲವಾರು ನಾಯಕರು ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸುವ ಅಥವಾ ವಿವಿಧ ಕ್ಷೇತ್ರಗಳಲ್ಲಿ ಅಧಿಕೃತ ಆರ್‌ಜೆಡಿ ಅಭ್ಯರ್ಥಿಗಳನ್ನು ವಿರೋಧಿಸುತ್ತಿರುವ ವರದಿಗಳನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ.
ಬಿಹಾರ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷ ವಿರೋಧಿ ನಡವಳಿಕೆ, ಚಟುವಟಿಕೆಗಳಿಗೆ ಸಂಬಂಧಿಸಿದಂತೆ ರಾಜ್ಯ ಪ್ರಧಾನ ಕಚೇರಿಗೆ ಅಧಿಕೃತ ಮಾಹಿತಿಯ ಆಧಾರದ ಮೇಲೆ ಕ್ರಮಕೈಗೊಳ್ಳಲಾಗಿದೆ.