266 ಜೀವ ಬಲಿ ಪಡೆದ ಏರ್ ಇಂಡಿಯಾ ಪತನಕ್ಕೆ ಬಿಗ್ ಟ್ವಿಸ್ಟ್

ನವದೆಹಲಿ: ಭಾರತದ ವಾಯುಯಾನ ಇತಿಹಾಸದಲ್ಲೇ ಅತಿದೊಡ್ಡ ವಿಮಾನ ದುರಂತ ಗುಜರಾತ್ನ ಅಹಮದಾಬಾದ್ನಲ್ಲಿ ( Ahmedabad Plane Crash ) ಕಳೆದ ವರ್ಷ ಜೂನ್ 12 ರಂದು ಸಂಭವಿಸಿತು. ಈ ಘಟನೆ ನಡೆದು ಸುಮಾರು 8 ತಿಂಗಳು ಕಳೆದಿದ್ದು, ಇದೀಗ ಆಘಾತಕಾರಿ ಸಂಗತಿಯೊಂದು ಬೆಳಕಿಗೆ ಬಂದಿದೆ.

ಆ ಶಾಕಿಂಗ್ ಸಂಗತಿ ಏನೆಂದರೆ, 242 ಪ್ರಯಾಣಿಕರು ಹಾಗೂ 24 ವೈದ್ಯಕೀಯ ವಿದ್ಯಾರ್ಥಿಗಳ ಸಾವಿಗೆ ಕಾರಣವಾದ ಏರ್ ಇಂಡಿಯಾ ಬೋಯಿಂಗ್ 787 ಡ್ರೀಮ್ಲೈನರ್ ವಿಮಾನದಲ್ಲಿದ್ದ ಇಬ್ಬರು ಪೈಲಟ್ಗಳಲ್ಲಿ ಓರ್ವ ಪೈಲಟ್, ಉದ್ದೇಶಪೂರ್ವಕವಾಗಿಯೇ ಅಂದರೆ, ಬೇಕಂತಲೇ ವಿಮಾನದ ಇಂಧನ ಸ್ವಿಚ್ಗಳನ್ನು ಆಫ್ ಮಾಡಿದರಂತೆ. ಈ ಆಘಾತಕಾರಿ ವಿಚಾರವನ್ನು ಇಟಾಲಿಯನ್ ಪತ್ರಿಕೆ ಕೊರಿಯೆರ್ ಡೆಲ್ಲಾ ಸೆರಾ ಇತ್ತೀಚೆಗೆ ವರದಿ ಮಾಡಿದೆ. ವಿಮಾನದ ಕಾಕ್ಪಿಟ್ನಿಂದ ಬಂದ ಧ್ವನಿ ರೆಕಾರ್ಡಿಂಗ್ಗಳ ವಿಶ್ಲೇಷಣೆಯಿಂದ ಈ ಸಂಗತಿ ಬಯಲಾಗಿದೆ ಎಂದು ಪತ್ರಿಕೆ ಹೇಳಿದೆ.
ಮೂಲಗಳನ್ನು ಉಲ್ಲೇಖಿಸಿ ವರದಿ
ಏರ್ ಇಂಡಿಯಾ ವಿಮಾನ ಅಪಘಾತದ ಬಗ್ಗೆ ನಡೆಯುತ್ತಿರುವ ತನಿಖೆ ಅಂತಿಮ ಹಂತಕ್ಕೆ ಬಂದಿದ್ದು, ಈ ದುರಂತವು ತಾಂತ್ರಿಕ ದೋಷದಿಂದ ಉಂಟಾಗಿಲ್ಲ, ಬದಲಾಗಿ “ಉದ್ದೇಶಪೂರ್ವಕ ಕೃತ್ಯ”ದ ಪರಿಣಾಮ ಎಂದು ತನಿಖಾಧಿಕಾರಿಗಳು ತೀರ್ಮಾನಿಸಿದ್ದಾರೆ ಎನ್ನುವ ಭಾರತ ಮತ್ತು ಅಮೆರಿಕ ನಡುವಿನ ಇತ್ತೀಚಿನ ಚರ್ಚೆಗಳ ಬಗ್ಗೆ ತಿಳಿದಿರುವಂತಹ ಎರಡು ಮೂಲಗಳನ್ನು ಉಲ್ಲೇಖಿಸಿ ಇಟಾಲಿಯನ್ ದಿನಪತ್ರಿಕೆ ಕೊರಿಯೆರ್ ಡೆಲ್ಲಾ ಸೆರಾ ವರದಿ ಮಾಡಿದೆ. ಆದಾಗ್ಯೂ, ಈ ಘಟನೆಯ ಬಗ್ಗೆ ಡಿಜಿಸಿಎ ಅಧಿಕೃತ ವರದಿ ಬಿಡುಗಡೆಯಾಗುವ ಮೊದಲೇ ತೀರ್ಮಾನಿಸುವುದು ಅಪ್ರಪಸ್ತುತವಾಗಿರುತ್ತದೆ.
ಅಂತಿಮ ವರದಿಯ ಸಿದ್ಧತೆ
ಕೊರಿಯೆರ್ ಡೆಲ್ಲಾ ಸೆರಾ ವರದಿಯ ಪ್ರಕಾರ, ಜೂನ್ 12, 2025 ರಂದು ವಿಮಾನದ ಇಂಜಿನ್ಗೆ ಇಂಧನ ಕಡಿತಗೊಂಡ ನಂತರ ಸಂಭವಿಸಿದ ಅಪಘಾತವು ಯಾಂತ್ರಿಕ ವೈಫಲ್ಯದಿಂದಲ್ಲ, ಬದಲಾಗಿ ಉದ್ದೇಶಪೂರ್ವಕ ಕ್ರಮದಿಂದ ಸಂಭವಿಸಿದೆ ಎಂದು ಭಾರತೀಯ ತನಿಖಾಧಿಕಾರಿಗಳು ನಿರ್ಧರಿಸಿದ್ದಾರೆ. ಅಧಿಕಾರಿಗಳು ಈಗ ತಮ್ಮ ಅಂತಿಮ ವರದಿಯನ್ನು ರೂಪಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಈ ತನಿಖೆಯಲ್ಲಿ ಸಹಾಯ ಮಾಡುತ್ತಿರುವ ಅಮೆರಿಕದ ತಜ್ಞರು ಈ ಸಂಶೋಧನೆಗಳನ್ನು “ಒಂದು ಪ್ರಗತಿ” ಎಂದು ಬಣ್ಣಿಸಿದ್ದಾರೆ ಅಂತ ಪತ್ರಿಕೆ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಈ ಘಟನೆಯ ಬಗ್ಗೆ ಭಾರತದ ವಿಮಾನ ಅಪಘಾತ ತನಿಖಾ ಬ್ಯೂರೋ (AAIB) 2025ರ ಜುಲೈ ತಿಂಗಳಲ್ಲಿ 15 ಪುಟಗಳ ಪ್ರಾಥಮಿಕ ವರದಿಯನ್ನು ಬಿಡುಗಡೆ ಮಾಡಿತು. ಇದರಲ್ಲಿ ವಿಮಾನ ದುರಂತಕ್ಕೆ ಕಾರಣವಾದ ನಿರ್ಣಾಯಕ ತಾಂತ್ರಿಕ ಘಟನೆಗಳು ಮತ್ತು ಕಾಕ್ಪಿಟ್ನಲ್ಲಿ ಪೈಲಟ್ಗಳಿಬ್ಬರ ಸಂಭಾಷಣೆ ವಿನಿಮಯಗಳನ್ನು ಕಾಲಾನುಕ್ರಮದಲ್ಲಿ ವಿವರಿಸಿತು. ವಿಮಾನದಲ್ಲಿದ್ದ ಪೈಲಟ್ “ನೀವು ಇಂಧನವನ್ನು ಏಕೆ ಕಡಿತಗೊಳಿಸಿದ್ದೀರಿ?” ಎಂದು ಕೇಳುವುದನ್ನು ಹಾಗೂ ನಾನದನ್ನು ಮಾಡಿಲ್ಲ ಎಂದು ಎರಡನೇ ಪೈಲಟ್ ಹೇಳುವುದನ್ನು ಕಾಕ್ಪಿಟ್ ವಾಯ್ಸ್ ರೆಕಾರ್ಡರ್ ಸೆರೆಹಿಡಿದಿದೆ ಎಂಬ ಅಂಶ ವರದಿಯಲ್ಲಿತ್ತು. ಇದೇ ಅಂಶವನ್ನು ಇಟಾಲಿಯನ್ ಪತ್ರಿಕೆಯು ಸಹ ಉಲ್ಲೇಖಿಸಿದೆ. ಪೈಲಟ್ಗಳಲ್ಲಿ ಒಬ್ಬರು ಇಂಜಿನ್ ಇಂಧನ ನಿಯಂತ್ರಣ ಸ್ವಿಚ್ಗಳನ್ನು ಆಫ್ ಮಾಡಿದ್ದಾರೆ ಎಂದು ತನಿಖಾಧಿಕಾರಿಗಳು ನಂಬಿದ್ದಾರೆ. ಇದರಿಂದಾಗಿ ವಿಮಾನವು ಶಕ್ತಿಯನ್ನು ಕಳೆದುಕೊಂಡು ನೆಲಕ್ಕೆ ಅಪ್ಪಳಿಸಿದೆ ಎಂದು ಪತ್ರಿಕೆ ವರದಿ ಮಾಡಿದೆ. ಅಂದಹಾಗೆ, ಈ ವಿಮಾನದಲ್ಲಿ ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಪೈಲಟ್-ಇನ್-ಕಮಾಂಡ್ ಆಗಿದ್ದರೆ, ಮೊದಲ ಅಧಿಕಾರಿ ಕ್ಲೈವ್ ಕುಂದರ್ ಸಹ-ಪೈಲಟ್ ಆಗಿದ್ದರು.
ಇನ್ನು ಈ ಅಪಘಾತದ ಹಿಂದೆ ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಕೈವಾಡ ಇರುವುದಾಗಿ ಶಂಕಿಸಲಾಗಿದೆ. ಏಕೆಂದರೆ, ಅಪಘಾತಕ್ಕೂ ಮುನ್ನ ಒಂದು ತಿಂಗಳಿಂದ ಸಭರ್ವಾಲ್ ಅವರು ಖಿನ್ನತೆಯಿಂದ ಬಳಲುತ್ತಿದ್ದರು ಎಂಬ ಸಂಗತಿ ತನಿಖೆಯಲ್ಲಿ ಬಯಲಾಗಿತ್ತು. ಯಾವಾಗ ಭಾರತದ ವಿಮಾನ ಅಪಘಾತ ತನಿಖಾ ಬ್ಯೂರೋ ವರದಿ ಹೊರ ಬಂತೋ, ಪೈಲಟ್ಗಳ ಸಂಘಗಳಿಂದ ಪ್ರತಿಭಟನೆಗೆ ಕಾರಣವಾಯಿತು. ಏಕೆಂದರೆ, ವರದಿಯಲ್ಲಿ ಪೈಲಟ್ಗಳದ್ದೇ ತಪ್ಪು ಎಂದು ಉಲ್ಲೇಖಿಸಲಾಗಿತ್ತು. ಸಭರ್ವಾಲ್ ಅವರ ತಂದೆ ಕೂಡ ತಮ್ಮ ಮಗನ ವಿರುದ್ಧದ ಆರೋಪಗಳನ್ನು ತಿರಸ್ಕರಿಸಿದರು ಮತ್ತು ಹೊಸ ತನಿಖೆಗೆ ಒತ್ತಾಯಿಸಿದರು. ತಮ್ಮ ಮಗನ ಮಾನಸಿಕ ಆರೋಗ್ಯದ ಬಗ್ಗೆ ಎದ್ದಿದ್ದ ಊಹಾಪೋಹಗಳನ್ನು ತಳ್ಳಿಹಾಕಿದರು. ಪತ್ನಿಯೊಂದಿಗಿನ ವಿಚ್ಛೇದನ ಸೇರಿದಂತೆ ಸಭರ್ವಾಲ್ ಅವರ ವೈಯಕ್ತಿಕ ಸಮಸ್ಯೆಗಳು ಆತಂಕ ಅಥವಾ ಖಿನ್ನತೆಗೆ ಕಾರಣವಾಗಿವೆ ಎಂಬ ಆರೋಪಗಳನ್ನು ತಂದೆ ನಿರಾಕರಿಸಿದರು.
ಅಂದಹಾಗೆ, ಕೊರಿಯೆರ್ ಡೆಲ್ಲಾ ಸೆರಾ ಪ್ರಕಾರ, ಅಂತಿಮ ತನಿಖಾ ವರದಿಯು ಪೈಲಟ್ಗಳ ನಿರಂತರ ಮಾನಸಿಕ ಮೌಲ್ಯಮಾಪನ ಮತ್ತು ಮಾನಸಿಕ ಆರೋಗ್ಯ ಮೇಲ್ವಿಚಾರಣೆಯ ಶಿಫಾರಸುಗಳನ್ನು ಒಳಗೊಂಡಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಸದ್ಯ ಡೆಲ್ಲಾ ಸೆರಾ ವರದಿ ತೀವ್ರ ಸಂಚಲನ ಮೂಡಿಸಿದೆ. ಆದರೆ, ಅಂತಿಮ ವರದಿ ಬರುವವರೆಗೂ ಈ ವಿಚಾರದಲ್ಲಿ ಅಂತಿಮ ತೀರ್ಮಾನಕ್ಕೆ ಬರಲಾಗದು.
ಭಾರತದ ಇತಿಹಾಸದಲ್ಲೇ ಕಂಡು ಕೇಳರಿಯದ ಮಹಾ ದುರಂತ
ಭಾರತದ ಇತಿಹಾಸದಲ್ಲೇ ಅತಿದೊಡ್ಡ ವಿಮಾನ ದುರಂತ ಗುಜರಾತ್ನ ಅಹಮದಾಬಾದ್ನಲ್ಲಿ ಸಂಭವಿಸಿತು. 2025, ಜೂನ್ 12ರಂದು ಮಧ್ಯಾಹ್ನ ಟೇಕ್ ಆಫ್ ಆದ ಏರ್ ಇಂಡಿಯಾ ಎ1-171 ವಿಮಾನ 32 ಸೆಕೆಂಡ್ಗಳಲ್ಲಿ ಮೇಘಾನಿ ನಗರದ ವೈದ್ಯಕೀಯ ಕಾಲೇಜು ಹಾಸ್ಟೆಲ್ ಮೇಲೆ ಪತನಗೊಂಡಿತು. ವಿದೇಶಿಯರೂ ಸೇರಿ 230 ಪ್ರಯಾಣಿಕರು, 12 ಸಿಬ್ಬಂದಿ ಇದ್ದ ವಿಮಾನದಲ್ಲಿ ಓರ್ವ ಪ್ರಯಾಣಿಕ ಪವಾಡಸದೃಶ ರೀತಿಯಲ್ಲಿ ಬದುಕುಳಿದರೆ ಉಳಿದವರೆಲ್ಲ ಸಜೀವ ದಹನವಾದರು. ವಿಮಾನ ಹಾಸ್ಟೆಲ್ ಕಟ್ಟಡದ ಮೇಲೆ ಬಿದ್ದ ಪರಿಣಾಮ ಊಟಕ್ಕೆ ಕುಳಿತಿದ್ದ 24 ವೈದ್ಯಕೀಯ ವಿದ್ಯಾರ್ಥಿಗಳು ಸಾವಿಗೀಡಾದರು
* ಎಲ್ಲಿ ದುರಂತ?: ಅಹಮದಾಬಾದ್ನ ಮೇಘಾನಿ ನಗರ
* ಎಷ್ಟೊತ್ತಿಗೆ?: ಗುರುವಾರ ಮಧ್ಯಾಹ್ನ 1.38
* ಯಾವ ವಿಮಾನ?: ಏರ್ ಇಂಡಿಯಾ ಎ1-171
* ಎಲ್ಲಿಗೆ ಹೊರಟಿತ್ತು?: ಲಂಡನ್ನ ಗ್ಯಾಟ್ವಿಕ್ ವಿಮಾನ ನಿಲ್ದಾಣ
* 32 ಸೆಕೆಂಡ್: ಟೇಕ್ ಆಫ್ ಆದ 32 ಸೆಕೆಂಡ್ನಲ್ಲಿ ಪತನ
ಇಂಧನ ನಿಯಂತ್ರಣ ಸ್ವಿಚ್ಗಳು ಎಂದರೇನು?
ಇಂಧನ ನಿಯಂತ್ರಣ ಸ್ವಿಚ್ಗಳು ವಿಮಾನದ ಕಾಕ್ಪಿಟ್ನ ಅತ್ಯವಶ್ಯಕ ಘಟಕ. ಇದು ವಿಮಾನದ ಇಂಜಿನ್ಗಳಿಗೆ ಇಂಧನ ಹರಿವನ್ನು ನಿಯಂತ್ರಿಸುತ್ತದೆ. ಪತನವಾದ ಬೋಯಿಂಗ್ 787 ಡ್ರೀಮ್ಲೈನರ್ ವಿಮಾನ, ಎರಡು ಜಿಇ ಇಂಜಿಂನ್ಗಳನ್ನು ಹೊಂದಿದ್ದು, ವಿಮಾನದ ಥರ್ಸ್ಟ್ ಲೆವೆರ್ಸ್ ಕೆಳಗಡೆ ಇಂಧನ ಕಂಟ್ರೋಲ್ ಸ್ವಿಚ್ಗಳನ್ನು ಇರಿಸಲಾಗಿರುತ್ತದೆ.
ಇಂಧನ ಸ್ವಿಚ್ಗಳ ಬಹುಮುಖ್ಯ ಕಾರ್ಯಗಳೇನು?
* ನೆಲದ ಮೇಲೆ ಇಂಜಿನ್ಗಳನ್ನು ಪ್ರಾರಂಭಿಸುವುದು ಅಥವಾ ಸ್ಥಗಿತಗೊಳಿಸುವುದು
* ತುರ್ತು ಪರಿಸ್ಥಿತಿಯಲ್ಲಿ ಹಾರಾಟದ ಸಮಯದಲ್ಲಿ ಇಂಜಿನ್ಗಳನ್ನು ಹಸ್ತಚಾಲಿತವಾಗಿ ಸ್ಥಗಿತಗೊಳಿಸುವುದು ಅಥವಾ ಮರುಪ್ರಾರಂಭಿಸುವುದು
ಅಂದಹಾಗೆ ಈ ಸ್ವಿಚ್ಗಳನ್ನು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಅವುಗಳು ನಿಗದಿತ ಸ್ಥಾನದಲ್ಲಿ ಉಳಿಯಲು ಸ್ಪ್ರಿಂಗ್-ಲೋಡ್ ಆಗಿರುತ್ತವೆ ಮತ್ತು ಅವುಗಳನ್ನು “RUN” (ಇಂಧನ ಹರಿಯುವಿಕೆ) ದಿಂದ “CUTOFF” (ಇಂಧನ ನಿಲ್ಲಿಸುವುದು) ಗೆ ಸರಿಸಲು, ಪೈಲಟ್, ಸ್ವಿಚ್ ಸ್ಥಾನವನ್ನು ಬದಲಾಯಿಸುವ ಮೊದಲು ಅದನ್ನು ಮೇಲಕ್ಕೆ ಎಳೆಯಬೇಕು. ಈ ರೀತಿ ಏಕೆ ಮಾಡಲಾಗಿದೆ ಎಂದರೆ ಆಟೋಮ್ಯಾಟಿಕ್ ಆಗಿ ಸಕ್ರಿಯಗೊಳಿಸುವಿಕೆಯನ್ನು ತಡೆಗಟ್ಟಲು.
ಸಾಮಾನ್ಯ ಕಾರ್ಯಾಚರಣೆಗಳಲ್ಲಿ ಇಂಧನ ಸ್ವಿಚ್ಗಳ ಪಾತ್ರ
ದಿನನಿತ್ಯದ ಕಾರ್ಯಾಚರಣೆಗಳ ಸಮಯದಲ್ಲಿ, ಪೈಲಟ್ಗಳು ಮುಖ್ಯವಾಗಿ ಇಂಜಿನ್ ಸ್ಟಾರ್ಟ್-ಅಪ್ ಮತ್ತು ಸ್ಥಗಿತಗೊಳಿಸುವ ಕಾರ್ಯವಿಧಾನಗಳ ಸಮಯದಲ್ಲಿ ಇಂಧನ ಸ್ವಿಚ್ಗಳನ್ನು ಬಳಸುತ್ತಾರೆ. ಸ್ವಿಚ್ ಅನ್ನು ಮೇಲಕ್ಕೆ ಎತ್ತಿ “RUN” ಸ್ಥಾನದ ಕಡೆಗೆ ಸರಿಸಿದರೆ, ಇಂಧನವು ಇಂಜಿನ್ಗಳಿಗೆ ಹರಿಯುತ್ತದೆ ಮತ್ತು ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಅದೇ ರೀತಿ ಸ್ವಿಚ್ ಅನ್ನು “CUTOFF” ಗೆ ಸರಿಸುವುದರಿಂದ ತಕ್ಷಣವೇ ಇಂಧನ ಪೂರೈಕೆ ನಿಲ್ಲುತ್ತದೆ ಮತ್ತು ಇಂಜಿನ್ ಸ್ಥಗಿತಗೊಳ್ಳುತ್ತದೆ. ಸುರಕ್ಷಿತ ನೆಲದ ಕಾರ್ಯಾಚರಣೆಗಳಿಗೆ ಮತ್ತು ಕೆಲವು ವಿಮಾನದಲ್ಲಿನ ತುರ್ತು ಪರಿಸ್ಥಿತಿಗಳಿಗೆ ಪ್ರತಿಕ್ರಿಯಿಸಲು ಈ ಕಾರ್ಯವು ತುಂಬಾ ಅತ್ಯಗತ್ಯವಾಗಿದೆ,