ಬೆಂಗಳೂರಿನಲ್ಲಿ ಭೀಕರ ಕೊಲೆ: ತಾಯಿಗೆ ಬೈದಿದ್ದಕ್ಕೆ ಸ್ವಂತ ಅಣ್ಣನನ್ನೇ ಕೊಲೆ ಮಾಡಿದ ತಮ್ಮ

ಬೆಂಗಳೂರು : ಬೆಂಗಳೂರಿನ ಯಾರ್ಬ್ ನಗರದಲ್ಲಿ ತೀವ್ರ ಆಘಾತಕಾರಿ ಘಟನೆಯೊಂದು ನಡೆದಿದ್ದು, ತಾಯಿಗೆ ಬೈದ ಎಂಬ ಕ್ಷುಲ್ಲಕ ಕಾರಣಕ್ಕೆ ತಮ್ಮನೊಬ್ಬ ಸ್ವಂತ ಅಣ್ಣನನ್ನೇ ಭೀಕರವಾಗಿ ಕೊಲೆ ಮಾಡಿದ್ದಾನೆ. ಕೊಲೆಯಾದ ವ್ಯಕ್ತಿಯನ್ನು 35 ವರ್ಷದ ಮೊಹಮ್ಮದ್ ಮುಜಾಹಿದ್ ಎಂದು ಗುರುತಿಸಲಾಗಿದೆ. ಮುಜಾಹಿದ್ನ ತಮ್ಮನಾದ ಮೊಹಮ್ಮದ್ ಮುಸೆದ್ ಅಣ್ಣನನ್ನು ಕೊಲೆ ಮಾಡಿದ ಆರೋಪಿಯಾಗಿದ್ದಾನೆ.

ತಾಯಿಗೆ ಬೈದ ವಿಚಾರದಲ್ಲಿ ಅಣ್ಣತಮ್ಮಂದಿರ ನಡುವೆ ಮನೆಯಲ್ಲೇ ದೊಡ್ಡ ಜಗಳ ಮತ್ತು ಹೊಡೆದಾಟ ಪ್ರಾರಂಭವಾಗಿದೆ. ಕೋಪದ ಭರದಲ್ಲಿ ಇಬ್ಬರೂ ಮನೆಯಲ್ಲಿದ್ದ ವಸ್ತುಗಳಿಂದ ಪರಸ್ಪರ ಹೊಡೆದಾಡಿಕೊಂಡಿದ್ದು, ಇದೇ ಹೊಡೆದಾಟದಲ್ಲಿ ಮುಸೆದ್ ತನ್ನ ಅಣ್ಣ ಮುಜಾಹಿದ್ನನ್ನು ಹತ್ಯೆಗೈದಿದ್ದಾನೆ. ಈ ಘಟನೆಯಲ್ಲಿ ಗಾಯಗೊಂಡಿರುವ ಮುಸೆದ್ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.