ಬೆಂಗಳೂರು: ತಾಯಿಯ ನರಕಯಾತನೆ ನೋಡಲಾಗದೆ 3ನೇ ಮಹಡಿಯಿಂದ ತಳ್ಳಿ ಕೊಂದ ಮಗ

ಬೆಂಗಳೂರು : ಪಾರ್ಶ್ವವಾಯುವಿನಿಂದ (Stroke) ಬಳಲುತ್ತಿದ್ದ ವೃದ್ಧ ತಾಯಿಯ ಸ್ಥಿತಿಯನ್ನು ಕಂಡು ನೊಂದ ಮಗನೊಬ್ಬ, ಆಕೆಯನ್ನು ಬಹುಮಹಡಿ ಕಟ್ಟಡದ ಮೇಲಿಂದ ತಳ್ಳಿ ಕೊಲೆ ಮಾಡಿರುವ ಕರುಣಾಜನಕ ಘಟನೆ ರಾಜರಾಜೇಶ್ವರಿ ನಗರದ ಬೆಮಲ್ ಲೇಔಟ್‌ನಲ್ಲಿ ಬುಧವಾರ ನಡೆದಿದೆ

ಮೃತ ದುರ್ದೈವಿಯನ್ನು ಸಾವಿತ್ರಮ್ಮ (72) ಎಂದು ಗುರುತಿಸಲಾಗಿದೆ. ಈ ಸಂಬಂಧ ಆಕೆಯ ಮಗ ವೆಂಕಟೇಶ್ (42) ಎಂಬಾತನನ್ನು ಆರ್‌ಆರ್ ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ಪಾರ್ಶ್ವವಾಯು ಪೀಡಿತರಾಗಿದ್ದ ಸಾವಿತ್ರಮ್ಮ ಅವರು ಅರೆ ಪ್ರಜ್ಞಾವಸ್ಥೆಯಲ್ಲಿದ್ದರು. ಸಂಪೂರ್ಣವಾಗಿ ಹಾಸಿಗೆ ಹಿಡಿದಿದ್ದ ಅವರಿಗೆ ಮಗ ವೆಂಕಟೇಶ್ ಆರೈಕೆ ಮಾಡುತ್ತಿದ್ದನು.
ಪ್ರಾಥಮಿಕ ತನಿಖೆಯ ಪ್ರಕಾರ, ಬುಧವಾರ ಮಧ್ಯಾಹ್ನ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ವೆಂಕಟೇಶ್ ತನ್ನ ತಾಯಿಯನ್ನು ಕಟ್ಟಡದ ಮೂರನೇ ಮಹಡಿಯಿಂದ ಕೆಳಕ್ಕೆ ತಳ್ಳಿದ್ದಾನೆ. ತೀವ್ರ ರಕ್ತಸ್ರಾವದಿಂದ ಸಾವಿತ್ರಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿಚಾರಣೆಯ ವೇಳೆ ಆರೋಪಿ ವೆಂಕಟೇಶ್, “ತಾಯಿ ಪಡುತ್ತಿದ್ದ ದೈಹಿಕ ನೋವು ಮತ್ತು ನರಕಯಾತನೆಯನ್ನು ನೋಡಲು ಸಾಧ್ಯವಾಗದೆ, ಅವರಿಗೆ ಈ ಅವಸ್ಥೆಯಿಂದ ಮುಕ್ತಿ ನೀಡಲು ಈ ಕೃತ್ಯ ಎಸಗಿದ್ದೇನೆ” ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ.
ಘಟನಾ ಸ್ಥಳಕ್ಕೆ ಆರ್‌ಆರ್ ನಗರ ಪೊಲೀಸರು ಭೇಟಿ ನೀಡಿ ಮಹಜರು ನಡೆಸಿದ್ದಾರೆ. ಆರೋಪಿ ವೆಂಕಟೇಶ್ ವಿರುದ್ಧ ಐಪಿಸಿ ಸೆಕ್ಷನ್ 302 (ಕೊಲೆ ಪ್ರಕರಣ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಹೆಚ್ಚಿನ ತನಿಖೆ ಮುಂದುವರಿದಿದೆ.