ಆರಿಕ್ಕಾಡಿ ಟೋಲ್ ಬಿಜೆಪಿ ಹಾಗೂ ಎಲ್ಡಿಎಫ್ ಹೊಂದಾಣಿಕೆ : ಹಿಂದೂ ಮಹಾಸಭಾ ಆರೋಪ

ಕಾಸರಗೋಡಿನ ಆರಿಕ್ಕಾಡಿಯಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವುದು ಶುದ್ಧ ‘ಹಗಲು ದರೋಡೆ’! ರಾಷ್ಟ್ರೀಯ ಹೆದ್ದಾರಿ ಸಚಿವಾಲಯದ ಸ್ಪಷ್ಟ ನಿಯಮದ ಪ್ರಕಾರ ಎರಡು ಟೋಲ್ಗಳ ನಡುವೆ ಕನಿಷ್ಠ 60 ಕಿ.ಮೀ ಅಂತರವಿರಬೇಕು. ಆದರೆ, ತಲಪಾಡಿ ಟೋಲ್ನಿಂದ ಕೇವಲ 28 ಕಿ.ಮೀ ದೂರದಲ್ಲೇ ಮತ್ತೊಂದು ಲೂಟಿ ಕೇಂದ್ರವನ್ನು ತೆರೆದಿರುವುದು ಕಾನೂನಿಗೆ ಮಾಡುತ್ತಿರುವ ಅಪಚಾರವಲ್ಲದೆ ಮತ್ತೇನು? ಎಂದು ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷರಾದ ಡಾ. ಎಲ್.ಕೆ. ಸುವರ್ಣ ಅವರು ನೇರವಾಗಿ ಪ್ರಶ್ನಿಸಿದ್ದಾರೆ.


ಈ ಅಕ್ರಮದ ವಿರುದ್ಧ ಜನಪರವಾಗಿ ನಿಲ್ಲಬೇಕಾದ ಬಿಜೆಪಿ, “ಪ್ರತಿಭಟನೆ ಮಾಡುವುದು ಪರಿಹಾರವಲ್ಲ” ಎನ್ನುವ ಅತ್ಯಂತ ಬೇಜವಾಬ್ದಾರಿ ಮತ್ತು ಹಾಸ್ಯಾಸ್ಪದ ಹೇಳಿಕೆ ನೀಡುವ ಮೂಲಕ ಜನರ ಕಣ್ಣಿಗೆ ಮಣ್ಣೆರಚುತ್ತಿದೆ. ಕೇಂದ್ರ ಸರ್ಕಾರವು ದೇಶಾದ್ಯಂತ ಅಕ್ರಮ ಟೋಲ್ಗಳನ್ನು ತೆರವುಗೊಳಿಸುತ್ತೇವೆ ಎಂದು ಡಂಗೂರ ಸಾರುತ್ತಿರುವಾಗ, ಇಲ್ಲಿನ ಬಿಜೆಪಿ ನಾಯಕರು ಇಂತಹ ಹೇಳಿಕೆ ನೀಡಿರುವುದು ದೊಡ್ಡ ಮಟ್ಟದ ಅನುಮಾನಕ್ಕೆ ಕಾರಣವಾಗಿದೆ. ಇದು ಸ್ಥಳೀಯ ಬಿಜೆಪಿ ನಾಯಕರ ದ್ವಂದ್ವ ನೀತಿಯನ್ನು ಬಯಲು ಮಾಡಿದೆ ಎಂದು ತಿಳಿಸಿದ ಎಲ್.ಕೆ. ಸುವರ್ಣ

ಇತ್ತ ಕೇರಳದ ಆಡಳಿತದಲ್ಲಿರುವ ಎಲ್.ಡಿ.ಎಫ್ (LDF) ಸರ್ಕಾರವು “ನಮಗೂ ಇದಕ್ಕೂ ಸಂಬಂಧವೇ ಇಲ್ಲ” ಎನ್ನುವಂತೆ ಜಾಣ ಕುರುಡು ಪ್ರದರ್ಶಿಸುತ್ತಿದೆ. ಜನರ ಜೇಬಿಗೆ ಕತ್ತರಿ ಹಾಕುವ ಈ ವಿಚಾರದಲ್ಲಿ ಎರಡೂ ಪಕ್ಷಗಳು ಕುರಿ ಉಂಡು ಮಲಗಿದಂತೆ ಸುಮ್ಮನಿರುವುದು ನೋಡಿದರೆ, ಇವರ ನಡುವೆ ‘ಅಪವಿತ್ರ ಒಳಒಪ್ಪಂದ’ ನಡೆದಿರುವ ಸಾಧ್ಯತೆ ದಟ್ಟವಾಗಿದೆ. ಇದು ಜನಸಾಮಾನ್ಯರ ಹಿತಾಸಕ್ತಿಯನ್ನು ಬಲಿಗೊಟ್ಟು ನಡೆಸುತ್ತಿರುವ ಅಪ್ಪಟ ‘ಮ್ಯಾಚ್ ಫಿಕ್ಸಿಂಗ್ ರಾಜಕಾರಣ’!
ಒಂದು ವೇಳೆ ಈ ಅಕ್ರಮ ಟೋಲ್ ಅನ್ನು ಕೂಡಲೇ ತೆರವು ಮಾಡದಿದ್ದಲ್ಲಿ, ಸಮಾನ ಮನಸ್ಕ ಸಂಘಟನೆಗಳು ಹಾಗೂ ವ್ಯಕ್ತಿಗಳೊಂದಿಗೆ ಸೇರಿ ಅಕ್ರಮ ಟೋಲ್ ಅನ್ನು ಸಂಪೂರ್ಣವಾಗಿ ತೆರವುಗೊಳಿಸುವವರೆಗೂ ಉಗ್ರವಾಗಿ ಹೋರಾಟ ನಡೆಸಲಾಗುವುದು ಎಂದು ಹಿಂದೂ ಮಹಾಸಭಾ ಎಚ್ಚರಿಸಿದೆ.