Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಅಹಮದಾಬಾದ್ ವಿಮಾನ ಪತನ: 2018ರ ಎಫ್‌ಎಎ ಎಚ್ಚರಿಕೆ ನಿರ್ಲಕ್ಷಿಸಿದ್ದ ಏರ್ ಇಂಡಿಯಾ!

Spread the love

ಬೆಂಗಳೂರು: ಬೋಯಿಂಗ್‌ ಬಿ-787 ಸರಣಿಯ ವಿಮಾನದ ಎಂಜಿನ್‌ಗಳ ಇಂಧನ ಸ್ವಿಚ್‌ಗಳಲ್ಲಿ ತಾಂತ್ರಿಕ ಸಮಸ್ಯೆ ಇದ್ದು, ಅವುಗಳನ್ನು ಬದಲಿಸಿ ಎಂದು ಅಮೆರಿಕದ ಫೆಡರಲ್‌ ವಿಮಾನಯಾನ ಸಂಸ್ಥೆ (ಎಫ್‌ಎಎ) 2018ರಲ್ಲೇ ಸುತ್ತೋಲೆ ಹೊರಡಿಸಿತ್ತು. ಅಹಮದಾಬಾದ್‌ನಲ್ಲಿ ಪತನವಾದ ಬಿ-787 ವಿಮಾನದಲ್ಲೂ ಇದೇ ಸ್ವಿಚ್‌ ಬಳಕೆಯಾಗಿದ್ದು, ಅವುಗಳು ಸುಸ್ಥಿತಿಯಲ್ಲಿ ಇದ್ದವೇ ಎಂಬುದರ ಬಗ್ಗೆ ಏರ್‌ ಇಂಡಿಯಾವು ಪರಿಶೀಲನೆ ನಡೆಸಿರಲಿಲ್ಲ.

ಏರ್ ಇಂಡಿಯಾ ವಿಮಾನ ಪತನದ ತನಿಖೆಯ ಕುರಿತು, ವಿಮಾನ ಅಪಘಾತ ತನಿಖಾ ಬ್ಯೂರೊ (ಎಎಐಬಿ) ಶನಿವಾರ ಬಿಡುಗಡೆ ಮಾಡಿದ್ದ ಪ್ರಾಥಮಿಕ ವರದಿಯಲ್ಲಿ ಈ ಮಾಹಿತಿ ಇದೆ.

ಇಂಧನ ಸ್ವಿಚ್‌ಗಳಲ್ಲಿ ಇರುವ ತಾಂತ್ರಿಕ ಸಮಸ್ಯೆ ಬಗ್ಗೆ ಎಫ್‌ಎಎ 2018ರ ಡಿಸೆಂಬರ್‌ನಲ್ಲಿ ಸುತ್ತೋಲೆ ಹೊರಡಿಸಿತ್ತು.

‘ಬೋಯಿಂಗ್‌ 737 ಸರಣಿಯ ವಿಮಾನಗಳ ಇಂಧನ ಸ್ವಿಚ್‌ನಲ್ಲಿ ತಾಂತ್ರಿಕ ಸಮಸ್ಯೆ ವರದಿಯಾಗಿದೆ. ಈ ಸ್ವಿಚ್‌ಗಳಲ್ಲಿ ‘ರನ್‌’ (ಎಂಜಿನ್‌ಗೆ ಇಂಧನ ಪೂರೈಸುವ ಸ್ಥಿತಿ) ಸ್ಥಿತಿಯಲ್ಲಿ ಇದ್ದಾಗ, ಅವು ಲಾಕ್‌ ಆಗಿರುತ್ತವೆ. ಸ್ವಿಚ್‌ಗಳನ್ನು ‘ರನ್‌’ ಸ್ಥಿತಿಯಿಂದ, ‘ಕಟ್‌ ಆಫ್‌’ (ಇಂಧನ ಪೂರೈಕೆ ಸ್ಥಗಿತ) ಸ್ಥಿತಿಗೆ ತರುವುದಕ್ಕೂ ಮೊದಲು ಲಾಕ್‌ ತೆರೆಯಬೇಕಾಗುತ್ತದೆ. ಪೈಲಟ್‌ಗಳು ಏನು ಮಾಡದೇ ಇದ್ದರೂ ಈ ಲಾಕ್‌ಗಳು ತನ್ನಿಂದತಾನೇ ತೆರೆದುಕೊಳ್ಳುತ್ತಿದ್ದವು’ ಎಂದು ಸುತ್ತೋಲೆಯಲ್ಲಿ ವಿವರಿಸಿತ್ತು.

‘ಪೈಲಟ್‌ಗಳ ಅರಿವಿಗೆ ಬರದೆಯೇ ಈ ಲಾಕ್‌ಗಳು ತೆರೆದುಕೊಳ್ಳುತ್ತಿದ್ದವು. ಅಪ್ಪಿತಪ್ಪಿ ಸ್ವಿಚ್‌ನ ಲಿವರ್‌ಗೆ ಪೈಲಟ್‌ಗಳ ಕೈ ತಾಕಿದರೆ ಅಥವಾ ಮತ್ತಿತರ ಬಾಹ್ಯ ಸ್ಪರ್ಶದಿಂದ ಅವು, ದಿಢೀರ್‌ ಎಂದು ‘ಕಟ್‌ ಆಫ್‌’ ಸ್ಥಿತಿಗೆ ಬದಲಾಗಬಹುದು. ಇದು ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸಬಲ್ಲದು’ ಎಂದು ಎಫ್‌ಎಎ ಕಳವಳ ವ್ಯಕ್ತಪಡಿಸಿತ್ತು.

‘ಬೋಯಿಂಗ್‌ 737 ಸರಣಿಯ ವಿಮಾನದಲ್ಲಿ ಇದ್ದಂತಹದ್ದೇ ವಿನ್ಯಾಸ ಮತ್ತು ತಾಂತ್ರಿಕತೆಯ ಇಂಧನ ಸ್ವಿಚ್‌ಗಳನ್ನು (ಪಾರ್ಟ್‌ ಸಂಖ್ಯೆ: 4TL837-3D) ಬೋಯಿಂಗ್‌ ಬಿ-787 ವಿಮಾನದಲ್ಲೂ ಬಳಸಲಾಗಿದೆ. ಅವುಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸಬೇಕು’ ಎಂದು ಎಫ್‌ಎಎ ಹೇಳಿತ್ತು.

‘ವಿಮಾನಗಳು ನಿಲುಗಡೆ ಸ್ಥಿತಿಯಲ್ಲಿದ್ದಾಗ, ಸ್ವಿಚ್‌ಗಳನ್ನು ಪರಿಶೀಲಿಸಬೇಕು. ಸ್ವಿಚ್‌ಗಳನ್ನು ‘ರನ್‌’ ಸ್ಥಿತಿಗೆ ಬದಲಿಸಿ, ಲಾಕಿಂಗ್‌ ಸೌಲಭ್ಯವನ್ನು ಸಕ್ರಿಯ ಮಾಡಬೇಕು. ನಂತರ ಸ್ವಿಚ್‌ಗಳನ್ನು ಬಲವಂತವಾಗಿ ‘ಕಟ್‌ ಆಫ್‌’ ಸ್ಥಿತಿಗೆ ತಳ್ಳಬೇಕು. ಸ್ವಿಚ್‌ ಸ್ಥಿತಿ ಬದಲಾದರೆ, ಲಾಕ್‌ ವ್ಯವಸ್ಥೆ ದೋಷದಿಂದ ಕೂಡಿದೆ ಎಂದರ್ಥ. ಆ ಬಗ್ಗೆ ಬೋಯಿಂಗ್‌ಗೆ ತಕ್ಷಣವೇ ಮಾಹಿತಿ ನೀಡಿ, ಸ್ವಿಚ್‌ಗಳನ್ನು ಬದಲಿಸಬೇಕು’ ಎಂದು ಸೂಚಿಸಿತ್ತು.

ಅಹಮದಾಬಾದ್‌ನಲ್ಲಿ ಪತನವಾದ ಏರ್‌ ಇಂಡಿಯಾದ ‘ಬಿ-787-8 ವಿಟಿ-ಎಎನ್‌ಬಿ’ ವಿಮಾನದಲ್ಲೂ ಇದೇ ಸ್ವಿಚ್‌ಗಳನ್ನು (ಪಾರ್ಟ್‌ ಸಂಖ್ಯೆ: 4TL837-3D) ಬಳಸಲಾಗಿತ್ತು. ಪತನ ಪ್ರಕರಣದ ತನಿಖೆ ನಡೆಸುತ್ತಿರುವ ಎಎಐಬಿ, ಸ್ವಿಚ್‌ ಕಾರ್ಯಕ್ಷಮತೆಯ ಪರಿಶೀಲನೆಯ ವರದಿ ನೀಡಿ ಎಂದು ಏರ್‌ ಇಂಡಿಯಾವನ್ನು ಕೇಳಿತ್ತು.

ಆದರೆ, ಏರ್‌ ಇಂಡಿಯಾವು ‘ಬಿ-787-8 ವಿಟಿ-ಎಎನ್‌ಬಿ’ ವಿಮಾನದಲ್ಲಿ ಅಂತಹ ಯಾವುದೇ ಪರಿಶೀಲನೆ ನಡೆಸಿರಲಿಲ್ಲ. ಈ ಬಗ್ಗೆ ಎಎಐಬಿಗೆ ಉತ್ತರ ಬರೆದಿದ್ದ ಏರ್‌ ಇಂಡಿಯಾ, ‘ಎಫ್‌ಎಎ ನೀಡಿದ್ದ ಸುತ್ತೋಲೆ ಸಲಹೆ ರೂಪದಲ್ಲಿತ್ತು. ಸ್ವಿಚ್‌ಗಳ ಪರಿಶೀಲನೆ ಕಡ್ಡಾಯವಾಗಿರಲಿಲ್ಲ. ಹೀಗಾಗಿ ನಾವು ಯಾವುದೇ ರೀತಿಯ ಪರಿಶೀಲನೆ ನಡೆಸಿಲ್ಲ’ ಎಂದು ವಿವರಿಸಿತ್ತು. ಈ ಮಾಹಿತಿ ಎಎಐಬಿಯ ಪ್ರಾಥಮಿಕ ವರದಿಯಲ್ಲಿ ಇದೆ.

‘ಇಂಧನ ಪೂರೈಕೆಯ ಸ್ವಿಚ್‌ಗಳು ‘ಕಟ್‌ ಆಫ್‌’ ಸ್ಥಿತಿಗೆ ಬಂದಿದ್ದರಿಂದಲೇ, ಏರ್‌ ಇಂಡಿಯಾ ವಿಮಾನದ ಎಂಜಿನ್‌ಗಳು ಸ್ಥಗಿತವಾಗಿದ್ದವು’ ಎಂಬ ವಿವರ ಪ್ರಾಥಮಿಕ ವರದಿಯಲ್ಲಿ ಇದೆ. ಪೈಲಟ್‌ಗಳು ಸ್ವಿಚ್‌ಗಳ ಸ್ಥಿತಿ ಬದಲಾಯಿಸಿದ್ದರೇ ಅಥವಾ ತಾಂತ್ರಿಕ ಸಮಸ್ಯೆಯ ಕಾರಣದಿಂದ ಸ್ವಿಚ್‌ಗಳು ‘ಕಟ್ ಆಫ್‌’ ಸ್ಥಿತಿಗೆ ಬಂದವೇ ಎಂಬುದರ ಬಗ್ಗೆ ವರದಿಯಲ್ಲಿ ಯಾವುದೇ ವಿವರಣೆ ಇಲ್ಲ.

ಹಾರಾಟಕ್ಕೂ ಮುನ್ನ ದೋಷ ಸರಿಪಡಿಸಲಾಗಿತ್ತು

ಅಹಮದಾಬಾದ್‌ನಿಂದ ಲಂಡನ್‌ನ ಪ್ರಯಾಣಕ್ಕೂ ಮುನ್ನ ಏರ್‌ ಇಂಡಿಯಾದ ‘ಬಿ-787-8 ವಿಟಿ-ಎಎನ್‌ಬಿ’ ದೆಹಲಿಯಿಂದ ಅಹಮದಾಬಾದ್‌ಗೆ ಬಂದಿತ್ತು. ಈ ಪ್ರಯಾಣದ ವೇಳೆ ವಿಮಾನದ ಸ್ಥಿರೀಕರಣ ವ್ಯವಸ್ಥೆಯಲ್ಲಿ ಸಮಸ್ಯೆ ಇದೆ ಎಂಬುದನ್ನು ಪೈಲಟ್‌ಗಳು ಲಾಗ್‌ ಪುಸ್ತಕದಲ್ಲಿ ‘STAB POS XDCR’ ಎಂದು ನಮೂದಿಸಿದ್ದರು. ವಿಮಾನವು ಹಾರಾಟದ ಸ್ಥಿತಿಯಲ್ಲಿ ಇರುವಾಗ ಅದರ ತಳಭಾಗವು ನೆಲದ ಮೇಲ್ಮೈಗೆ ಹೊಂದಿಕೊಳ್ಳುವಂತೆ ಇರಬೇಕು. ಅಂದರೆ ವಿಮಾನದ ಮುಂಭಾಗ ಮತ್ತು ಹಿಂಭಾಗ ಎರಡೂ ಒಂದೇ ಎತ್ತರದಲ್ಲಿದಲ್ಲಿರಬೇಕು. ವಿಮಾನವು ಮುಂಭಾಗ ಮತ್ತು ಹಿಂಭಾಗಕ್ಕೆ ಬಾಗಿಕೊಂಡಿರಬಾರದು. ವಿಮಾನವನ್ನು ಹೀಗೆ ಕಾಯ್ದುಕೊಳ್ಳುವ ವ್ಯವಸ್ಥೆಯನ್ನು ‘ಸ್ಟೆಬಿಲೈಸರ್‌ ಪೊಸಿಷನ್‌ ಟ್ರಾನ್ಸ್‌ಡ್ಯೂಸರ್‌’ ಎಂದು ಕರೆಯಲಾಗುತ್ತದೆ. ಈ ವ್ಯವಸ್ಥೆಯಲ್ಲಿ ಸಮಸ್ಯೆ ಇದೆ ಎಂಬುದನ್ನು ಪೈಲಟ್‌ಗಳು ‘STAB POS XDCR’ ಎಂಬ ಕೋಡ್‌ನ ಮೂಲಕ ಸೂಚಿಸಿದ್ದರು. ಈ ಸಮಸ್ಯೆಯನ್ನು ಏರ್‌ ಇಂಡಿಯಾದ ಎಂಜಿನಿಯರ್‌ಗಳು ಸರಿಪಡಿಸಿದ್ದರು. ಆನಂತರ ವಿಮಾನವನ್ನು ಲಂಡನ್‌ ಪ್ರಯಾಣಕ್ಕೆ ಸಿದ್ಧಗೊಳಿಸಲಾಗಿತ್ತು ಎಂಬ ಮಾಹಿತಿ ತನಿಖಾ ವರದಿಯಲ್ಲಿ ಇದೆ. ಆದರೆ ವಿಮಾನ ಪತನವಾಗುವುದಕ್ಕೆ ಇದೂ ಒಂದು ಕಾರಣವೇ ಅಥವಾ ಅಲ್ಲವೇ ಎಂಬುದರ ಬಗ್ಗೆ ವರದಿಯಲ್ಲಿ ಯಾವುದೇ ವಿವರಣೆ ಇಲ್ಲ.


Spread the love
Share:

administrator

Leave a Reply

Your email address will not be published. Required fields are marked *