ಅಹಮದಾಬಾದ್ ಏರ್ ಇಂಡಿಯಾ ದುರಂತ: 260 ಮಂದಿಯನ್ನು ಬಲಿಪಡೆದ ವಿಮಾನದಿಂದ ಪವಾಡಸದೃಶ ಬದುಕುಳಿದ ವಿಶ್ವಾಸ್ ಕುಮಾರ್ ಕರುಣಾಜನಕ ಕಥೆ

ಲಂಡನ್ :ಅಹಮ್ಮದಾಬಾದ್ ಏರ್ ಇಂಡಿಯಾ ದುರಂತ ಭಾರತ ಮಾತ್ರವಲ್ಲ ಜಗತ್ತನ್ನೇ ಬೆಚ್ಚಿ ಬೀಳಿಸಿದ ಘಟನೆ. ವಿಮಾನದಲ್ಲಿದ ಪ್ರಯಾಣಿಕರು, ಸಿಬ್ಬಂದಿಳು ಸೇರಿ 241 ಮಂದಿ ಈ ದುರಂತದಲ್ಲಿ ಮಡಿದಿದ್ದಾರೆ. ಇತ್ತ ವೈದ್ಯಕೀಯ ಹಾಸ್ಟೆಲ್ ಮೇಲೆ ವಿಮಾನ ಪತನಗೊಂಡ ಕಾರಣ ವಿದ್ಯಾರ್ಥಿಗಳು ಬಲಿಯಾಗಿದ್ದರು. ಹೀಗಾಗಿ ದುರಂತದಲ್ಲಿ ಒಟ್ಟು ಸಾವಿನ ಸಂಖ್ಯೆ 260. ಈ ದುರಂತದಲ್ಲಿ ಬದುಕುಳಿದ ಏಕೈಕ ಪ್ರಯಾಣಿಕ ವಿಶ್ವಾಸ್ ಕುಮಾರ್. ಭಾರತ ಮೂಲದ ಬ್ರಿಟಿಷ್ ಪ್ರಜೆ ವಿಶ್ವಾಸ್ ಕುಮಾರ್ ತಮ್ಮ ಸಹೋದರನ ಜೊತೆ ಪ್ರಯಾಣ ಬೆಳೆಸಿದ್ದರು. ಆದರೆ ಸಹೋದರ ದುರಂತದಲ್ಲಿ ಮಡಿದರೆ ವಿಶ್ವಾಸ್ ಕುಮಾರ್ ಬದುಕುಳಿದಿದ್ದರು. ವಿಶ್ವಾಸ್ ಕುಮಾರ್ ಲಕ್ಕಿ ಮ್ಯಾನ್ ಎಂದೇ ಗುರುತಿಸಿಕೊಂಡಿದ್ದರು. 241 ಮಂದಿಯನ್ನು ಬಲಿಪಡೆದ ವಿಮಾನದಲ್ಲಿ ಬದುಕುಳಿದ ಏಕೈಕ ಪ್ರಯಾಣಿಕ ವಿಶ್ವಾಸ ಕುಮಾರ್. ಆದರೆ ವಿಶ್ವಾಸ್ ಕುಮಾರ್ ಸದ್ಯದ ಪರಿಸ್ಥಿತಿ ಶೋಚನೀಯವಾಗಿದೆ.

ಎಲ್ಲಾ ನೆರವು ಸಿಕ್ಕಿದರೂ ವಿಶ್ವಾಸ್ ಕುಮಾರ್ ಪರಿಸ್ಥಿತಿ ಏನಾಯ್ತು?
ಜೂನ್ 12ರಂದು ಅಹಮ್ಮದಾಬಾದ್‌ನಿಂದ ಹೊರ ಏರ್ ಇಂಡಿಯಾ ವಿಮಾನ ಕೆಲವೇ ಸೆಕೆಂಡ್‌ಗಳಲ್ಲಿ ಪತನಗೊಂಡಿತ್ತು. ಇಂಧನ ಭರ್ತಿಯಾಗಿದ್ದ ಕಾರಣ ಬೆಂಕಿಯ ಜ್ವಾಲೆಗೆ ಹತ್ತಿರದ ಕಟ್ಟಡಳು ಸುಟ್ಟು ಬೂದಿಯಾಗಿತ್ತು. ಸಹೋದರ ಅಜಯ್ ಜೊತೆ ಪ್ರಾಯಣ ಬೆಳೆಸಿದ್ದ ವಿಶ್ವಾಸ್ ಕುಮಾರ್ ಮಾತ್ರ ಪವಾಡ ಸದೃಶ್ಯ ಬದುಕುಳಿದಿದ್ದ. ಆದರೆ ಈ ಘಟನೆಯನ್ನು ವಿಶ್ವಾಸ್ ಕುಮಾರ್‌ಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಒಂದೆಡೆ ತನ್ನ ಬೆಂಬಲವಾಗಿ ನಿಂತಿದ್ದ ಸಹೋದರನ ಸಾವು, ಮತ್ತೊಂದೆಡೆ ಈ ಭಯಾನಕ ದುರ್ಘಟನೆ ವಿಶ್ವಾಸ್ ಕುಮಾರ್ ಮಾನಸಿಕವಾಗಿ ಹಾಗೂ ದೈಹಿಕವಾಗಿ ಜರ್ಝರಿತನನ್ನಾಗಿ ಮಾಡಿದೆ.
ಪತ್ನಿ, ಮಗನ ಜೊತೆ ಮಾತಿಲ್ಲ, ಏಕಾಂಗಿಯಾದ ವಿಶ್ವಾಸ್
ವಿಶ್ವಾಸ್ ಕುಮಾರ್ ಮೊದಲಿನಂತೆ ಇರಲು ಬಯಸುತ್ತಿದ್ದಾರೆ. ಆದರೆ ಸಾಧ್ಯವಾಗುತ್ತಿಲ್ಲ. ದುರಂತ ಘಟನೆ ಮಾಸುತ್ತಿಲ್ಲ. ತಾನು ಈ ದುರಂತದಲ್ಲಿ ಬುದುಕುಳಿದಿದ್ದೇನೆ ಎಂದು ನಂಬಲು ಸಾಧ್ಯವಾಗುತ್ತಿಲ್ಲ. ಸಹೋದರನ ಅಗಲಿಕೆ ನೋವುಗಳಿಂದ ವಿಶ್ವಾಸ್ ಕುಮಾರ್ ಮಾನಸಿಕವಾಗಿ ಕುಗ್ಗಿದ್ದಾರೆ. ಮನೆಯಲ್ಲಿದ್ದರೂ ಕೋಣೆಯೊಳಗೆ ಸೇರಿಕೊಂಡು ಏಕಾಂಗಿಯಾಗಿರುತ್ತಾರೆ. ಪತ್ನಿ, ಮಗನ ಜೊತೆ ಮಾತನಾಡಲು ಆಗುತ್ತಿಲ್ಲ. ಏಕಾಂಗಿತನದಲ್ಲೇ ಕಳೆಯುತ್ತಿದ್ದಾರೆ. ಎಲ್ಲವೂ ಮುಗಿದಂತೆ ಭಾಸವಾಗುತ್ತಿದೆ ಎಂದು ವಿಶ್ವಾಸ್ ಕುಮಾರ್ ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಒತ್ತಡ, ಆಘಾತ, ನೋವಿನಿಂದ ಹೊರಬಂದಿಲ್ಲ ವಿಶ್ವಾಸ್ ಕುಮಾರ್
ದುರಂತದಿಂದ ಆಘಾತದಿಂದ ವಿಶ್ವಾಸ್ ಕುಮಾರ್ ಹೊರಬಂದಿಲ್ಲ. ಸಹೋದರನ ಅಗಲಿಕೆ, ತಾಯಿಯ ನೋವು, ಜೀವನದಲ್ಲಿ ವಿಶ್ವಾಸ ಕಳೆದುಕೊಂಡ ವಿಶ್ವಾಸ್ ಕುಮಾರ್ ದೈಹಿಕವಾಗಿ ಚಿಕಿತ್ಸೆ ಪಡೆದಿದ್ದಾರೆ ಹೊರತು ಮಾನಸಿಕವಾಗಿ ಚಿಕಿತ್ಸೆ ಪಡೆದಿಲ್ಲ. ಪಸಿಸ್ಥಿತಿ ಕೈಮೀರುತ್ತಿರುವಂತೆ ಭಾಸವಾಗುತ್ತಿದೆ ಎಂದು ವಿಶ್ವಾಸ್ ಕುಮಾರ್ ಸಂದರ್ಶನದಲ್ಲಿ ಹೇಳಿದ್ದಾರೆ.
ತಾಯಿ ಬಾಗಿಲ ಬಳಿ ಕುಳಿತು ಸಹೋದರನ ನೆನಪಲ್ಲೇ ದಿನ ದೂಡುತ್ತಿದ್ದಾರೆ
ಸಹೋದರ ಅಜಯ್ ನಮ್ಮಲ್ಲರ ಶಕ್ತಿಯಾಗಿದ್ದ. ಅಜಯ್ ಸಾವಿನ ನೋವು ನನಗೆ ಮಾತ್ರವಲ್ಲ, ನಮ್ಮ ಕುಟುಂಬದಲ್ಲಿ ಎಲ್ಲರಿಗೂ ಆಘಾತ ನೀಡಿದೆ. ತಾಯಿ ಪ್ರತಿ ದಿನ ಬಾಗಿಲ ಬಳಿ ಕುಳಿತುಕೊಳ್ಳುತ್ತಾರೆ. ಯಾರೊಂದಿಗೆ ಮಾತನಾಡುತ್ತಿಲ್ಲ. ನನಗೂ ಮಾತನಾಡಬೇಕು ಅನಿಸುತ್ತಿಲ್ಲ. ಮನೆ ಮೌನವಾಗಿದೆ. ನಾನು ಮಾನಸಿಕವಾಗಿ ಸಮಸ್ಯೆ ಎದುರಿಸುತ್ತಿದ್ದೇನೆ ಎಂದು ವಿಶ್ವಾಸ್ ಕುಮಾರ್ ಹೇಳಿದ್ದಾರೆ.
ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ, ಆರ್ಥಿಕ ಸಮಸ್ಯೆ ಹೆಚ್ಚಾಗುತ್ತಿದೆ
ಚಿಕಿತ್ಸೆ ಪಡೆದಿದ್ದೇನೆ. ಆದರೆ ನೋವು ಮಾಸಿಲ್ಲ. ಕೆಲಸ ಮಾಡಲು ಆಗುತ್ತಿಲ್ಲ. ಡ್ರೈವ್ ಮಾಡಲು ಸಾಧ್ಯವಾಗುತ್ತಿಲ್ಲ. ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ. ಪರಿಹಾರ ಮೊತ್ತವಾಗಿ 25 ಲಕ್ಷ ರೂಪಾಯಿ ನೀಡಿದ್ದಾರೆ. ಆದರೆ ಅದು ಇಲ್ಲಿನ ಪರಿಸ್ಥಿತಿಗೆ ಸಾಲುತ್ತಿಲ್ಲ. ಸುಂದರವಾಗಿದ್ದ ಜೀವನ ದುಸ್ತರವಾಗಿದೆ. ಆರ್ಥಿಕ ಸಂಪನ್ಮೂಲಗಳು ನಿಂತು ಹೋಗಿದೆ. ಮಾನಸಿಕ ಸಮಸ್ಯೆಗಳು ಕಾಡುತ್ತಿದೆ ಎಂದು ವಿಶ್ವಾಸ್ ಕುಮಾರ್ ಹೇಳಿದ್ದಾರೆ. ಸಮಸ್ಯೆಗಳ ಕುರಿತು ಹೇಳಿಕೊಂಡು ಪರಿಹಾರ ಮಾರ್ಗ ಸೂಚಿಸಲು ಏರ್ ಇಂಡಿಯಾ ಜೊತೆ ಮಾತುಕತೆಗೆ ಮನವಿ ಮಾಡಲಾಗಿತ್ತು. ಆದರೆ ನನ್ನ ಮನವಿ ತಿರಸ್ಕರಿಸಲಾಗಿದೆ. ಸದ್ಯ ಏಕಾಂಗಿಯಾಗಿದ್ದೇನೆ. ಮುಂದೇನು ತೋಚದಂತಾಗಿದೆ ಎಂದು ವಿಶ್ವಾಸ್ ಕುಮಾರ್ ಹೇಳಿದ್ದಾರೆ.