ಕರ್ನಾಟಕದ ಬಳಿಕ ಕೇರಳದಲ್ಲೂ ಹಿಜಾಬ್ ವಿವಾದ: ಕೊಚ್ಚಿಯ ಸೇಂಟ್ ರೀಟಾ ಶಾಲೆಯಲ್ಲಿ ವಿದ್ಯಾರ್ಥಿನಿಗೆ ಪ್ರವೇಶ ನಿರಾಕರಣೆ; 2 ದಿನ ಶಾಲೆಗೆ ಬೀಗ!

ಕೇರಳ: ಕರ್ನಾಟಕದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿ, ಇದೀಗ ಸುಪ್ರೀಕೋರ್ಟ್ ಮೆಟ್ಟಿಲೇರಿರುವ ಹಿಜಾಬ್ ವಿವಾದ ಇದೀಗ ಕೇರಳದಲ್ಲೂ ಕೇಳಿ ಬಂದಿದ್ದು. ಹಿಜಾಬ ಧರಿಸಿ ಬಂದಿದ್ದ ವಿದ್ಯಾರ್ಥಿನಿಗೆ ಪ್ರವೇಶ ನಿರಾಕರಿಸಿದ ಬಳಿಕ ದೊಡ್ಡ ಹೈಡ್ರಾಮಾವೇ ನಡೆದು ಕ್ಯಾಥೋಲಿಕ್ ಶಾಲೆಗೆ 2ನೇ ದಿನ ಬೀಗ ಹಾಕಲಾಗಿದೆ. ಇದೀಗ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದ್ದು ಶಾಲೆಗೆ ಸಂಪೂರ್ಣ ಪೊಲೀಸ್ ಭದ್ರತೆ ನೀಡಲು ಹೈಕೋರ್ಟ್ ಆದೇಶಿಸಿದೆ.

ಕೇರಳದ ಕೊಚ್ಚಿಯ ಪಲ್ಲೂರುತಿಯಲ್ಲಿರುವ ಲ್ಯಾಟಿನ್ ಕ್ಯಾಥೋಲಿಕ್ ಚರ್ಚ್ ನಡೆಸುತ್ತಿರುವ ಸೇಂಟ್ ರೀಟಾ ಪಬ್ಲಿಕ್ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಗೆ ಪ್ರವೇಶ ನಿರಾಕರಿಸಲಾಗಿದೆ. ಈ ಬಗ್ಗೆ ಶಾಲೆಯ ಆಡಳಿತ ಮಂಡಳಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ವಿವಾದ ಎಬ್ಬಿಸಿದ್ದ ವಿಧ್ಯಾರ್ಥಿನಿ ಈ ವರ್ಷದ ಜೂನ್‌ನಲ್ಲಿ ಶಾಲೆಗೆ ಸೇರಿಕೊಂಡಿದ್ದಾಳೆ. ಆ ವೇಳೆಗೆ ಆಕೆಗೆ ಶಾಲೆಯ ಸಮವಸ್ತ್ರದ ಬಗ್ಗೆ ಮಾಹಿತಿ ನೀಡಲಾಗಿತ್ತು, ಅಲ್ಲದೆ ಅವರ ಮನೆಯವರು ಸಂಪೂರ್ಣ ಒಪ್ಪಿಗೆ ನೀಡಿದ್ದರು. ಶಾಲೆಯಲ್ಲಿ 450 ಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ 117 ಮಂದಿ ಮುಸ್ಲಿಮರು. ಆದರೆ ಈ ವಿಧ್ಯಾರ್ಥಿನಿ ಮಾತ್ರ ಹಿಜಾಬ್ ಬೇಕು ಎಂದು ವಿವಾದ ಸೃಷ್ಠಿಸಿದ್ದಾಳೆ ಎಂದು ತಿಳಿಸಿದೆ. ಅಲ್ಲದೆ ಶಾಲೆಯ ಹೊರಗೆ ಗಲಾಟೆ ಮಾಡಿವರು ಸ್ಥಳೀಯರು ಅಲ್ಲ ಎಂದು ಹೇಳಿದೆ.
ವಿದ್ಯಾರ್ಥಿನಿ ಹಿಜಾಬ್ ಧರಿಸಲು ಒತ್ತಾಯಿಸಿದ್ದರಿಂದ ಉಂಟಾದ ಉದ್ವಿಗ್ನತೆಯ ನಂತರ ಶಾಲೆಗೆ ಎರಡು ದಿನಗಳ ರಜೆ ಘೋಷಿಸಲಾಗಿದೆ. ಈ ಸಂಬಂಧ ನಡೆದ ಪೋಷಕರ ಸಭೆಯಲ್ಲೂ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಶಾಲೆಯ ನಿರ್ಧಾರಕ್ಕೆ ನಿರ್ದಿಷ್ಟ ಸಮುದಾಯದ ವಿದ್ಯಾರ್ಥಿಗಳ ಪೋಷಕರು ವಿರೋಧ ವ್ಯಕ್ತಪಡಿಸಿದರು ಎನ್ನಲಾಗಿದೆ. ಹೀಗಾಗಿ ಸಭೆಯಲ್ಲಿ ಒಮ್ಮತ ಮೂಡದೇ ಪೋಷಕರು ಮತ್ತು ಶಾಲಾ ಆಡಳಿತ ಸಿಬ್ಬಂದಿ ನಡುವೆ ವಾಕ್ಸಮರ ನಡೆದಿದೆ. ಬಳಿಕ ಮುಂಜಾಗ್ರತಾ ಕ್ರಮವಾಗಿ ಸಿಬಿಎಸ್ಇ-ಸಂಯೋಜಿತ ಶಾಲೆಯನ್ನು 2 ದಿನ ಮುಚ್ಚಲು ಆಡಳಿತ ಸಿಬ್ಬಂದಿ ಘೋಷಣೆ ಮಾಡಿದೆ.
ರಜೆ ಘೋಷಿಸುವುದರ ಹಿಂದೆ ಬೇರೆ ಕಾರಣಗಳಿವೆ ಎಂದು ಶಾಲೆಯ ಸಿಸ್ಟರ್ ಹೆಲೀನಾ ಹೇಳಿದ್ದು, ಈ ವಿವಾದಿಂದಾಗಿ ಶಾಲೆಯ ಶಿಕ್ಷಕರು ಮತ್ತು ಸಿಬ್ಬಂದಿಗಳಿಗೆ ಮಾನಸಿಕ ಆಘಾತವಾಗಿದ್ದು, ಅವರಿಗೆ ಸ್ವಲ್ಪ ವಿರಾಮ ಬೇಕಿತ್ತು. ಅಲ್ಲದೆ ಬುಧವಾರದಿಂದ ಪ್ರಾರಂಭವಾಗುವ ಪರೀಕ್ಷೆಗಳಿಗೆ ತಯಾರಿ ನಡೆಸಲು ವಿದ್ಯಾರ್ಥಿಗಳಿಗೆ ಸಮಯ ನೀಡಲಾಯಿತು. ಆ ದಿನ ಶಾಲೆ ಮತ್ತೆ ತೆರೆಯುತ್ತದೆ” ಎಂದು ಅವರು ಹೇಳಿದರು.
ಏತನ್ಮಧ್ಯೆ, ಶಿಕ್ಷಣ ಸಚಿವ ವಿ ಶಿವನ್‌ಕುಟ್ಟಿ ಅವರು ನಿಗದಿತ ಶಾಲಾ ಸಮವಸ್ತ್ರದಲ್ಲಿ ಯಾವುದೇ ಮಾರ್ಪಾಡು ಮಾಡಲು ಅವಕಾಶ ನೀಡಲಾಗುವುದಿಲ್ಲ ಎಂದು ಪುನರುಚ್ಚರಿಸಿದರು, ಸಮವಸ್ತ್ರ ನಿಯಮವು ಎಲ್ಲಾ ವಿದ್ಯಾರ್ಥಿಗಳಿಗೆ ಸಮಾನವಾಗಿ ಅನ್ವಯಿಸುತ್ತದೆ ಎಂದು ಒತ್ತಿ ಹೇಳಿದರು.