ನಟಿ ಶಿಲ್ಪಾ ಶೆಟ್ಟಿ ಮತ್ತು ಪತಿ ರಾಜ್ ಕುಂದ್ರಾ ವಿರುದ್ಧ ₹60 ಕೋಟಿ ವಂಚನೆ ಆರೋಪ

ಕಳೆದ ಕೆಲವು ವರ್ಷಗಳಿಂದ ನಟಿ ಶಿಲ್ಪಾ ಶೆಟ್ಟಿಮತ್ತು ಪತಿ ರಾಜ್ ಕುಂದ್ರಾ ಹಲವು ಬಾರಿ ವಿವಾದಗಳಲ್ಲಿ ಸಿಲುಕಿಕೊಂಡಿದ್ದಾರೆ. ರಾಜ್ ಕುಂದ್ರಾ ಅವರನ್ನು ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಈಗ ಶಿಲ್ಪಾ ಮತ್ತು ರಾಜ್ ಅವರ ಸಮಸ್ಯೆಗಳು ಮತ್ತೆ ಹೆಚ್ಚಿವೆ. ಈ ದಂಪತಿ ವಂಚನೆ ಮಾಡಿದ್ದಾರೆ ಎಂದು ಮುಂಬೈ ಮೂಲದ ಉದ್ಯಮಿಯೊಬ್ಬರು ಆರೋಪಿಸಿದ್ದಾರೆ. ಈ ವಂಚನೆ ಮೊತ್ತ 60 ಕೋಟಿ ರೂಪಾಯಿಗೂ ಅಧಿಕವಾಗಿದೆ.

ಶಿಲ್ಪಾ ಮತ್ತು ರಾಜ್ ವಿರುದ್ಧ ಆರ್ಥಿಕ ಅಪರಾಧಗಳ ವಿಭಾಗ (EOW) ಜುಹು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ. ವಂಚನೆ ಮೊತ್ತ 10 ಕೋಟಿ ರೂ.ಗಳಿಗಿಂತ ಹೆಚ್ಚಿರುವುದರಿಂದ ಪೊಲೀಸರು ಪ್ರಕರಣವನ್ನು ಆರ್ಥಿಕ ಅಪರಾಧಗಳ ವಿಭಾಗಕ್ಕೆ (EOW) ವರ್ಗಾಯಿಸಿದ್ದಾರೆ. ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ವಿರುದ್ಧ 60 ವರ್ಷದ ದೀಪಕ್ ಕೊಠಾರಿ 60 ಕೋಟಿ ರೂ. ವಂಚನೆ ಪ್ರಕರಣ ದಾಖಲಿಸಿದ್ದಾರೆ. ದೀಪಕ್ ಕೊಠಾರಿ ಲೋಟಸ್ ಕ್ಯಾಪಿಟಲ್ ಫೈನಾನ್ಷಿಯಲ್ ಸರ್ವೀಸಸ್‌ನ ನಿರ್ದೇಶಕರಾಗಿದ್ದಾರೆ.
ದೀಪಕ್ ಕೊಠಾರಿ ಸಲ್ಲಿಸಿದ ದೂರಿನ ಪ್ರಕಾರ, ಶಿಲ್ಪಾ ಮತ್ತು ರಾಜ್ ಕುಂದ್ರಾ ಅವರನ್ನು ಮೀಡಿಯೇಟರ್ ರಾಜೇಶ್ ಆರ್ಯ ಎಂಬುವವರು ಪರಿಚಯಿಸಿದ್ದರು. ಈ ದಂಪತಿ ಆ ಸಮಯದಲ್ಲಿ ‘ಬೆಸ್ಟ್ ಡೀಲ್ ಟಿವಿ ಪ್ರೈವೇಟ್ ಲಿಮಿಟೆಡ್’ನ ನಿರ್ದೇಶಕರಾಗಿದ್ದರು. ಆರೋಪಿ ಶಿಲ್ಪಾ ಮತ್ತು ರಾಜ್ 2015ರಲ್ಲಿ ದೀಪಕ್ ಬಳಿ 75 ಕೋಟಿ ರೂ. ಸಾಲಕ್ಕಾಗಿ ಬೇಡಿಕೆ ಇಟ್ಟಿದ್ದರು. ಅದಕ್ಕೆ ಅವರು ಶೇಕಡಾ 12 ರಷ್ಟು ಬಡ್ಡಿಯನ್ನು ಪಾವತಿಸಬೇಕಾಯಿತು. ಈ ಬಡ್ಡಿಯನ್ನು ತಪ್ಪಿಸಲು, ಸೆಲೆಬ್ರಿಟಿ ದಂಪತಿಗಳು ಮೊತ್ತವನ್ನು ಸಾಲದ ಬದಲು ಕಂಪನಿಯಲ್ಲಿ ಹೂಡಿಕೆ ಎಂದು ತೋರಿಸಿದರು. ಈ ದಂಪತಿಗೆ ದೀಪಕ್ ಮೊದಲ ಕಂತಲ್ಲಿ 31.95 ಕೋಟಿ ರೂಪಾಯಿ ಹಾಗೂ ಎರಡನೇ ಕಂತಲ್ಲಿ 28.54 ಕೋಟಿ ರೂಪಾಯಿ ನೀಡಿದ್ದರು. ಈ ಮೂಲಕ ಒಟ್ಟೂ 60.48 ಕೋಟಿ ಸಾಲವನ್ನು ಈ ದಂಪತಿಗೆ ನೀಡಲಾಯಿತು. ರಾಜ್ ಮತ್ತು ಶಿಲ್ಪಾ ಪ್ರತಿ ತಿಂಗಳು ಮೊತ್ತವನ್ನು ಹಿಂದಿರುಗಿಸುವುದಾಗಿ ಭರವಸೆ ನೀಡಿದ್ದರು. ಆದರೆ ಅದು ಈಡೇರಲಿಲ್ಲ.
ಎಫ್‌ಐಆರ್ ಪ್ರಕಾರ, ಶಿಲ್ಪಾ ಶೆಟ್ಟಿ ಈ ವಹಿವಾಟಿಗೆ ಸಾಕ್ಷಿಯಾಗಿದ್ದರು. ಆದರೆ ಅವರು ಸೆಪ್ಟೆಂಬರ್ 2016ರಲ್ಲಿ ಕಂಪನಿಯ ನಿರ್ದೇಶಕಿ ಹುದ್ದೆಗೆ ರಾಜೀನಾಮೆ ನೀಡಿದರು. ನಂತರ ದೀಪಕ್ ಕೊಠಾರಿ ಅವರಿಗೆ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಅವರ ಹಿಂದಿನ ಚಟುವಟಿಕೆಗಳ ಬಗ್ಗೆ ತಿಳಿದುಕೊಂಡರು. ಈಗ ಶಿಲ್ಪಾ ಮತ್ತು ರಾಜ್ ಈ ಹಣ ಹಿಂದಿರುಗಿಸಿಲ್ಲ ಎನ್ನಲಾಗಿದೆ. ಇದಕ್ಕಾಗಿ ದೂರು ದಾಖಲಾಗಿದೆ.
