ಸಿಗ್ನಲ್ ದೋಷದಿಂದ ಜನಶತಾಬ್ದಿ ತಡ: ಪ್ರಯಾಣಿಕರಿಗೆ ತೀವ್ರ ತೊಂದರೆ

ಶಿವಮೊಗ್ಗ: ಸಿಗ್ನಲ್ ಸಮಸ್ಯೆಯಿಂದ ರಾತ್ರಿ 9.40ಕ್ಕೆ ಶಿವಮೊಗ್ಗ ತಲುಪಬೇಕಿದ್ದ ಜನ ಶತಾಬ್ದಿ ರೈಲು ಎರಡು ಗಂಟೆ ಕಾಲ ತುಮಕೂರು – ತಿಪಟೂರು ನಡುವಿನ ಬಾಣಸಂದ್ರ ಸಮೀಪ ನಿಂತಿತ್ತು. ರೈಲು ಮತ್ತೆ ಸಂಪಿಗೆ ರಸ್ತೆ ನಿಲ್ದಾಣದಲ್ಲಿ ನಿಂತಿದ್ದರಿಂದ ಸುಮಾರು ಮೂರು ಗಂಟೆ ಸಮಯದಿಂದ ಪ್ರಯಾಣಿಕರು ಹೈರಾಣಾಗಿದ್ದಾರೆ.

6.30ಕ್ಕೆ ತುಮಕೂರು ದಾಟಿದ್ದ ರೈಲು ಬಾಣಸಂದ್ರ ರೈಲು ನಿಲ್ದಾಣಕ್ಕೆ ಕೆಲವೇ ಕಿ.ಮೀ ದೂರದಲ್ಲಿ ನಿಂತಿದೆ. ಬಾಣಸಂದ್ರದಿಂದ 9.05ಕ್ಕೆ ಹೊರಟ ರೈಲು ಸಂಪಿಗೆ ರೋಡು ರೈಲ್ವೆ ನಿಲ್ದಾಣದಲ್ಲಿ ನಿಂತಿದೆ. ರೈಲ್ವೆ ಇಲಾಖೆ ತುರ್ತಾಗಿ ಸ್ಪಂದಿಸಿ ಪ್ರಯಾಣಕ್ಕೆ ಅನುವು ಮಾಡಿಕೊಡಲು ಶಿವಮೊಗ್ಗದ ಪ್ರಯಾಣಿಕರು ಒತ್ತಾಯಿಸಿದ್ದಾರೆ.
ಎಲ್ಲ ರೈಲುಗಳು ಬಂದ್
ಹುಬ್ಬಳ್ಳಿ ಮೂಲಕ ಹಾಗೂ ಶಿವಮೊಗ್ಗ ಮೂಲಕ ಬರುವ ಎಲ್ಲ ರೈಲುಗಳು ಸಹ ನಿಂತಿರುವುದಾಗಿ ಪ್ರಯಾಣಿಕರು ತಿಳಿಸಿದ್ದಾರೆ. ಸಿಗ್ನಲ್ ನೀಡುವ ಕೇಬಲ್ ತುಂಡಾಗಿರುವುದರಿಂದ ತೊಂದರೆಯಾಗಿದೆ ಎನ್ನುತ್ತಿದ್ದಾರೆ.