ಪಾನಿಪುರಿ ತಿಂದು 25ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ಶಿರಾ:ತಾಲ್ಲೂಕಿನ ಬುಕ್ಕಾಪಟ್ಟಣದಲ್ಲಿ ಪಾನಿಪುರಿ ತಿಂದು 25ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ.

ಬುಕ್ಕಾಪಟ್ಟಣ ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿಗಳು ‘ಶ್ರೀನಾಥ್’ ಪಾನಿಪುರಿ ಅಂಗಡಿ ಮಾಲೀಕನಿಗೆ ಎಚ್ಚರಿಕೆ ನೀಡಿ ಆಹಾರ ಮಾದರಿಗಳನ್ನು ಪರೀಕ್ಷೆಗಾಗಿ ತೆಗೆದುಕೊಂಡು ಹೋಗಿದ್ದಾರೆ.
ಜಿಲ್ಲಾ ಆಹಾರ ಗುಣಮಟ್ಟ ಸುರಕ್ಷತೆ ಅಧಿಕಾರಿ ಚಂದ್ರಪ್ಪ ಅವರು ಗ್ರಾಮಕ್ಕೆ ಭೇಟಿ ನೀಡಿ ಅಂಗಡಿ ಮಾಲೀಕನನ್ನು ಕರೆಸಿ ನೋಟಿಸ್ ನೀಡಿದ್ದಾರೆ.
ಹಿಂದೆ ಒಂದು ಬಾರಿ ಸ್ಥಳಕ್ಕೆ ಭೇಟಿ ನೀಡಿ ಎಚ್ಚರಿಕೆ ನೀಡಿ ನೋಟಿಸ್ ನೀಡಿದ್ದರೂ ಈತ ಸ್ವಚ್ಛತೆ ಹಾಗೂ ಆಹಾರ ಸುರಕ್ಷತೆ ಬಗ್ಗೆ ಗಮನ ಹರಿಸಿಲ್ಲ. ಆಹಾರದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಿದ್ದು, ಫಲಿತಾಂಶ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಗುಣಮಟ್ಟ ಸುರಕ್ಷತೆ ಅಧಿಕಾರಿ ಚಂದ್ರಪ್ಪ ತಿಳಿಸಿದ್ದಾರೆ.
