ಭಾರತ ಏಕೆ ಖರೀದಿಸಿತು 26 ರಫೇಲ್ ಎಂ?

ಭಾರತ 63,000 ಕೋಟಿ ರೂಪಾಯಿಗಳ ವೆಚ್ಚದಲ್ಲಿ 26 ರಫೇಲ್ ಎಂ ಯುದ್ಧ ವಿಮಾನಗಳನ್ನು ಖರೀದಿಸುವ ನಿರ್ಧಾರಕ್ಕೆ ಬಂದಿರುವುದು ಈಗ ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ. ಭಾರತ ಏಕೆ 26 ವಿಮಾನಗಳನ್ನು ಖರೀದಿಸುತ್ತಿದೆ? 25 ವಿಮಾನಗಳನ್ನು ಖರೀದಿಸಿದ್ದರೆ ಸಾಕಿತ್ತಲವೇ ಎಂದು ಚರ್ಚೆಗಳಾಗುತ್ತಿವೆ. ನಾವು ಇದನ್ನು ಸರಳವಾಗಿ ವಿವರಿಸೋಣ. ಭಾರತ 2004ರಿಂದ 2010ರ ನಡುವೆ ಖರೀದಿಸಿದ್ದ ಹಳೆಯ ಮಿಗ್-29ಕೆ ಯುದ್ಧ ವಿಮಾನಗಳು ಸಾಕಷ್ಟು ಹಳತಾಗಿದ್ದು, ತೊಂದರೆ ಉಂಟುಮಾಡುತ್ತಿವೆ. ಆದ್ದರಿಂದ ಭಾರತೀಯ ನೌಕಾ ಸೇನೆ ಅವುಗಳ ಬದಲಿಗೆ ಮಿಗ್-29ಕೆ ಯುದ್ಧ ವಿಮಾನಗಳನ್ನು ಖರೀದಿಸಲು ನಿರ್ಧರಿಸಿದೆ. ಭಾರತ ಐದು ವಿಮಾನಗಳನ್ನು ಕಳೆದುಕೊಂಡ ಬಳಿಕ ಈಗ ಉಳಿದಿರುವ 40 ಮಿಗ್-29ಕೆ ಯುದ್ಧ ವಿಮಾನಗಳು ನಿರ್ವಹಣಾ ಸವಾಲುಗಳನ್ನು ಹೊಂದಿದ್ದು, ಕೆಲವೊಂದು ಬಾರಿ 15%ದಿಂದ 47% ವಿಮಾನಗಳಷ್ಟೇ ಹಾರಾಟ ಸನ್ನದ್ಧ ಸ್ಥಿತಿಯಲ್ಲಿವೆ ಎಂದು 2016ರ ಒಂದು ವರದಿ ಹೇಳಿದೆ. ಆದ್ದರಿಂದ ಭಾರತಕ್ಕೆ ಸಮುದ್ರದಲ್ಲಿನ ತನ್ನ ಸಾಮರ್ಥ್ಯವನ್ನು ಹೆಚ್ಚಿಸಲು ಫ್ರೆಂಚ್ ರಫೇಲ್ ಯುದ್ಧ ವಿಮಾನದ ನೌಕಾ ಪಡೆಯ ಆವೃತ್ತಿಯಾದ ರಫೇಲ್ ಎಂ ಯುದ್ಧ ವಿಮಾನಗಳ ಖರೀದಿಗೆ ಮುಂದಾಗಿದೆ. ಈ ಯುದ್ಧ ವಿಮಾನ ಒಂದು ದೊಡ್ಡ ಅಭಿವೃದ್ಧಿಯಾಗಿದ್ದು, ಉತ್ತಮ ಏವಿಯಾನಿಕ್ಸ್, ಬಲಶಾಲಿ ಆಯುಧ ವ್ಯವಸ್ಥೆಗಳನ್ನು ಹೊಂದಿದೆ. ರಫೇಲ್ ಎಂ ಭಾರತೀಯ ವಾಯು ಸೇನೆ ಈಗಾಗಲೇ ಹೊಂದಿರುವ 36 ರಫೇಲ್ ಯುದ್ಧ ವಿಮಾನಗಳೊಡನೆ ಸುಗಮವಾಗಿ ಕಾರ್ಯ ನಿರ್ವಹಿಸಲಿದೆ. ಈ ಕ್ರಮ ಕೇವಲ ಹಳೆಯ ಯುದ್ಧ ವಿಮಾನಗಳ ಬದಲಿಗೆ ಹೊಸದನ್ನು ಹೊಂದುವುದು ಮಾತ್ರವಲ್ಲ. ಬದಲಿಗೆ, ನಮ್ಮ ಎರಡು ಬೃಹತ್ ವಿಮಾನ ವಾಹಕ ನೌಕೆಗಳಾದ ಐಎನ್ಎಸ್ ವಿಕ್ರಾಂತ್ ಮತ್ತು ಐಎನ್ಎಸ್ ವಿಕ್ರಮಾದಿತ್ಯಗಳಲ್ಲಿ ಕಾರ್ಯಾಚರಿಸಿ, ನಮ್ಮ ನೌಕಾಪಡೆಯನ್ನು ಇನ್ನಷ್ಟು ಬಲಶಾಲಿಯಾಗಿಸಲಿವೆ. ಅದರೊಡನೆ, ರಫೇಲ್ ಎಂ ಖರೀದಿ ಈಗಾಗಲೇ ಭಾರತಕ್ಕೆ ಸಬ್ಮರೀನ್ ಮಾರಾಟ ನಡೆಸಿರುವ ಫ್ರಾನ್ಸ್ ಜೊತೆಗಿನ ಸಂಬಂಧವನ್ನು ಇನ್ನಷ್ಟು ಉತ್ತಮಗೊಳಿಸಲಿದೆ. ಆದರೆ, ಈಗ ಮೂಡಿರುವ ಸವಾಲು ಭಾರತ ಏಕೆ 26 ವಿಮಾನಗಳನ್ನು ಖರೀದಿಸಲು ಮುಂದಾಗಿದೆ? ಇದಕ್ಕೆ ಉತ್ತರ 2022ರಲ್ಲಿ ನೌಕಾಪಡೆಗೆ ನಿಯೋಜನೆಗೊಂಡ, ದೇಶೀಯ ನಿರ್ಮಾಣದ ಐಎನ್ಎಸ್ ವಿಕ್ರಾಂತ್ ವಿಮಾನ ವಾಹಕ ನೌಕೆಯಲ್ಲಿದೆ. ಈ ವಿಮಾನ ವಾಹಕ ನೌಕೆ ಗರಿಷ್ಠ 26 ಯುದ್ಧ ವಿಮಾನಗಳನ್ನು ಒಯ್ಯುವ ಸಾಮರ್ಥ್ಯ ಹೊಂದಿದ್ದು, ನೌಕಾಪಡೆ ಅದರ ಸಂಪೂರ್ಣ ಸಾಮರ್ಥ್ಯವನ್ನು ಬಳಸುವ ಉದ್ದೇಶ ಹೊಂದಿದೆ. ಭಾರತ ಯುದ್ಧದ ಉದ್ದೇಶಕ್ಕಾಗಿ 22 ಒಂಟಿ ಆಸನದ ರಫೇಲ್ ಎಂ ಯುದ್ಧ ವಿಮಾನಗಳನ್ನು, ಮತ್ತು ಪೈಲಟ್ಗಳ ತರಬೇತಿಗಾಗಿ 4 ಎರಡು ಆಸನಗಳ ರಫೇಲ್ ಎಂ ಯುದ್ಧ ವಿಮಾನಗಳು ಸೇರಿ, ಒಟ್ಟು 26 ಯುದ್ಧ ವಿಮಾನಗಳನ್ನು ಖರೀದಿಸಲು ಮುಂದಾಗಿದೆ. ಒಂದು ವೇಳೆ ಭಾರತೀಯ ನೌಕಾ ಸೇನೆ 25 ವಿಮಾನಗಳನ್ನು ಖರೀದಿಸಿದ್ದರೆ, ಐಎನ್ಎಸ್ ವಿಕ್ರಾಂತ್ನಲ್ಲಿ ಒಂದು ಸ್ಥಾನ ಖಾಲಿ ಉಳಿದಿರುತ್ತದೆ. ಆದ್ದರಿಂದ, ವಿಮಾನ ವಾಹಕ ನೌಕೆಯ ಪೂರ್ಣ ಸಾಮರ್ಥ್ಯವನ್ನು ಬಳಸುವ ನಿಟ್ಟಿನಲ್ಲಿ 26 ವಿಮಾನಗಳನ್ನು ಖರೀದಿಸುವ ನಿರ್ಧಾರಕ್ಕೆ ಬರಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಫೆಬ್ರವರಿ 2025ರಲ್ಲಿ ಫ್ರಾನ್ಸ್ಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಫ್ರೆಂಚ್ ಸರ್ಕಾರದೊಡನೆ ಮಾತುಕತೆ ನಡೆಸಿದ ಬಳಿಕ, ಈ ಒಪ್ಪಂದಕ್ಕೆ ಬರಲಾಯಿತು. ಒಟ್ಟಾರೆ ಒಪ್ಪಂದದ ಮೌಲ್ಯ 63,000 ಕೋಟಿ ರೂಪಾಯಿ ಎನ್ನುವುದು ಬಹುದೊಡ್ಡ ಮೊತ್ತದಂತೆ ಕಂಡರೂ, ಈ ಮೊತ್ತ ಮೇ 2028ರಲ್ಲಿ ನಮ್ಮ ವಿಮಾನ ವಾಹಕ ನೌಕೆಗಳಿಂದ ಹಾರಾಡುವ ಯುದ್ಧ ವಿಮಾನಗಳಿಗೆ ತಗಲುವ ವೆಚ್ಚವಾಗಿದೆ ಎಂದು ವರದಿಗಳು ವಿವರಿಸಿವೆ. ರಫೇಲ್ ಎಂ ಒಂದು ವಿಶೇಷ ವಿಮಾನವಾಗಿದ್ದು, ಬಹಳಷ್ಟು ದೂರದ ಗುರಿಗಳ ಮೇಲೆ ಭಾರೀ ದಾಳಿ ನಡೆಸುವ ಕ್ಷಿಪಣಿಗಳು ಮತ್ತು ರೇಡಾರ್ ವ್ಯವಸ್ಥೆಗಳನ್ನು ಹೊಂದಿದೆ. ಹಲವಾರು ವರ್ಷಗಳ ಕಾಲ ಮಿಗ್-29ಕೆ ಯುದ್ಧ ವಿಮಾನಗಳು ನಮ್ಮ ವಿಮಾನ ವಾಹಕ ನೌಕೆಗಳ ಬೆನ್ನೆಲುಬಾಗಿದ್ದವು. ಆದರೆ ಮಿಗ್-29ಕೆ ಈಗ ಹಳೆಯ ತಂತ್ರಜ್ಞಾನವಾಗಿದೆ. ಭಾರತೀಯ ವಾಯು ಸೇನೆ ಈಗಾಗಲೇ ರಫೇಲ್ ಯುದ್ಧ ವಿಮಾನಗಳನ್ನು ಬಳಸುತ್ತಿದ್ದು, ನೌಕಾಪಡೆ ರಫೇಲ್ ಎಂ ಯುದ್ಧ ವಿಮಾನಗಳನ್ನು ಹೊಂದುವ ಮೂಲಕ ಹೊಸ ಆರಂಭ ಪಡೆದಿದೆ. ಎರಡೂ ಪಡೆಗಳು ರಫೇಲ್ ಯುದ್ಧ ವಿಮಾನಗಳನ್ನು ಬಳಸುವುದರಿಂದ, ಅವುಗಳ ದುರಸ್ತಿ, ಬಿಡಿಭಾಗಗಳ ಲಭ್ಯತೆಯೂ ಸುಲಭವಾಗುತ್ತದೆ. ಐಎನ್ಎಸ್ ವಿಕ್ರಮಾದಿತ್ಯ 30 ಮಿಗ್-29ಕೆ ಯುದ್ಧ ವಿಮಾನಗಳನ್ನು ಹೊಂದಬಹುದು. ಆದರೆ, ಈಗ ನೌಕಾಪಡೆಯ ಗಮನ ಐಎನ್ಎಸ್ ವಿಕ್ರಾಂತ್ ಮೇಲಿದೆ. ಸದ್ಯದ ಮಟ್ಟಿಗೆ, ಅಂದರೆ ಬಹುತೇಕ 2040ರ ತನಕ ಐಎನ್ಎಸ್ ವಿಕ್ರಾಂತ್ ಮೇಲೆ ಮಿಗ್ ಯುದ್ಧ ವಿಮಾನಗಳೇ ಇರಲಿದ್ದು, ಆ ಬಳಿಕ ಅವುಗಳ ಬದಲಿಗೆ ಬೇರೆ ಯುದ್ಧ ವಿಮಾನಗಳನ್ನು ಬಳಸಲಾಗುತ್ತದೆ. ಅಂದಾಜು 2035-38ರಲ್ಲಿ ಭಾರತದ ಸ್ವಂತ ಟ್ವಿನ್ ಇಂಜಿನ್ ಡೆಕ್ ಬೇಸ್ಡ್ ಫೈಟರ್ (ಟಿಇಡಿಬಿಎಫ್) ವಿಮಾನಗಳು ಸಿದ್ಧವಾಗುವ ತನಕ ರಫೇಲ್ ಎಂ ಯುದ್ಧ ವಿಮಾನಗಳು ಭಾರತದ ಸಮುದ್ರ ಪಾರಮ್ಯವನ್ನು ಕಾಪಾಡಲು ನೆರವಾಗಲಿವೆ. ರಫೇಲ್ ಯುದ್ಧ ವಿಮಾನಗಳು ಮುಖ್ಯವಾಗಿ ಮೂರು ಆವೃತ್ತಿಗಳಲ್ಲಿ ಲಭ್ಯವಿವೆ. ಅವೆಂದರೆ, ರಫೇಲ್ ಬಿ (ಭೂ ಆಧಾರಿತ ಎರಡು ಆಸನಗಳ ಯುದ್ಧ ವಿಮಾನ), ರಫೇಲ್ ಸಿ (ಭೂ ಆಧಾರಿತ ಒಂಟಿ ಆಸನದ ಯುದ್ಧ ವಿಮಾನ), ಹಾಗೂ ನೌಕಾ ಸೇನೆಯ ಬಳಕೆಯ ರಫೇಲ್ ಎಂ ಯುದ್ಧ ವಿಮಾನ. ಭೂ ಆಧಾರಿತವಾದ ಬಿ ಮತ್ತು ಸಿ ಆವೃತ್ತಿಗಳನ್ನು ಭಾರತೀಯ ವಾಯುಪಡೆ ಬಳಸುತ್ತಿದ್ದು, ಈಗಾಗಲೇ 36 ವಿಮಾನಗಳನ್ನು ಹೊಂದಿದೆ. ರಫೇಲ್ ಎಂ ಯುದ್ಧ ವಿಮಾನ ನೌಕಾಪಡೆಯ ಆವೃತ್ತಿಯಾಗಿದ್ದು, ಇವುಗಳು ವಿಮಾನ ವಾಹಕ ನೌಕೆಯಲ್ಲಿ ಕಾರ್ಯಾಚರಿಸಲು ಸೂಕ್ತವಾಗಿವೆ. ಈ ವಿಮಾನಗಳು ಬಲವಾದ ಲ್ಯಾಂಡಿಂಗ್ ಗೇರ್, ಅರೆಸ್ಟರ್ ವೈರ್ಗಳನ್ನು ಸೆರೆಹಿಡಿಯಲು ಬೇಕಾದ ಹುಕ್ಗಳನ್ನು ಹೊಂದಿದ್ದು, ಸಮುದ್ರದ ಉಪ್ಪು ಮಿಶ್ರಿತ ಗಾಳಿಯನ್ನು ಉತ್ತಮವಾಗಿ ನಿರ್ವಹಿಸಬಲ್ಲವು. ಮೂರು ಆವೃತ್ತಿಗಳಲ್ಲಿನ ಮುಖ್ಯ ವ್ಯತ್ಯಾಸವೆಂದರೆ, ಭೂ ಆಧಾರಿತ ಯುದ್ಧ ವಿಮಾನಗಳಿಗೆ ಸಮುದ್ರ ಕಾರ್ಯಾಚರಣೆಗೆ ಸಂಬಂಧಿಸಿದ ವೈಶಿಷ್ಟ್ಯಗಳ ಅವಶ್ಯಕತೆ ಇಲ್ಲ. ರಫೇಲ್ ಎಂ ಸಮುದ್ರದಲ್ಲಿರುವ ನೌಕೆಯ ಮೇಲೆ ಇಳಿದು, ಟೇಕಾಫ್ ಆಗಲು ಬೇಕಾದಷ್ಟು ಗಟ್ಟಿಮುಟ್ಟಾಗಿದೆ. ಒಳಭಾಗದಲ್ಲಿ ಈ ಆವೃತ್ತಿಗಳು ಬಹುತೇಕ 80-85% ಒಂದೇ ರೀತಿಯಾಗಿದ್ದು, ಒಂದೇ ರೀತಿಯ ಇಂಜಿನ್ಗಳು, ರೇಡಾರ್ ಮತ್ತು ಆಯುಧ ವ್ಯವಸ್ಥೆಗಳನ್ನು ಹೊಂದಿವೆ. ಆದರೆ, ರಫೇಲ್ ಎಂ ಅನ್ನು ನೌಕಾಪಡೆಯ ಅವಶ್ಯಕತೆಗೆ ತಕ್ಕಂತೆ ಒಂದಷ್ಟು ಮಾರ್ಪಾಡುಗಳನ್ನು ಮಾಡಲಾಗಿದೆ. ವಿಮಾನಗಳಲ್ಲಿನ ಈ ಹೋಲಿಕೆ ಭಾರತಕ್ಕೆ ಅನುಕೂಲಕರವಾಗಿದ್ದು, ಪೈಲಟ್ಗಳು ಮತ್ತು ಮೆಕ್ಯಾನಿಕ್ಗಳು ಸುಲಭವಾಗಿ ಅವುಗಳ ನಡುವೆ ಕಾರ್ಯಾಚರಿಸಬಹುದು. ಇದು ಸಮಯ ಮತ್ತು ಹಣ ಎರಡನ್ನೂ ಉಳಿಸಲು ನೆರವಾಗುತ್ತದೆ.
26 ಯುದ್ಧ ವಿಮಾನಗಳ ಪೈಕಿ ನಾಲ್ಕು ತರಬೇತಿ ಆವೃತ್ತಿಯ ಯುದ್ಧ ವಿಮಾನಗಳು ಆಸಕ್ತಿಕರವಾಗಿವೆ. ವಾಸ್ತವವಾಗಿ, ಪೈಲಟ್ಗಳನ್ನು ಸಮುದ್ರದಂತಹ ಕಠಿಣ ಸನ್ನಿವೇಶಗಳಲ್ಲಿ ವಿಮಾನ ಲ್ಯಾಂಡಿಂಗ್ ನಡೆಸಲು ತರಬೇತಿ ನೀಡುವುದು ಕಷ್ಟಕರವಾಗಿದ್ದು, ಈ ಹೆಚ್ಚುವರಿ ಆಸನಗಳು ಪೈಲಟ್ಗಳಿಗೆ ಸುರಕ್ಷಿತವಾಗಿ ತರಬೇತಿ ಹೊಂದಲು ನೆರವಾಗುತ್ತವೆ. ಇದೊಂದು ಸಣ್ಣ ವಿಚಾರವಾದರೂ, ನೌಕಾಪಡೆ ಎಷ್ಟು ದೂರದೃಷ್ಟಿ ಹೊಂದಿದೆ ಎಂಬುದರ ಸಂಕೇತವಾಗಿದೆ.
ಕೆಲವರು 25 ವಿಮಾನಗಳನ್ನು ಖರೀದಿಸಿ ಒಂದಷ್ಟು ಹಣ ಉಳಿಸಬಹುದಿತ್ತಲ್ಲ ಎಂದು ಪ್ರಶ್ನಿಸಬಹುದು. ಆದರೆ, ನಮ್ಮ ಸಮುದ್ರಗಳನ್ನು ರಕ್ಷಿಸುವ ಸಲುವಾಗಿ ಅಷ್ಟೊಂದು ಹಣ, ಶ್ರಮವನ್ನು ವಿನಿಯೋಗಿಸಿ ನಿರ್ಮಿಸಿದ ಐಎನ್ಎಸ್ ವಿಕ್ರಾಂತ್ ನೌಕೆಯಲ್ಲಿ ಒಂದು ವಿಮಾನದ ಸ್ಥಾನವನ್ನು ಹಾಗೇ ಖಾಲಿಯಾಗಿಡುವುದು ಪ್ರಾಯೋಗಿಕವಲ್ಲ. 26 ವಿಮಾನಗಳ ಸಂಖ್ಯೆ ಹಾಗೇ ಸುಮ್ಮನೆ ಆಯ್ಕೆ ಮಾಡಿರುವುದಲ್ಲ. ಅದು ವಿಕ್ರಾಂತ್ ಸಂಪೂರ್ಣ ಕಾರ್ಯಾಚರಣಾ ಸನ್ನದ್ಧವಾಗಲು ಬೇಕಾದ ವಿಮಾನಗಳ ಸಂಖ್ಯೆಯಾಗಿದೆ.
ವರದಿಗಳ ಪ್ರಕಾರ, ಈ ಖರೀದಿ ಒಪ್ಪಂದ ಫ್ರಾನ್ಸ್ ಜೊತೆ ಸುದೀರ್ಘ ಮಾತುಕತೆಗಳ ಬಳಿಕ ಎಪ್ರಿಲ್ 2025ರಲ್ಲಿ ಅಂತಿಮಗೊಂಡಿದೆ. ಈ ಒಪ್ಪಂದ ಅಂತಿಮಗೊಳ್ಳಲು ಫ್ರಾನ್ಸ್ ಒಂದಷ್ಟು ಬೆಲೆಯನ್ನೂ ಇಳಿಕೆ ಮಾಡಿದೆ. ಈ ಒಪ್ಪಂದ ಕೇವಲ ವಿಮಾನಗಳಿಗೆ ಮಾತ್ರ ಸೀಮಿತವಲ್ಲ. ಬದಲಿಗೆ, ಭಾರತ ತನ್ನ ನೌಕಾಪಡೆಯ ಸಾಮರ್ಥ್ಯದ ಕುರಿತು ಎಷ್ಟು ಗಂಭೀರವಾಗಿದೆ ಎನ್ನುವುದನ್ನು ಸೂಚಿಸುತ್ತದೆ. ಈಗಾಗಲೇ ಚೀನಾ ಹಿಂದೂ ಮಹಾಸಾಗರದಲ್ಲಿ ತನ್ನ ಶಕ್ತಿ ಪ್ರದರ್ಶಿಸಲು ಯತ್ನಿಸುವಾಗ ಭಾರತದ ಪ್ರಯತ್ನಗಳು ಪ್ರಾಮುಖ್ಯತೆ ಪಡೆಯುತ್ತವೆ. ಸದ್ಯದ ಮಟ್ಟಿಗೆ ಮಿಗ್-29ಕೆ ಯುದ್ಧ ವಿಮಾನಗಳು ಹಾರಾಟ ಮುಂದುವರಿಸಲಿವೆ. ಆದರೆ, ರಫೇಲ್ ಎಂ ಯುದ್ಧ ವಿಮಾನಗಳು ಭವಿಷ್ಯದ ವಿಮಾನಗಳಾಗಿವೆ. 26 ಯುದ್ಧ ವಿಮಾನಗಳು ಐಎನ್ಎಸ್ ವಿಕ್ರಾಂತ್ ಮೇಲೆ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಿಸಲು ಬೇಕಾದ ಸಂಖ್ಯೆಯಾಗಿದೆ. ಆದ್ದರಿಂದ, 63,000 ಕೋಟಿ ರೂಪಾಯಿಗಳ ವೆಚ್ಚದಲ್ಲಿ 26 ರಫೇಲ್ ಎಂ ಯುದ್ಧ ವಿಮಾನಗಳ ಖರೀದಿ ಒಂದು ಬೃಹತ್ ಖರೀದಿ ಮಾತ್ರವಲ್ಲ. ಜೊತೆಗೆ ನಮ್ಮ ವಿಮಾನ ವಾಹಕ ನೌಕೆಗಳ ಪೂರ್ಣ ಸಾಮರ್ಥ್ಯವನ್ನು ಬಳಸಿಕೊಂಡು, ಅವುಗಳನ್ನು ಯುದ್ಧ ಸನ್ನದ್ಧವಾಗಿಡಲು ಸೂಕ್ತವಾದ ನಡೆಯಾಗಿದೆ.