ಕರಾವಳಿಯ ಖ್ಯಾತ ರಂಗಕರ್ಮಿ, ಹಿರಿಯ ಪತ್ರಕರ್ತ ಪರಮಾನಂದ ವಿ. ಸಾಲ್ಯಾನ್ ಸಸಿಹಿತ್ಲು ನಿಧನ!

ಮಂಗಳೂರು: ಕರಾವಳಿಯ ಖ್ಯಾತ ರಂಗಕರ್ಮಿ, ಸಾಹಿತಿ, ಲೇಖಕ ಹಾಗೂ ಪತ್ರಕರ್ತ ಪರಮಾನಂದ ವಿ.ಸಾಲ್ಯಾನ್ ಸಸಿಹಿತ್ಲು (65) ನಿಧನ ಹೊಂದಿದರು. ಮೃತರು ಪತ್ನಿ, ಪುತ್ರನನ್ನು ಅಗಲಿದ್ದಾರೆ.

ಸಸಿಹಿತ್ಲು ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದ ಮಾಜಿ ಅಧ್ಯಕ್ಷರಾಗಿದ್ದರು. ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷರಾಗಿದ್ದರು. ಹಲವಾರು ನಾಟಕಗಳನ್ನೂ ನಿರ್ದೇಶನ ಮಾಡಿದ್ದರು. ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಸಮಿತಿಯಲ್ಲಿಯೂ ಸಕ್ರಿಯರಾಗಿದ್ದರು. ರಂಗಸುದರ್ಶನ ಸಸಿಹಿತ್ಲು ಇದರ ಸ್ಥಾಪಕಾಧ್ಯಕ್ಷರಾಗಿದ್ದರು. ಅಜೇಯ ಮಾಸ ಪತ್ರಿಕೆಯ ಸಂಪಾದಕರಾಗಿದ್ದರು. ಮುಂಗಾರು, ಹೊಸದಿಗಂತ ಸಹಿತ ಹಲವು ಪತ್ರಿಕೆಗಳಲ್ಲಿಯೂ ಕಾರ್ಯನಿರ್ವಹಿಸಿದ್ದರು. ಅಲ್ಲದೆ ಮುಂಬಯಿ ಸಹಿತ ವಿವಿಧ ಸಂಘ- ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದರು.