Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಲಾರ್ಡ್ಸ್ ಅಂಗಳದಲ್ಲಿ ಭಾವುಕ ಕ್ಷಣ: ಇಂಗ್ಲೆಂಡ್‌ನ ದಿಗ್ಗಜ ಆಟಗಾರ್ತಿಯರಿಗೆ ಭಾರತೀಯರಿಂದ ‘ಗಾರ್ಡ್ ಆಫ್ ಆನರ್’!

Spread the love

ಲಂಡನ್: ಲಾರ್ಡ್ಸ್ ನಲ್ಲಿ ನಡೆಯುತ್ತಿರುವ ಏಕೈಕ ಮಹಿಳಾ ಟೆಸ್ಟ್ ಪಂದ್ಯದ ವೇಳೆ ಇಂಗ್ಲೆಂಡ್‌ನ ಹಿರಿಯ ಮಹಿಳಾ ಕ್ರಿಕೆಟಿಗರಾದ ಹೀದ‌ರ್ ನೈಟ್ ಮತ್ತು ಟ್ಯಾಮಿ ಬ್ಯೂಮಾಂಟ್ ಅವರಿಗೆ ಭಾರತೀಯ ಆಟಗಾರ್ತಿಯರು ಗಾರ್ಡ್ ಆಫ್ ಆನರ್ ನೀಡಿ ಗೌರವ ಸಲ್ಲಿಸಿದರು.
ಪಂದ್ಯ ಆರಂಭಕ್ಕೂ ಮುನ್ನ ಟ್ಯಾಮಿ ಬ್ಯೂಮಾಂಟ್ ಅಂತರರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದರು. ಬಳಿಕ ಪಂದ್ಯದ ಎರಡನೇ ದಿನದಾಟದ ನಂತರ ಹೀದರ್ ನೈಟ್ ಕೂಡ ನಿವೃತ್ತಿ ನಿರ್ಧಾರ ಪ್ರಕಟಿಸಿ ಅಚ್ಚರಿ ಮೂಡಿಸಿದ್ದರು. ಹೀಗಾಗಿ ಲಾರ್ಡ್ಸ್ ಟೆಸ್ಟ್‌ನ ನಾಲ್ಕನೇ ಇನ್ನಿಂಗ್ಸ್ ಇಬ್ಬರಿಗೂ ಇಂಗ್ಲೆಂಡ್ ಪರ ಕೊನೆಯ ಬ್ಯಾಟಿಂಗ್‌ ಆಗಿತ್ತು.

ಭಾರತ ನಿಗದಿಪಡಿಸಿದ್ದ 457 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ಪರ ಮೂರನೇ ದಿನ ಇಬ್ಬರೂ ಬ್ಯಾಟಿಂಗ್‌ಗೆ ಇಳಿದರು. ಬ್ಯೂಮಾಂಟ್ ಅವರ ವೃತ್ತಿಜೀವನ ನಿರಾಶಾದಾಯಕ ಅಂತ್ಯ ಕಂಡಿತು. ಇನ್ನಿಂಗ್ಸ್ ನ ಮೊದಲ ಎಸೆತದಲ್ಲೇ ಕ್ರಾಂತಿ ಗೌಡ್ ಬೌಲಿಂಗ್ ನಲ್ಲಿ ಅವರು ಗೋಲ್ಡನ್ ಡಕ್ ಗೆ ಔಟಾದರು.
ನೈಟ್ ಕೆಲಕಾಲ ಕ್ರೀಸ್ ನಲ್ಲಿ ಹೋರಾಟ ನಡೆಸಿದರೂ, ಅಂತಿಮವಾಗಿ ಕ್ರಾಂತಿ ಗೌಡ್ ಬೌಲಿಂಗ್‌ನಲ್ಲಿ ರಿಚಾ ಘೋಷ್ ಪಡೆದ ಕ್ಯಾಚ್‌ಗೆ ವಿಕೆಟ್ ಒಪ್ಪಿಸಿದರು. ಇಂಗ್ಲೆಂಡ್ ಪರ ಕೊನೆಯ ಬಾರಿ ಮೈದಾನ ತೊರೆಯುತ್ತಿದ್ದ ನೈಟ್ ಮತ್ತು ಬ್ಯೂಮಾಂಟ್ ಅವರಿಗೆ ಭಾರತೀಯ ಆಟಗಾರ್ತಿಯರು ಎರಡು ಸಾಲುಗಳಲ್ಲಿ ನಿಂತು ಗಾರ್ಡ್ ಆಫ್ ಆನರ್ ನೀಡಿದರು. ಈ ದೃಶ್ಯ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾಯಿತು.

2017ರಲ್ಲಿ ತವರಿನಲ್ಲಿ ನಡೆದ ಮಹಿಳೆಯರ ಏಕದಿನ ವಿಶ್ವಕಪ್ ನಲ್ಲಿ ಇಂಗ್ಲೆಂಡ್ ತಂಡವನ್ನು ಪ್ರಶಸ್ತಿಯತ್ತ ಮುನ್ನಡೆಸಿದ ನಾಯಕಿಯಾಗಿ ಹೀದರ್ ನೈಟ್ ಗುರುತಿಸಿಕೊಂಡಿದ್ದಾರೆ. ಇಂಗ್ಲೆಂಡ್ ಪರ ಅತಿ ಹೆಚ್ಚು ಪಂದ್ಯಗಳನ್ನಾಡಿದ ಮಹಿಳಾ ಕ್ರಿಕೆಟಿಗರಾಗಿರುವ ಅವರು, 320 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 8,017 ರನ್ ಗಳಿಸಿದ್ದಾರೆ. 2016ರಿಂದ 2025ರವರೆಗೆ 199 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದ ಅವರು, 134 ಪಂದ್ಯಗಳಲ್ಲಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದರು.
ಟ್ಯಾಮಿ ಬ್ಯೂಮಾಂಟ್ ಇಂಗ್ಲೆಂಡ್ ಪರ 261 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 7,327 ರನ್ ಗಳಿಸಿದ್ದಾರೆ. ಮಹಿಳೆಯರ ಏಕದಿನ ಕ್ರಿಕೆಟ್ ನಲ್ಲಿ ಇಂಗ್ಲೆಂಡ್ ಪರ ಅತಿ ಹೆಚ್ಚು 12 ಶತಕ ದಾಖಲಿಸಿದ ಆಟಗಾರ್ತಿಯೂ ಅವರೇ.

2017ರ ಏಕದಿನ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಪ್ರಶಸ್ತಿ ಗೆಲ್ಲುವಲ್ಲಿ ಬ್ಯೂಮಾಂಟ್ ಮಹತ್ವದ ಪಾತ್ರ ವಹಿಸಿದ್ದರು. 410 ರನ್ ಗಳಿಸಿ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾಗಿ ಹೊರಹೊಮ್ಮಿದ್ದ ಅವರು, ‘ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ದರು.
ಹೀದ‌ರ್ ನೈಟ್ ಮತ್ತು ಟ್ಯಾಮಿ ಬ್ಯೂಮಾಂಟ್ ಅವರು ಕ್ರಿಕೆಟ್‌ನ ಮೂರು ಸ್ವರೂಪಗಳಲ್ಲೂ ಶತಕ ದಾಖಲಿಸಿದ ಇಂಗ್ಲೆಂಡ್ ಮಹಿಳಾ ತಂಡದ ಏಕೈಕ ಇಬ್ಬರು ಬ್ಯಾಟರ್ ಗಳಾಗಿದ್ದಾರೆ. ಅವರ ಸುದೀರ್ಘ ಸೇವೆಗೆ ಗೌರವ ಸೂಚಿಸುವಂತೆ ಭಾರತೀಯ ಆಟಗಾರ್ತಿಯರು ಗಾರ್ಡ್ ಆಫ್ ಆನರ್ ನೀಡಿದ್ದು ಪಂದ್ಯದ ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾಯಿತು.


Spread the love
Share:

administrator

Leave a Reply

Your email address will not be published. Required fields are marked *