ಟಿ-20 ಸರಣಿ ಸೋಲು: ಭಾರತ ತಂಡದ ಹೀನಾಯ ಪ್ರದರ್ಶನಕ್ಕೆ ಬಿಸಿಸಿಐ ಕಳವಳ!

ಹೊಸದಿಲ್ಲಿ: ಟಿ-20 ಸರಣಿಯಲ್ಲಿ ಭಾರತ ತಂಡ ನೀಡುತ್ತಿರುವ ಹೀನಾಯ ಪ್ರದರ್ಶನ ತೀವ್ರ ಕಳವಳಕಾರಿಯಾಗಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕಾರ್ಯದರ್ಶಿ ದೇವಜಿತ್ ಸೈಕಿಯಾ ಒಪ್ಪಿಕೊಂಡಿದ್ದಾರೆ. ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟಿ-20 ಸರಣಿ ಮುಕ್ತಾಯಗೊಂಡ ಬಳಿಕ, ತಂಡದ ಪ್ರದರ್ಶನದ ಕುರಿತು ಪರಾಮರ್ಶೆ ನಡೆಸುವ ಯೋಜನೆ ಇದೆ ಎಂದೂ ಅವರು ಹೇಳಿದ್ದಾರೆ.
“ನಾವು ಭಾರತ ತಂಡದ ಪ್ರದರ್ಶನದಿಂದ ತೀವ್ರ ಕಳವಳಕ್ಕೀಡಾಗಿದ್ದೇವೆ. ಸರಣಿ ಮುಕ್ತಾಯಗೊಂಡ ಬೆನ್ನಿಗೇ, ತಂಡದಲ್ಲಿ ಏನು ತಪ್ಪಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಖಂಡಿತವಾಗಿಯೂ ನಾಯಕ ಮತ್ತು ಕೋಚ್ ರೊಂದಿಗೆ ಪರಾಮರ್ಶೆ ನಡೆಸಲಾಗುವುದು. ಅದನ್ನು ಆಧರಿಸಿ. ಭಾರತ ತಂಡದ ಶ್ರೇಷ್ಠತೆಯನ್ನು ಮರು ಸ್ಥಾಪಿಸಲು ನಾವು ಸಮಸ್ಯೆಗಳನ್ನು ಆದಷ್ಟೂ ಶೀಘ್ರದಲ್ಲಿ ಸರಿಪಡಿಸುತ್ತೇವೆ” ಎಂದು ಅವರು ತಿಳಿಸಿದ್ದಾರೆ.

ಗುರುವಾರ ಬ್ರಿಸ್ಟಲ್ ನ ಕೌಂಟಿ ಮೈದಾನದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೆಯ ಟಿ-20 ಪಂದ್ಯದಲ್ಲೂ ಶ್ರೇಯಸ್ ಅಯ್ಯರ್ ನೇತೃತ್ವದ ಭಾರತ ತಂಡ ಸತತ ಮೂರನೆಯ ಸೋಲು ಅನುಭವಿಸಿತು. ಇದರಿಂದ 5 ಪಂದ್ಯಗಳ ಸರಣಿಯಲ್ಲಿ 3-0 ಮುನ್ನಡೆ ಗಳಿಸಿರುವ ಇಂಗ್ಲೆಂಡ್ ತಂಡ, ಸರಣಿಯನ್ನು ಕೈವಶ ಮಾಡಿಕೊಂಡಿದೆ. ಈ ತಿಂಗಳ ಆರಂಭದಲ್ಲಿ ಐರ್ಲೆಂಡ್ ತಂಡದ ವಿರುದ್ಧ ನಡೆದ ಸರಣಿಯಲ್ಲಿ 2-0 ಅಂತರದಲ್ಲಿ ಆಘಾತಕಾರಿ ಪರಾಭವ ಅನುಭವಿಸಿದ ಬಳಿಕ, ಸತತ ಎರಡನೆ ಸರಣಿಯನ್ನು ಭಾರತ ತಂಡ ಕೈಚೆಲ್ಲಿದೆ.
ಬೆನ್ನುಬೆನ್ನಿಗೇ ಆಗಿರುವ ಈ ಪರಾಭವದಿಂದ ಹಾಲಿ ವಿಶ್ವಕಪ್ ಚಾಂಪಿಯನ್ ಆದ ಭಾರತ ತಂಡಕ್ಕೆ ಭಾರಿ ಹಿನ್ನಡೆಯಾಗಿದೆ. ಈ ಪ್ರವಾಸಕ್ಕೂ ಮುನ್ನ, ಭಾರತ ತಂಡ ಟಿ-20 ಮಾದರಿಯ ಕ್ರಿಕೆಟ್ ನಲ್ಲಿ ಸತತ 16 ವಿಜಯಗಳನ್ನು ದಾಖಲಿಸಿತ್ತು.