ಕೊಲಂಬಿಯಾ ಜಯದ ನಡುವೆ ಗಮನ ಸೆಳೆದ ಕಾಂಗೋದ ‘ಜೀವಂತ ಪ್ರತಿಮೆ’!

ಗ್ವಾಡಲಜಾರ: ಫಿಫಾ ವಿಶ್ವಕಪ್ನ ‘ಕೆ’ ಗುಂಪಿನ ಪಂದ್ಯವೊಂದರಲ್ಲಿ ಬುಧವಾರ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ (ಡಿಆರ್ಸಿ) ತಂಡವನ್ನು ಕೊಲಂಬಿಯ ತಂಡವು 1-0 ಗೋಲಿನ ಅಂತರದಿಂದ ಸೋಲಿಸಿತು. ಆದರೆ, ಈ ಪಂದ್ಯದಲ್ಲಿ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದು ಕಾಂಗೋ ತಂಡದ ಅಭಿಮಾನಿ ಹಾಗೂ ‘ಜೀವಂತ ಪ್ರತಿಮೆ’ ಮಿಶೆಲ್ ಎಂಕುಕ ಎಂಬೋಲಡಿಂಗ,
ಕಾಂಗೋದ ಸ್ವಾತಂತ್ರ್ಯ ಹೋರಾಟದ ನಾಯಕ, ಹತ್ಯೆಗೀಡಾಗಿರುವ ಪ್ಯಾಟ್ರಿಸ್ ಲುಮುಂಬ ಅವರ ಪ್ರತಿಮೆಯಂತೆ ನಿಲ್ಲುವ ಮೂಲಕ ಎಂಬೋಲಡಿಂಗ ಪ್ರಸಿದ್ಧರಾಗಿದ್ದಾರೆ. ಅವರು ಪ್ಯಾಟ್ರಿಸ್ ಲುಮುಂಬರನ್ನು ನಿಕಟವಾಗಿ ಹೋಲುತ್ತಾರೆ.

ಎಂಬೋಲ ಪ್ರಸಿದ್ದಿಗೆ ಬಂದದ್ದು ಡಿಸೆಂಬರ್-ಜನವರಿಯಲ್ಲಿ ನಡೆದ ಆಫ್ರಿಕ ಕಪ್ ಆಫ್ ನೇಶನ್ಸ್ನಲ್ಲಿ ಅವರು ಆ ಪಂದ್ಯಾವಳಿಯಲ್ಲಿ ಕಾಂಗೊ ಆಡುವ ಎಲ್ಲ ಪಂದ್ಯಗಳಲ್ಲಿ ಪೂರ್ಣಾವಧಿ ದಿವಂಗತ ಸ್ವಾತಂತ್ರ್ಯ ನಾಯಕನ ಪ್ರತಿಮೆಯಾಗಿ ನಿಶ್ಚಲವಾಗಿ ನಿಂತಿದ್ದರು.
ಅವರು ಬುಧವಾರ ಮೊದಲ ಬಾರಿ ಫುಟ್ಬಾಲ್ ವಿಶ್ವಕಪ್ಗೆ ಬಂದರು. ಎಬೋಲ, ಕ್ವಾರಂಟೈನ್ ಕಾರಣಗಳಿಂದಾಗಿ ಪೋರ್ಚುಗಲ್ ವಿರುದ್ಧದ ಕಾಂಗೊದ ಮೊದಲ ಪಂದ್ಯಕ್ಕೆ ಅವರಿಗೆ ಬರಲು ಸಾಧ್ಯವಾಗಿರಲಿಲ್ಲ.
ಬುಧವಾರ ಕಾಂಗೋ-ಕೊಲಂಬಿಯ ಪಂದ್ಯ ಆರಂಭಗೊಳ್ಳುವುದಕ್ಕೆ ಒಂದು ಗಂಟೆ ಮೊದಲೇ ಎಂಬೋಲಡಿಂಗ ತನ್ನ ಆಸನದಲ್ಲಿದ್ದರು. ಕಡು ಕೆಂಪು ಬಣ್ಣದ ಜಾಕೆಟ್ ಮತ್ತು ಟೈ, ಹಳದಿ ಅಂಗಿ ಮತ್ತು ನೀಲಿ ಪ್ಯಾಂಟ್ ಧರಿಸಿದ್ದ ದಿವಂಗತ ಸ್ವಾತಂತ್ರ್ಯ ಹೋರಾಟಗಾರ ಲುಮುಂಬರನ್ನು ಚೆನ್ನಾಗಿ ಹೋಲುತ್ತಿದ್ದರು.
ಪಂದ್ಯ ಆರಂಭಗೊಂಡ ಕೂಡಲೇ, ಪೀಠವೊಂದರಲ್ಲಿ ಬಲಗೈಯನ್ನು ಮೇಲೆತ್ತಿ ನಿಶ್ಚಲರಾಗಿ ಪ್ರತಿಮೆಯಂತೆ ನಿಂತರು.
ಅವರು ಯಾರೊಂದಿಗೂ ಮಾತನಾಡಲು ಬಯಸಲಿಲ್ಲ. ಆದರೆ, ಕೊನೆಗೂ ವಿಶ್ವಕಪ್ಗೂ ಬರಲು ಸಾಧ್ಯವಾಗಿದ್ದಕ್ಕೆ ಸಂತೋಷವಾಗಿದೆಯೇ ಎಂದು ಕೇಳಿದಾಗ ತಲೆಯಲ್ಲಾಡಿಸಿ ಮುಗುಳುನಕ್ಕರು.