ಇಂಟರ್ನ್ಯಾಷನಲ್ ಗೌರವ: ಇಸ್ರೇಲ್‌ನ ಪ್ರಮುಖ ನಗರದಲ್ಲಿ ತಲೆಎತ್ತಲಿದೆ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ!

ಮುಂಬೈ: ತನ್ನ ಪ್ರಮುಖ ನಗರಗಳಲ್ಲೊಂದರಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಸ್ಥಾಪಿಸುವ ಬಗ್ಗೆ ಇಸ್ರೇಲ್ ಯೋಜಿಸುತ್ತಿದೆ ಎಂದು ಮುಂಬೈನ ಇಸ್ರೇಲ್ ಕೌನ್ಸುಲ್ ಜನರಲ್ ಯಾನಿವ್ ರೆವಾಚ್ ಮಂಗಳವಾರ ತಿಳಿಸಿದ್ದಾರೆ.
ಮರಾಠಾ ರಾಜನ ಪಟ್ಟಾಭಿಷೇಕ ದಿನದಂದು ANI ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು ಈ ಮಾಹಿತಿ ನೀಡಿದ್ದಾರೆ.
ಈ ಸಹಭಾಗಿತ್ವದ ಕುರಿತು ಸಲಹೆ ಪಡೆಯಲು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಸಂಪರ್ಕಿಸಿರುವುದಾಗಿ ಕೌನ್ಸುಲ್ ಜನರಲ್ ಹೇಳಿದರು. “ಅವರು ತಕ್ಷಣವೇ ನಮಗೆ ಆಶೀರ್ವಾದ ನೀಡಿದರು ಹಾಗೂ ಅಗತ್ಯವಿರುವ ಎಲ್ಲ ನೆರವು ನೀಡುವ ಭರವಸೆ ನೀಡಿದರು” ಎಂದು ರೆವಾಚ್ ನುಡಿದರು.

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಕಳುಹಿಸಿದ ಪ್ರಸ್ತಾವನೆಯನ್ನು ಬಹಿರಂಗಪಡಿಸಿದ ರೆವಾಚ್, ಈ ದೀರ್ಘಕಾಲೀನ ಯೋಜನೆಯು ಭಾರತೀಯ ಜನರ ಬಗ್ಗೆ ಇಸ್ರೇಲ್ ಹೊಂದಿರುವ ಸದ್ಭಾವನೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
“ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್ಲೆ ಭೇಟಿ ನೀಡಿದ ಬಳಿಕ ವಿವಿಧ ಕ್ಷೇತ್ರಗಳಲ್ಲಿ ಭಾರತ ಮತ್ತು ಇಸ್ರೇಲ್ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ನಾವು ನಿರ್ಧರಿಸಿದೆವು. ಈ ಪೈಕಿ ಒಂದು ಕ್ಷೇತ್ರ ನಮ್ಮ ಎರಡು ದೇಶಗಳ ಇತಿಹಾಸವಾಗಿದೆ. ಈ ನಿಟ್ಟಿನಲ್ಲಿ ಭಾರತದಲ್ಲಿ ದೊಡ್ಡ ಯೋಜನೆಯೊಂದನ್ನು ಜಾರಿಗೊಳಿಸುವ ಬದಲು, ಶಿವಾಜಿ ಮಹಾರಾಜರ ಪ್ರತಿಮೆಯನ್ನು ನಿರ್ಮಿಸಿ ಅದನ್ನು ಇಸ್ರೇಲ್ ನಲ್ಲಿ ಸ್ಥಾಪಿಸುವುದು ಸೂಕ್ತ ಎಂಬ ನಿರ್ಧಾರಕ್ಕೆ ಬಂದೆವು” ಎಂದು ಅವರು ತಿಳಿಸಿದರು.
ನವಿ ಮುಂಬೈ ವಿಮಾನ ನಿಲ್ದಾಣದಲ್ಲಿ ಶಿವಾಜಿ ಪ್ರತಿಮೆ ಅನಾವರಣ
ಇದೇ ವೇಳೆ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಮಂಗಳವಾರ ಶಿವರಾಜ್ಯಾಭಿಷೇಕ ದಿನದ ಅಂಗವಾಗಿ ನವಿ ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಅನಾವರಣಗೊಳಿಸಿದರು.
ಡಿಸೆಂಬರ್ 2025ರಲ್ಲಿ ಈ ವಿಮಾನ ನಿಲ್ದಾಣದ ಕಾರ್ಯಾಚರಣೆ ಆರಂಭವಾಗಿತ್ತು. ಈಗ ಅಲ್ಲಿ 20 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.