ಬೆಳ್ತಂಗಡಿ: ಗಡಾಯಿಕಲ್ಲು ಕೋಟೆಯ ಮೇಲೆ ಸಿಲುಕಿದ್ದ ಚಾರಣಿಗ; 3 ಗಂಟೆಗಳ ಜಂಟಿ ಕಾರ್ಯಾಚರಣೆಯಲ್ಲಿ ರಕ್ಷಣೆ!”

ಬೆಳ್ತಂಗಡಿ : ಪ್ರಸಿದ್ಧ ಹಾಗೂ ಚಾರಣ ತಾಣವಾದ ಗಡಾಯಿಕಲ್ಲು ಕೋಟೆಗೆ ಚಾರಣಕ್ಕೆ ತೆರಳಿದ್ದ ಪ್ರವಾಸಿಗನೊಬ್ಬ ತೀವ್ರ ಮೊಣಕಾಲು ನೋವಿನಿಂದ ಕೆಳಗಿಳಿಯಲಾರದೆ ಸಿಲುಕಿಕೊಂಡಿದ್ದು, ಅಗ್ನಿಶಾಮಕ ದಳ, ಅರಣ್ಯ ಇಲಾಖೆ, ಶೌರ್ಯ ವಿಪತ್ತು ತಂಡ ಹಾಗೂ ಸ್ಥಳೀಯರು ಜಂಟಿಯಾಗಿ ಸುಮಾರು 3 ಗಂಟೆಗಳ ಕಾಲ ಸಾಹಸಮಯ ಕಾರ್ಯಾಚರಣೆ ನಡೆಸಿ ಆತನನ್ನು ಸುರಕ್ಷಿತವಾಗಿ ಕೆಳಗೆ ತಂದಿರುವ ಘಟನೆ ಜೂನ್ 4 ರ ಗುರುವಾರ ನಡೆದಿದೆ.

ಬೆಳ್ತಂಗಡಿ ತಾಲೂಕಿನ ತಣ್ಣೀರುಪಂಥ ಗ್ರಾಮದ ಜನತಾ ಕಾಲೊನಿ ಪರಿಸರದ ಇಬ್ಬರು ಮಹಿಳೆಯರು ಹಾಗೂ ಇಬ್ಬರು ಪುರುಷರು ಸೇರಿ ಒಟ್ಟು ನಾಲ್ಕು ಜನರ ತಂಡವು ಅರಣ್ಯ ಇಲಾಖೆಯಿಂದ ಅಧಿಕೃತ ಟಿಕೆಟ್ ಪಡೆದು ಗುರುವಾರ ಬೆಳಿಗ್ಗೆ ಗಡಾಯಿಕಲ್ಲು ಚಾರಣ ಕೈಗೊಂಡಿತ್ತು. ಅತ್ಯಂತ ಕಡಿದಾದ ಕಲ್ಲಿನ ಮೆಟ್ಟಿಲುಗಳನ್ನು ಹತ್ತಿ ಎಲ್ಲರೂ ಕೋಟೆಯ ತುತ್ತತುದಿಯನ್ನು ತಲುಪಿದ್ದರು. ಆದರೆ, ಅಲ್ಲಿಗೆ ತಲುಪಿದ ಬಳಿಕ ತಂಡದಲ್ಲಿದ್ದ ಮಹಮ್ಮದ್ ಶರೀಫ್ (30) ಎಂಬುವರ ಮೊಣಕಾಲಿನಲ್ಲಿ ತೀವ್ರ ಸ್ವರೂಪದ ನೋವು ಕಾಣಿಸಿಕೊಂಡಿದೆ. ನೋವಿನ ತೀವ್ರತೆಗೆ ಅವರಿಗೆ ಕನಿಷ್ಠ ಒಂದು ಹೆಜ್ಜೆಯನ್ನೂ ಇಡಲು ಸಾಧ್ಯವಾಗದೆ, ಕೋಟೆಯ ಮೇಲೆಯೇ ಸಿಲುಕಿಕೊಂಡಿದ್ದಾರೆ.
ಸಹ ಚಾರಣಿಗರು ತಕ್ಷಣವೇ ಈ ಬಗ್ಗೆ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಪೊಲೀಸರು ತಕ್ಷಣವೇ ಬೆಳ್ತಂಗಡಿ ಅಗ್ನಿಶಾಮಕ ಠಾಣೆ, ಅರಣ್ಯ ಇಲಾಖೆ ಹಾಗೂ ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ತಂಡಕ್ಕೆ ಸಂದೇಶ ರವಾನಿಸಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ರಕ್ಷಣಾ ಸಿಬ್ಬಂದಿ ಮತ್ತು ಸ್ಥಳೀಯ ಯುವಕರು ತಲೆಹೊರೆ ಸ್ಟ್ರೆಚರ್ ಹಾಗೂ ಅಗತ್ಯ ರಕ್ಷಣಾ ಸಾಮಗ್ರಿಗಳೊಂದಿಗೆ ಸುಮಾರು 1,500 ಮೆಟ್ಟಿಲುಗಳಿರುವ ಕಡಿದಾದ ಗಡಾಯಿಕಲ್ಲನ್ನು ವೇಗವಾಗಿ ಹತ್ತಿ ಮೇಲಕ್ಕೆ ತಲುಪಿದ್ದಾರೆ.
ಅಲ್ಲಿ ಮಹಮ್ಮದ್ ಶರೀಫ್ ಅವರಿಗೆ ಧೈರ್ಯ ತುಂಬಿ, ಸ್ಟ್ರೆಚರ್ ಮೇಲೆ ಮಲಗಿಸಿ ಅತ್ಯಂತ ಜಾಗರೂಕತೆಯಿಂದ ಕಡಿದಾದ ಮತ್ತು ಜಾರುವ ಮೆಟ್ಟಿಲುಗಳ ಮೇಲೆ ಹೊತ್ತುಕೊಂಡು ಕೆಳಗೆ ಇಳಿಸುವ ಸಾಹಸ ಆರಂಭಿಸಿದ್ದಾರೆ. ಸುಮಾರು 3 ಗಂಟೆಗಳ ಕಾಲ ನಡೆದ ಈ ಸವಾಲಿನ ಕಾರ್ಯಾಚರಣೆಯ ನಂತರ ಶರೀಫ್ ಅವರನ್ನು ಸುರಕ್ಷಿತವಾಗಿ ಬೆಟ್ಟದ ತಳಭಾಗಕ್ಕೆ ತರಲಾಯಿತು. ಬಳಿಕ ಅಲ್ಲಿ ಸಿದ್ಧವಾಗಿ ನಿಂತಿದ್ದ ವಾಹನದ ಮೂಲಕ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಳ್ತಂಗಡಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ರಕ್ಷಣಾ ಪಡೆಗಳ ಈ ಕ್ಷಿಪ್ರ ಹಾಗೂ ಸಂಘಟಿತ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.