ದೆಹಲಿ: ಮಾಳವಿಯಾ ನಗರದ ಹೋಟೆಲ್ ಅಗ್ನಿ ಅವಘಡಕ್ಕೆ ಶಾರ್ಟ್ ಸರ್ಕ್ಯೂಟ್ ಶಂಕೆ

ಹೊಸ ದಿಲ್ಲಿ: ದಿಲ್ಲಿಯ ಮಾಳವಿಯಾ ನಗರದ ಹೋಟೆಲೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಈ ಕುರಿತು ತನಿಖೆ ನಡೆಸುತ್ತಿರುವ ಪೊಲೀಸರು, ಅಗ್ನಿ ಅವಘಡಕ್ಕೆ ಎಲ್ಪಿಜಿ ಸಿಲಿಂಡರ್ ಸ್ಫೋಟ ಕಾರಣ ಎಂಬ ಶಂಕೆಯನ್ನು ತಳ್ಳಿ ಹಾಕಿದ್ದಾರೆ. ಹೋಟೆಲ್ ನಲ್ಲಿ ಎರಡು ಪ್ರತ್ಯೇಕ ಅಡುಗೆ ಕೋಣೆಗಳಿದ್ದು, ಒಂದು ಕಟ್ಟಡದ ತಳಮಹಡಿಯಲ್ಲಿ ಹಾಗೂ ಮತ್ತೊಂದು ಮೇಲಿನ ಮಹಡಿಯಲ್ಲಿತ್ತು ಎಂದು ಮೂಲಗಳು ತಿಳಿಸಿವೆ. ಎರಡೂ ಅಡುಗೆ ಕೋಣೆಗಳಲ್ಲೂ ಹಲವಾರು ಎಲ್ಪಿಜಿ ಸಿಲಿಂಡರ್ ಗಳನ್ನು ಸಂಗ್ರಹಿಸಿಡಲಾಗಿತ್ತು. ಆದರೆ, ಪ್ರಾಥಮಿಕ ತಪಾಸಣೆಯಲ್ಲಿ ಸಿಲಿಂಡರ್ ಸ್ಫೋಟಕ್ಕೆ ಯಾವುದೇ ಸಾಕ್ಷಾಧಾರಗಳು ಕಂಡು ಬಂದಿಲ್ಲ ಎಂದು ತಿಳಿಸಿದ್ದಾರೆ.
ಅಗ್ನಿ ಅವಘಡದ ಸ್ವರೂಪ ಮತ್ತು ತೀವ್ರತೆಯು ಕಟ್ಟಡದ ವೈರಿಂಗ್ ವ್ಯವಸ್ಥೆಯಲ್ಲಿನ ದೋಷದಿಂದ ಸಂಭವಿಸಿದೆ ಎಂಬುದನ್ನು ಸೂಚಿಸುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ವಿಧಿವಿಜ್ಞಾನ ತಂಡವೊಂದು ಕಟ್ಟಡವನ್ನು ತಪಾಸಣೆ ನಡೆಸಿದ್ದು, ಘಟನಾ ಸ್ಥಳದಿಂದ ಮಾದರಿಗಳನ್ನು ಸಂಗ್ರಹಿಸಿದೆ.
ವಿಧಿವಿಜ್ಞಾನ ಪರೀಕ್ಷಾ ವರದಿ ಘಟನೆಗೆ ಪ್ರಮುಖ ಕಾರಣವನ್ನು ಬಹಿರಂಗಪಡಿಸಲಿದೆ.
