ಲೈಂಗಿಕ ಕಿರುಕು*ಳ ನೀಡಿದ ನೌಕರನಿಗೆ ಸಾರ್ವಜನಿಕವಾಗಿ ಚಪ್ಪಲಿ ಏಟು; ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಆಕ್ರೋಶ!

ಹೈದರಾಬಾದ್: ಮಹಬೂಬಾಬಾದ್ ಜಿಲ್ಲೆಯಲ್ಲಿ ಪರಿಹಾರ ಹಣಕ್ಕಾಗಿ ಅಲೆಯುತ್ತಿದ್ದ ವಿಧವೆ ರೈತ ಮಹಿಳೆಯೊಬ್ಬರು ತಮ್ಮ ಸಂಬಂಧಿಕರೊಂದಿಗೆ ಸೇರಿ ಕಂದಾಯ ಇಲಾಖೆಯ ಅಟೆಂಡೆಂಟ್‌ಗೆ ಚಪ್ಪಲಿಯಿಂದ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಭಾನುವಾರ ನಡೆದಿದ್ದು, ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಭಾರಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ಪರ್ವತಗಿರಿ ಗ್ರಾಮದ ನಿವಾಸಿ ಯಾಕಮ್ಮ ಎಂಬುವವರು ಅಮರಾವತಿ-ನಾಗ್ಪುರ ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇ ಯೋಜನೆಗಾಗಿ ತಮ್ಮ 20 ಕುಂಟೆ ಜಮೀನನ್ನು ಕಳೆದುಕೊಂಡಿದ್ದರು. ಆದರೆ, ಸರ್ಕಾರ ನೀಡಬೇಕಾಗಿದ್ದ ಭೂಪರಿಹಾರದ ಹಣವು ತಾಂತ್ರಿಕ ದೋಷದಿಂದ ಬೇರೆಯವರ ಬ್ಯಾಂಕ್ ಖಾತೆಗೆ ಜಮೆಯಾಗಿತ್ತು. ಇದನ್ನು ಸರಿಪಡಿಸಿಕೊಂಡು ತಮಗೆ ಬರಬೇಕಾದ ಹಣವನ್ನು ಬಿಡುಗಡೆ ಮಾಡುವಂತೆ ಕೋರಿ ಕಳೆದ ಒಂದೂವರೆ ವರ್ಷದಿಂದ ಯಾಕಮ್ಮ ನಿರಂತರವಾಗಿ ಜಿಲ್ಲಾಧಿಕಾರಿ ಕಚೇರಿಗೆ ಅಲೆಯುತ್ತಿದ್ದರು.
ಕಂದಾಯ ಇಲಾಖೆಯಲ್ಲಿ ಅಟೆಂಡೆಂಟ್ ಆಗಿ ಕೆಲಸ ಮಾಡುತ್ತಿರುವ ಮುರಳಿ ಎಂಬ ನೌಕರ, ಪರಿಹಾರದ ಹಣ ಕೊಡಿಸಬೇಕಾದರೆ ತನಗೆ ಲೈಂಗಿಕವಾಗಿ ಸಹಕರಿಸಬೇಕು ಎಂದು ಯಾಕಮ್ಮ ಅವರಿಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಮೇ 30 ರಂದು ಕೆಲಸ ಮುಗಿಸಿ ಮನೆಗೆ ಹೊರಟಿದ್ದ ಯಾಕಮ್ಮ ಅವರಿಗೆ ಲಿಫ್ಟ್ ಕೊಡುವುದಾಗಿ ನಂಬಿಸಿ ತನ್ನ ಬೈಕ್‌ನಲ್ಲಿ ಹತ್ತಿಸಿಕೊಂಡಿದ್ದ ಮುರಳಿ, ಗ್ರಾಮದ ಹೊರವಲಯದ ನಿರ್ಜನ ಪ್ರದೇಶದಲ್ಲಿ ಬೈಕ್ ನಿಲ್ಲಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ್ದಾನೆ ಎಂದು ಮಹಿಳೆಯ ಸಹೋದರ ಆರೋಪಿಸಿದ್ದಾರೆ.
ಈ ಘಟನೆಯಿಂದ ತೀವ್ರ ಮನನೊಂದಿದ್ದ ಯಾಕಮ್ಮ, ತೀವ್ರ ಸಾಲದ ಬಾಧೆ ಹಾಗೂ ಕೌಟುಂಬಿಕ ಸಮಸ್ಯೆಯಿಂದಾಗಿ ಮರುದಿನವೇ (ಮೇ 31) ಆತ್ಮಹತ್ಯೆಗೆ ಯತ್ನಿಸಿದ್ದರು. ವಿಷಯ ತಿಳಿದು ಆಕ್ರೋಶಗೊಂಡ ಮಹಿಳೆಯ ಸಂಬಂಧಿಕರು ಮತ್ತು ಕುಟುಂಬಸ್ಥರು ಭಾನುವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲೇ ಮುರಳಿಯನ್ನು ಸುತ್ತುವರಿದು, ಚಪ್ಪಲಿ ಹಾಗೂ ಪೊರಕೆಗಳಿಂದ ಮನಬಂದಂತೆ ಥಳಿಸಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಮಧ್ಯಪ್ರವೇಶಿಸಿ ಕಂದಾಯ ನೌಕರನನ್ನು ಸಾರ್ವಜನಿಕರ ಕೈಯಿಂದ ರಕ್ಷಿಸಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಸದ್ಯ ಸಂತ್ರಸ್ತ ಮಹಿಳೆಯ ದೂರಿನ ಮೇರೆಗೆ ಆರೋಪಿ ಮುರಳಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
