‘ಡಾನ್ 3’ ಕೈಬಿಟ್ಟ ರಣವೀರ್ ಸಿಂಗ್‌ಗೆ 4 ಲಕ್ಷ ಚಲನಚಿತ್ರ ಕಾರ್ಮಿಕರ ಬಹಿಷ್ಕಾರ!

ಫರ್ಹಾನ್ ಅಖೈರ್ ಅವರ ‘ಡಾನ್ 3’ ಸಿನಿಮಾದಿಂದ ರಣವೀರ್ ಸಿಂಗ್ ಕೊನೆ ಕ್ಷಣದಲ್ಲಿ ಹೊರನಡೆದ ನಂತರ ‘ದಿ ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್ (FWICE) ಅಲ್ಲಿರುವ ಸುಮಾರು ನಾಲ್ಕು ಲಕ್ಷಕ್ಕೂ ಹೆಚ್ಚು ಸದಸ್ಯರು ರಣವೀರ್ ಸಿಂಗ್ ಜೊತೆಗೆ ಕೆಲಸ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ರಣವೀರ್ ಸಿಂಗ್, “ನನಗೆ ಅವರ ಬಗ್ಗೆ ಉತ್ತಮ ಗೌರವವಿದೆ’ ಎಂದು ಹೇಳಿದ್ದಾರೆ.
ಫರ್ಹಾನ್ ಅಯ್ತರ್ ಮತ್ತು ಅವರ ಪಾಲುದಾರ ರಿತೇಶ್ ಸಿಧ್ವಾನಿ ಅವರು ಸಿಂಗ್ ವಿರುದ್ಧ ಭಾರತೀಯ ಸಿನಿಮಾ ಮತ್ತು ಟೆಲಿವಿಜನ್ ನಿರ್ದೇಶಕರ ಸಂಘದಲ್ಲಿ ದೂರು ದಾಖಲಿಸಿದ್ದರು. ನಂತರ ಈ ವಿಷಯವನ್ನು FWICE ಗೆ ಉಲ್ಲೇಖಿಸಿದ್ದರು.

ಮೂರು ವರ್ಷಗಳಿಂದ ‘ಡಾನ್ 3’ ಸಿದ್ಧತೆಯ ಹಂತದಲ್ಲಿತ್ತು. ‘ಡಾನ್ 1’ ಮತ್ತು ‘ಡಾನ್ 2’ ಸಿನಿಮಾದಲ್ಲಿ ನಟ ಶಾರುಖ್ ಖಾನ್ ನಟಿಸಿದ್ದ ಕಾರಣ, ಹೊಸ ಮುಖದ ಜೊತೆಗೆ ‘ಡಾನ್ 3’ ಪ್ರಾರಂಭಿಸುವ ಉದ್ದೇಶದಲ್ಲಿ ತಂಡವು ರಣವೀರ್ ಸಿಂಗ್ ಅವರನ್ನು ನಾಯಕ ನಟರಾಗಿ ಆರಿಸಿತ್ತು. ಆದರೆ ಚಿತ್ರೀಕರಣ ಇನ್ನೂ ಪ್ರಾರಂಭಿಸಿರಲಿಲ್ಲ. ಈ ಸಿನಿಮಾದ ಪೂರ್ವ ನಿರ್ಮಾಣ ಹಂತದಲ್ಲಿ 45 ಕೋಟಿ ರೂ.ಗಳಷ್ಟು ವೆಚ್ಚ ಮಾಡಲಾಗಿದೆ ಎಂದು ನಿರ್ಮಾಪಕರು ಹೇಳಿದ್ದಾರೆ.
“ಇಂದಿನ ನಂತರ ನಾವು ರಣವೀರ್ ಸಿಂಗ್ ಅವರೊಂದಿಗೆ ಕೆಲಸ ಮಾಡುವುದಿಲ್ಲ. ಕ್ಯಾಮರಾಮೆನ್ ಆಗಿರಲಿ, ಸ್ಪಾಟ್ ಬಾಯ್ ಆಗಿರಲಿ, ಲೈಟನ್ ಆಗಿರಲಿ ಅಥವಾ ನಮ್ಮ ಕಡೆಯಿಂದ ಬೇರೆ ಯಾರೇ ಇರಲಿ. ವಿವಾದ ಬಗೆಹರಿಯುವವರೆಗೂ ನಾವು ರಣವೀರ್ ಸಿಂಗ್ ಜೊತೆಗೆ ಕೆಲಸ ಮಾಡುವುದಿಲ್ಲ. ಒಬ್ಬ ಕಲಾವಿದ ಜನರಿಂದಾಗಿ, ನಮ್ಮ ಜೊತೆಗೆ ಕೆಲಸ ಮಾಡುವ ಸದಸ್ಯರು, ತಂತ್ರಜ್ಞರು ಮತ್ತು ಸಿನಿಮಾ ನೋಡುವವರಿಂದಾಗಿ ಕಲಾವಿದನಾಗಿ ಬೆಳೆಯುತ್ತಾನೆ. ಬಹಳಷ್ಟು ಮಂದಿ ಶ್ರದ್ಧೆಯಿಂದ ಮೂರು ವರ್ಷಗಳ ಕಾಲ ದುಡಿದ ಸಿನಿಮಾದಿಂದ ಅವರು ಹೊರನಡೆದಿದ್ದಾರೆ” ಎಂದು FWICE ಗೌರವ ಪ್ರಧಾನ ಕಾರ್ಯದರ್ಶಿ ಅಶೋಕ್ ದುಬೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
“ನಾವು ರಣವೀರ್ ಸಿಂಗ್ ಅವರಿಗೆ ಪತ್ರ ಬರೆದಿದ್ದೇವೆ. ಆದರೆ ಅವರು ಉತ್ತರ ನೀಡಿಲ್ಲ. FWICEನ ಯಾವುದೇ ಸದಸ್ಯ ಅವರೊಂದಿಗೆ ಕೆಲಸ ಮಾಡುವುದಿಲ್ಲ” ಎಂದು ಹೇಳಿದ್ದಾರೆ.
ತಮ್ಮ ವಕ್ತಾರರ ಮೂಲಕ ಉತ್ತರಿಸಿದ ರಣವೀರ್ ಸಿಂಗ್, ತಮಗೆ ಚಿತ್ರೋದ್ಯಮದ ಸದಸ್ಯರು ಮತ್ತು ‘ಡಾನ್ ಫ್ರಾಂಚೈಸಿಗೆ ಸಂಬಂಧಿಸಿದ ಪ್ರತಿಯೊಬ್ಬರ ಮೇಲೂ ಗೌರವವಿದೆ ಎಂದು ಹೇಳಿದ್ದಾರೆ.
“ರಣವೀರ್ ಅವರು ‘ಡಾನ್ 3’ಗೆ ಸಂಬಂಧಿಸಿದ ಇತ್ತೀಚೆಗಿನ ಬೆಳವಣಿಗೆಗಳ ಸುತ್ತ ಮೌನವಹಿಸಲು ಪ್ರಜ್ಞಾಪೂರ್ವಕವಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ವೃತ್ತಿಪರ ಚರ್ಚೆಗಳು ಮತ್ತು ವೈಯಕ್ತಿಕ ಸಮೀಕರಣಗಳನ್ನು ಗೌರವಯುತವಾಗಿ, ಪ್ರಬುದ್ಧವಾಗಿ ಮತ್ತು ಪರಸ್ಪರ ಗೌರವದಿಂದ ನಿಭಾಯಿಸಬೇಕು ಎಂದು ಅವರು ನಂಬಿದ್ದಾರೆ. ಈ ಕುರಿತಾಗಿ ಅನೇಕ ನಿರೂಪಣೆಗಳು ಮತ್ತು ಊಹಾಪೋಹಗಳು ಹರಡಿದ್ದರೂ, ಪ್ರತಿಕ್ರಿಯೆ ನೀಡುವ ಅಗತ್ಯವಿದೆ ಎಂದು ಪರಿಗಣಿಸಿಲ್ಲ. ರಣ್ಣೀರ್ ಸಿಂಗ್ ಅವರ ಗಮನವು ಮುಂದಿನ ಕೆಲಸ ಮತ್ತು ಬದ್ಧತೆಗಳ ಮೇಲೆ ದೃಢವಾಗಿ ಬೇರೂರಿದೆ. ‘ಡಾನ್ 3’ಯಲ್ಲಿ ಭಾಗಿಯಾಗಿರುವ ಎಲ್ಲರ ಬಗ್ಗೆಯೂ ಗೌರವ ಹೊಂದಿದ್ದಾರೆ ಮತ್ತು ಫ್ರಾಂಚೈಸಿಗೆ ನಿರಂತರ ಯಶಸ್ಸನ್ನು ಪ್ರಾಮಾಣಿಕವಾಗಿ ಬಯಸುತ್ತಾರೆ. ಇಂತಹ ಸಂದರ್ಭದಲ್ಲಿ ಸಂಯಮ ಮತ್ತು ಗೌರವಯುತವಾಗಿ ನಡೆದುಕೊಳ್ಳಲು ಪ್ರಜ್ಞಾಪೂರ್ವಕವಾಗಿ ನಿರ್ಧರಿಸಿದ್ದಾರೆ. ಅದೇ ನಿಲುವನ್ನು ಮುಂದುವರಿಸುತ್ತಾರೆ” ಎಂದು ವಕ್ತಾರರು ಹೇಳಿದ್ದಾರೆ.
FWICE ಭಾರತದಲ್ಲಿ ಚಲನಚಿತ್ರ ಮತ್ತು ಟೆಲಿವಿಜನ್ ಕಾರ್ಮಿಕರ ಪ್ರಾಥಮಿಕ ವ್ಯಾಪಾರಿ ಸಂಘಟನೆಯಾಗಿದೆ. ಈ ಸಂಘಟನೆಯನ್ನು 1956ರಲ್ಲಿ ರಚಿಸಲಾಗಿತ್ತು. ಸದಸ್ಯರ ಕಡೆಗೆ ಗಮನಹರಿಸುವ ಜೊತೆಗೆ ಕಲಾವಿದರು, ತಂತ್ರಜ್ಞರು ಮತ್ತು ನಿರ್ಮಾಣ ಸ್ಟುಡಿಯೋಗಳ ನಡುವಿನ ಸಂಘರ್ಷಗಳಲ್ಲಿ ಮಧ್ಯಸ್ಥಿಕೆ ವಹಿಸುತ್ತದೆ.
“ಫೆಡರೇಶನ್ ಕಾರ್ಮಿಕರ ಸುಧಾರಣೆಗಾಗಿ ಕೆಲಸ ಮಾಡುತ್ತದೆ. ಆದರೆ ನಿರ್ಮಾಪಕರಿಗೆ ಅನ್ಯಾಯವಾದರೆ ಫೆಡರೇಶನ್ ನಿರ್ಮಾಪಕರನ್ನು ಬೆಂಬಲಿಸುತ್ತದೆ. ಹೀಗಾಗಿ ಸೂಪರ್ಸ್ಟಾರ್ ವ್ಯವಸ್ಥೆಯ ನಿಯಮಗಳಿಗಿಂತ ದೊಡ್ಡವನಲ್ಲ ಎಂಬ ಸಂದೇಶವನ್ನು ಉದ್ಯಮಕ್ಕೆ ಹೋಗಬೇಕು ಎಂದು ನಿರ್ಧರಿಸಿದ್ದೇವೆ” ಎಂದು FWICE ಅಧ್ಯಕ್ಷ ಬಿಎನ್ ತಿವಾರಿ ಹೇಳಿದ್ದಾರೆ.
FWICE ಮುಖ್ಯ ಸಲಹೆಗಾರ ಅಶೋಕ್ ಪಂಡಿತ್ ಪ್ರಕಾರ, ಶೂಟಿಂಗ್ ಪ್ರಾರಂಭವಾಗುವ ಮೂರು ವಾರಗಳಿಗೆ ಮೊದಲು ರಣವೀರ್ ಸಿಂಗ್ ಸಿನಿಮಾದಿಂದ ಹೊರ ನಡೆದಿದ್ದಾರೆ. ಹೀಗಾಗಿ ನಿರ್ಮಾಪಕರು ಭಾರಿ ನಷ್ಟ ಎದುರಿಸುತ್ತಿದ್ದಾರೆ. ಈ ಸಂಬಂಧ ಫೆಡರೇಶನ್ ರಣವೀರ್ ಸಿಂಗ್ ಅವರಿಗೆ ಪತ್ರಗಳು ಮತ್ತು ಜ್ಞಾಪನೆಗಳನ್ನು ಕಳುಹಿಸಿದರೂ ಅವರು ಪ್ರತಿಕ್ರಿಯಿಸಿರಲಿಲ್ಲ.
2011ರಲ್ಲಿ ಶಾರುಖ್ ಖಾನ್ ನಟಿಸಿದ ‘ಡಾನ್ 2’ ಬಿಡುಗಡೆಯಾಗಿತ್ತು. ಆ ನಂತರ ‘ಡಾನ್ 3’ ಮೂಲಕ ಫರ್ಹಾನ್ ಅಖರ್ ನಿರ್ದೇಶನಕ್ಕೆ ಮರಳುವ ಉದ್ದೇಶ ಹೊಂದಿದ್ದರು. ಸಿನಿಮಾದ ಸ್ಕ್ರಿಪ್ಟ್ ನಲ್ಲಿ ಬದಲಾವಣೆ ಮಾಡಿರುವ ಕಾರಣ ರಣವೀರ್ ಸಿಂಗ್ ಸಿನಿಮಾದಿಂದ ಹೊರ ನಡೆದಿದ್ದಾರೆ ಎಂದು ವರದಿಯಾಗಿದೆ. ‘ಧುರಂಧರ್ ಸಿನಿಮಾದಲ್ಲಿ ಬಹುದೊಡ್ಡ ಯಶಸ್ಸು ಕಂಡಿರುವ ರಣವೀರ್ ಸಿಂಗ್ ಅನೇಕ ಬಾರಿ ‘ಡಾನ್ 3’ ಚಿತ್ರೀರಕಣವನ್ನು ಮುಂದೂಡಿದ್ದರು. ಮತ್ತು ಕಳೆದ ಡಿಸೆಂಬರ್ ನಲ್ಲಿ ಸಿನಿಮಾದಲ್ಲಿ ನಟಿಸುವುದಿಲ್ಲ ಎಂದು ಫ್ರಾಂಚೈಸಿಗೆ ತಿಳಿಸಿದ್ದರು ಎಂದು ಆರೋಪಿಸಲಾಗಿದೆ.