Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಚಾರಣಿಗರಿಗೆ ಗ್ರೀನ್ ಸಿಗ್ನಲ್; ಜೂನ್ 1 ರಿಂದ ನೇತ್ರಾವತಿ ಪೀಕ್, ಬಂಡಾಜೆ ಜಲಪಾತ ಮುಕ್ತ

Spread the love

ಬೆಳ್ತಂಗಡಿ: ಪ್ರಕೃತಿ ಪ್ರೇಮಿಗಳು ಹಾಗೂ ಚಾರಣಿಗರ ನೆಚ್ಚಿನ ತಾಣಗಳಾದ ಬೆಳ್ತಂಗಡಿ ತಾಲೂಕಿನ ನೇತ್ರಾವತಿ ಪೀಕ್, ಬಂಡಾಜೆ ಜಲಪಾತ ಹಾಗೂ ಐತಿಹಾಸಿಕ ಗಡಾಯಿಕಲ್ಲು (ಜಮಾಲಾಬಾದ್ ಕೋಟೆ) ಪ್ರವೇಶಕ್ಕೆ ಹೇರಲಾಗಿದ್ದ ನಿಷೇಧವನ್ನು ಅರಣ್ಯ ಇಲಾಖೆ ತೆರವುಗೊಳಿಸಿದೆ. ಬರುವ ಜೂನ್ 1 ರಿಂದ ಈ ಎಲ್ಲಾ ಪ್ರೇಕ್ಷಣೀಯ ಸ್ಥಳಗಳು ಪ್ರವಾಸಿಗರ ವೀಕ್ಷಣೆಗೆ ಅಧಿಕೃತವಾಗಿ ತೆರೆದುಕೊಳ್ಳಲಿವೆ.

ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಗೆ ಒಳಪಡುವ ಮಲವಂತಿಗೆ ಗ್ರಾಮದಲ್ಲಿ ಅತಿ ಹೆಚ್ಚು ಪ್ರೇಕ್ಷಣೀಯ ಸ್ಥಳಗಳಿವೆ. ಬೇಸಿಗೆ ಕಾಲದಲ್ಲಿ ಕಾಡಿನ ಒಣ ಹವೆ ಹಾಗೂ ಪ್ರವಾಸಿಗರ ನಿರ್ಲಕ್ಷ್ಯದಿಂದಾಗಿ ಕಾಡ್ಗಿಚ್ಚು (Forest Fire) ಸಂಭವಿಸುವ ಸಾಧ್ಯತೆ ದಟ್ಟವಾಗಿತ್ತು. ಅರಣ್ಯ ಇಲಾಖೆ ಎಷ್ಟೇ ಎಚ್ಚರಿಕೆ ನೀಡಿದರೂ ಪ್ರವಾಸಿಗರು ಗಣನೆಗೆ ತೆಗೆದುಕೊಳ್ಳದ ಕಾರಣ ಮತ್ತು ವನ್ಯಜೀವಿ ವಿಭಾಗದಿಂದ ನಡೆದ ಹುಲಿಗಣತಿ (Tiger Census) ಹಿನ್ನೆಲೆಯಲ್ಲಿ ಕಳೆದ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಈ ಪ್ರಮುಖ ಚಾರಣ ಸ್ಥಳಗಳಿಗೆ ಸಾರ್ವಜನಿಕರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು.

ಈ ಬಾರಿ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಬೇಸಿಗೆಯಲ್ಲೇ ಆಗಾಗ ಉತ್ತಮ ಮಳೆಯಾಗಿದ್ದರಿಂದ ಅರಣ್ಯ ಪ್ರದೇಶವೆಲ್ಲ ಸದ್ಯ ಹಸಿರಿನಿಂದ ಕಂಗೊಳಿಸುತ್ತಿದೆ. ಹಳ್ಳ-ತೊರೆಗಳಲ್ಲಿ ನೀರಿನ ಹರಿವು ಆರಂಭವಾಗಿದ್ದು, ಕಾಡ್ಗಿಚ್ಚಿನ ಭೀತಿ ಸಂಪೂರ್ಣವಾಗಿ ದೂರವಾಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗವು ಜೂನ್ 1 ರಿಂದ ಚಾರಣಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಈಗಾಗಲೇ ತಾಲೂಕಿನ ಕಡಮ ಗುಂಡಿ ಹಾಗೂ ಬೊಳ್ಳೆ ಜಲಪಾತಗಳು ಸಾರ್ವಜನಿಕರಿಗೆ ಮುಕ್ತವಾಗಿದ್ದು, ಖಾಸಗಿ ಜಾಗದಲ್ಲಿರುವ ಎರ್ಮಾಯಿ ಜಲಪಾತ ವೀಕ್ಷಣೆಗೆ ಯಾವುದೇ ನಿರ್ಬಂಧ ಇರಲಿಲ್ಲ.

ಸಮುದ್ರಮಟ್ಟದಿಂದ ಸುಮಾರು 1,700 ಅಡಿ ಎತ್ತರದಲ್ಲಿರುವ ನಡ-ಲಾಯಿಲ ಗ್ರಾಮದ ಐತಿಹಾಸಿಕ ‘ಗಡಾಯಿಕಲ್ಲು’ ಚಾರಣಿಗರ ಪ್ರಮುಖ ಆಕರ್ಷಣೆಯಾಗಿದೆ. ಇದಕ್ಕೂ ಜೂನ್ 1 ರಿಂದ ಪ್ರವೇಶ ಸಿಗಲಿದೆಯಾದರೂ, ಮುಂಬರುವ ದಿನಗಳಲ್ಲಿ ಭಾರಿ ಮಳೆಯಾಗಿ ಕಲ್ಲುಗಳು ಜಾರುವಂತಾದರೆ, ಸುರಕ್ಷತೆಯ ದೃಷ್ಟಿಯಿಂದ ಮಳೆಗಾಲದಲ್ಲಿ ಇಲ್ಲಿಗೆ ಮತ್ತೆ ನಿಷೇಧ ಹೇರುವ ಸಾಧ್ಯತೆಯಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.


Spread the love
Share:

administrator

Leave a Reply

Your email address will not be published. Required fields are marked *