Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕ್ವೆಟ್ಟಾ: ರೈಲು ಗುರಿಯಾಗಿಸಿ ಭೀಕರ ಆತ್ಮಹತ್ಯಾ ಬಾಂಬ್ ದಾಳಿ; 23 ಪ್ರಯಾಣಿಕರ ಸಾ*ವು, 47 ಕ್ಕೂ ಹೆಚ್ಚು ಜನರಿಗೆ ಗಾಯ!

Spread the love

ಕ್ವೆಟ್ಟಾ (ಪಾಕಿಸ್ತಾನ) : ಪಾಕಿಸ್ತಾನದ ಅತ್ಯಂತ ವಿವಾದಿತ ಹಾಗೂ ಉದ್ವಿಗ್ನ ಪ್ರದೇಶವಾಗಿರುವ ಬಲೂಚಿಸ್ತಾನದ ರಾಜಧಾನಿ ಕ್ವೆಟ್ಟಾದಲ್ಲಿ ಭಾನುವಾರ ಭೀಕರ ಆತ್ಮಹತ್ಯಾ ಬಾಂಬ್ ದಾಳಿ ನಡೆದಿದೆ. ಮಿಲಿಟರಿ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ರೈಲನ್ನು ಗುರಿಯಾಗಿಸಿ ನಡೆಸಲಾದ ಈ ವಿಧ್ವಂಸಕ ಕೃತ್ಯದಲ್ಲಿ ಕನಿಷ್ಠ 23 ಪ್ರಯಾಣಿಕರು ಸಾವನ್ನಪ್ಪಿದ್ದು, 47 ಕ್ಕೂ ಅಧಿಕ ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನದ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.ಕ್ವೆಟ್ಟಾದ ಚಮನ್ ಫಾಟಕ್ ಎಂಬಲ್ಲಿಂದ ಕ್ಯಾಂಟ್ ಪ್ರದೇಶದ ಕಡೆಗೆ ತೆರಳುತ್ತಿದ್ದ ‘ಜಾಫರ್ ಎಕ್ಸ್‌ಪ್ರೆಸ್’ ರೈಲಿನ ಮೇಲೆ ಈ ದಾಳಿ ನಡೆದಿದೆ. ನಿಷೇಧಿತ ಉಗ್ರಗಾಮಿ ಸಂಘಟನೆ ‘ಬಲೂಚ್ ಲಿಬರೇಷನ್ ಆರ್ಮಿ’ (BLA) ಈ ಭೀಕರ ಆತ್ಮಹತ್ಯಾ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಪಾಕಿಸ್ತಾನದ ಭದ್ರತಾ ಪಡೆಗಳು ಇತ್ತೀಚೆಗೆ ನಡೆಸಿದ ಸರಣಿ ಕಾರ್ಯಾಚರಣೆಗಳಿಂದ ಕಂಗೆಟ್ಟಿರುವ ಬಿಎಲ್‌ಎ ಉಗ್ರರು, ಸೇಡು ತೀರಿಸಿಕೊಳ್ಳಲು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.

ಪ್ರಾಥಮಿಕ ವರದಿಗಳ ಪ್ರಕಾರ, ರೈಲ್ವೆ ನಿಲ್ದಾಣದ ಬಳಿ ಭೀಕರ ಬಾಂಬ್ ಸ್ಫೋಟ ಸಂಭವಿಸಿದ ತಕ್ಷಣವೇ ಭಾರಿ ಗುಂಡಿನ ಚಕಮಕಿಯ ಸದ್ದು ಕೇಳಿಬಂದಿದೆ. ಸ್ಫೋಟದ ತೀವ್ರತೆಗೆ ಜಾಫರ್ ಎಕ್ಸ್‌ಪ್ರೆಸ್ ರೈಲಿನ ಬೋಗಿಗಳಲ್ಲಿ ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದ್ದು, ಇಡೀ ಆವರಣ ದಟ್ಟ ಹೊಗೆಯಿಂದ ಆವೃತವಾಗಿತ್ತು. ಸದ್ಯ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ ಎಂದು ಸಿಎನ್‌ಎನ್ ನ್ಯೂಸ್ 18 ವರದಿ ಮಾಡಿದೆ.

ದಾಳಿಯ ನಂತರ ಪ್ರಕಟಣೆ ಹೊರಡಿಸಿರುವ ಬಲೂಚ್ ಆರ್ಮಿ, ಪಾಕಿಸ್ತಾನದ ಸೇನಾ ಸಿಬ್ಬಂದಿ ಪ್ರಯಾಣಿಸುತ್ತಿದ್ದ ರೈಲನ್ನು ಗುರಿಯಾಗಿಸಿ ತಮ್ಮ ಸಂಘಟನೆಯ ಸ್ವಯಂ ತ್ಯಾಗ ಘಟಕ ಎಂದೇ ಕರೆಯಲಾಗುವ ‘ಮಜೀದ್ ಬ್ರಿಗೇಡ್’ ಈ ಫಿದಾಯಿ (ಆತ್ಮಹತ್ಯಾ) ದಾಳಿಯನ್ನು ಸಂಘಟಿಸಿದೆ ಎಂದು ಹೇಳಿಕೊಂಡಿದೆ.

ಬಲೂಚಿಸ್ತಾನದ ಗೃಹ ವ್ಯವಹಾರಗಳ ವಿಶೇಷ ಸಹಾಯಕ ಬಾಬರ್ ಯೂಸಫ್‌ಜೈ ಪ್ರತಿಕ್ರಿಯಿಸಿ, “ಘಟನಾ ಸ್ಥಳದಲ್ಲಿ ಹಾನಿಯ ತೀವ್ರತೆ ಹೆಚ್ಚಾಗದಂತೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಭದ್ರತಾ ಪಡೆಗಳು ಹಿರಿಯ ಅಧಿಕಾರಿಗಳೊಂದಿಗೆ ಸ್ಥಳದಲ್ಲಿದ್ದು, ಸಂಪೂರ್ಣ ತನಿಖೆಯ ನಂತರ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.
ಪ್ರತ್ಯೇಕ ಬಲೂಚ್ ರಾಷ್ಟ್ರಕ್ಕಾಗಿ ಹೋರಾಡುತ್ತಿರುವ ಉಗ್ರಗಾಮಿ ಗುಂಪುಗಳು ಇತ್ತೀಚಿನ ದಿನಗಳಲ್ಲಿ ರೈಲ್ವೆ ಮೂಲಸೌಕರ್ಯಗಳು, ಪೊಲೀಸ್ ಚೌಕಿಗಳು ಮತ್ತು ಸೇನಾ ನೆಲೆಗಳನ್ನೇ ಪ್ರಮುಖವಾಗಿ ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿವೆ. ಕಳೆದ 2025ರ ಮಾರ್ಚ್ ತಿಂಗಳಿನಲ್ಲೂ ಇದೇ ಜಾಫರ್ ಎಕ್ಸ್‌ಪ್ರೆಸ್ ರೈಲಿನ ಹಳಿಯನ್ನು ಸ್ಫೋಟಿಸಿ, ಸುಮಾರು 450ಕ್ಕೂ ಹೆಚ್ಚು ಪ್ರಯಾಣಿಕರು ಹಾಗೂ 182 ಭದ್ರತಾ ಸಿಬ್ಬಂದಿಯನ್ನು ಬಲೂಚ್ ಆರ್ಮಿ ಒತ್ತೆಯಾಳಾಗಿರಿಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.


Spread the love
Share:

administrator

Leave a Reply

Your email address will not be published. Required fields are marked *