ಹೈದರಾಬಾದ್‌ನಲ್ಲಿ ಮಟ ಮಟ ಮಧ್ಯಾಹ್ನವೇ ವಿಕೃತಿ!: ಮಗು ಎತ್ತಿ ಹೋಗುತ್ತಿದ್ದ ತಾಯಿಯ ಡ್ರೆಸ್ ಎತ್ತಿದ ಕಾಮುಕ

ಹೈದರಾಬಾದ್: ಮಗುವನ್ನು ಎತ್ತಿಕೊಂಡು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆ(Woman)ಯ ಡ್ರೆಸ್ ಎತ್ತಿ ಯುವಕನೊಬ್ಬ ವಿಕೃತಿ ಮೆರೆದಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಅದು ಮೇ 14ರ ಮಟ ಮಟ ಮಧ್ಯಾಹ್ನ. ಮಣಿಕೊಂಡ–ನೆಕ್ನಾಂಪುರ ಪ್ರದೇಶದ ಅಲ್ಕಾಪುರ್ ಟೌನ್‌ಶಿಪ್‌ನಲ್ಲಿರುವ ಪ್ರಣತಿ ಈಶಾ ಅಪಾರ್ಟ್‌ಮೆಂಟ್ ಬಳಿ ಎಂದಿನಂತೆ ಸಾರ್ವಜನಿಕರ ಓಡಾಟವಿತ್ತು. ಇಲ್ಲೇ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ಆ ವಿಕೃತ ಕೃತ್ಯ ಈಗ ಇಂಟರ್ನೆಟ್‌ನಲ್ಲಿ ತೀವ್ರ ಆಕ್ರೋಶ ಮತ್ತು ಸಾರ್ವಜನಿಕರಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿದೆ.
ವೈರಲ್ ಆಗಿರುವ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡುಬರುವಂತೆ, ಮಹಿಳೆಯೊಬ್ಬಳು ತನ್ನ ಎಡಗೈಯಲ್ಲಿ ಪುಟ್ಟ ಮಗುವನ್ನು ಹಿಡಿದುಕೊಂಡು, ಬಲಗೈಯಲ್ಲಿ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಛತ್ರಿ ಹಿಡಿದು ಶಾಲೆಯಿಂದ ನಿಧಾನವಾಗಿ ಮನೆಗೆ ಹೆಜ್ಜೆ ಹಾಕುತ್ತಿದ್ದರು. ಆಕೆ ರಸ್ತೆಯಲ್ಲಿ ಸಾಗುತ್ತಿದ್ದಾಗ, ಹಿಂದಿನಿಂದ ಬಂದ ಕಿಡಿಗೇಡಿಯೊಬ್ಬ, ನಡುರಸ್ತೆಯಲ್ಲೇ ಸಾರ್ವಜನಿಕವಾಗಿ ಆಕೆಯ ಉಡುಪನ್ನು ಮೇಲಕ್ಕೆ ಎತ್ತಿ ವಿಕೃತಿ ಮೆರೆದಿದ್ದಾನೆ.ತಕ್ಷಣವೇ ತನಗೆ ಏನಾಯಿತು ಮತ್ತು ಅದು ಯಾರೆಂದು ತಿಳಿಯದೆ ಒಂದು ಕ್ಷಣ ಗೊಂದಲಕ್ಕೊಳಗಾದ ಆ ತಾಯಿ, ಧೈರ್ಯಗೆಡದೆ ತಕ್ಷಣ ತಿರುಗಿ ನಿಂತಿದ್ದಾರೆ, ಆತ ಅಲ್ಲಿಂದ ತಕ್ಷಣವೇ ಕಾಲ್ಕಿತ್ತಿದ್ದಾನೆ. ಧೈರ್ಯಶಾಲಿ ಮಹಿಳೆ ಅಲ್ಲಿಗೇ ಸುಮ್ಮನಾಗದೆ, ಕೆಲವೇ ಸೆಕೆಂಡುಗಳ ಕಾಲ ರಸ್ತೆಯಲ್ಲಿ ನಿಂತು, ನಂತರ ಆತ ಓಡಿದ ದಿಕ್ಕಿನತ್ತಲೇ ಆಕ್ರೋಶದಿಂದ ಹೆಜ್ಜೆ ಹಾಕಿದ್ದಾಳೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಇದನ್ನು ಅಸಹ್ಯಕರ ಮತ್ತು ಆಘಾತಕಾರಿ ಎಂದು ಕರೆದಿದ್ದು, ವಸತಿ ಪ್ರದೇಶಗಳಲ್ಲೇ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.ವಿಡಿಯೋ ಆನ್‌ಲೈನ್‌ನಲ್ಲಿ ಭಾರೀ ಸದ್ದು ಮಾಡಿದ ಬೆನ್ನಲ್ಲೇ, ನರಸಿಂಗಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಜಿ. ಹರಿ ಕೃಷ್ಣ ರೆಡ್ಡಿ ನೇತೃತ್ವದಲ್ಲಿ ಪೊಲೀಸರು ಅಲರ್ಟ್ ಆಗಿದ್ದಾರೆ. ಸಂತ್ರಸ್ತೆ ಇನ್ನೂ ಔಪಚಾರಿಕವಾಗಿ ಪೊಲೀಸರನ್ನು ಸಂಪರ್ಕಿಸದಿದ್ದರೂ ಮತ್ತು ಆಕೆಯ ಗುರುತು ಸಿಗದಿದ್ದರೂ, ಮಹಿಳೆಯರ ಸುರಕ್ಷತೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಸ್ವಯಂಪ್ರೇರಿತವಾಗಿ (Suo Motu) ತನಿಖೆಯನ್ನು ಪ್ರಾರಂಭಿಸಿದ್ದಾರೆ.
