ಮಂಗಳೂರು: ವಾಟ್ಸಾಪ್‌ಗೆ ಬಂದ ನಕಲಿ ಆರ್‌ಟಿಒ ಲಿಂಕ್ ಕ್ಲಿಕ್ ಮಾಡಿದ ಯುವಕನಿಗೆ ₹2.24 ಲಕ್ಷ ಚೂನಾ!

ಮಂಗಳೂರು: ವಾಟ್ಸಾಪ್‌ಗೆ ಬಂದ ಆರ್‌ಟಿಒ (RTO) ಚಲನ್ ಹೆಸರಿನ ನಕಲಿ ಎಪಿಕೆ (APK) ಲಿಂಕ್ ಕ್ಲಿಕ್ ಮಾಡಿ, ವೈಯಕ್ತಿಕ ವಿವರ ನಮೂದಿಸಿದ ಯುವಕನೊಬ್ಬರ ಬ್ಯಾಂಕ್ ಖಾತೆಯಿಂದ ಸೈಬರ್ ವಂಚಕರು ಹಂತ ಹಂತವಾಗಿ ₹2,24,800 ಹಣವನ್ನು ಎಗರಿಸಿರುವ ಘಟನೆ ನಗರದಲ್ಲಿ ನಡೆದಿದೆ.

ಏಪ್ರಿಲ್ 24 ರಂದು ಸಂತ್ರಸ್ತ ಯುವಕನಿಗೆ ಅವರ ಸ್ನೇಹಿತನ ಮೊಬೈಲ್ ಸಂಖ್ಯೆಯಿಂದ ವಾಟ್ಸಾಪ್‌ನಲ್ಲಿ ಆರ್‌ಟಿಒ ಚಲನ್ ಎಂದು ಬರೆಯಲಾಗಿದ್ದ ‘ಎಪಿಕೆ ಲಿಂಕ್’ (APK Link) ಬಂದಿತ್ತು. ಅದನ್ನು ನಿಜವೆಂದು ನಂಬಿ ಕ್ಲಿಕ್ ಮಾಡಿದಾಗ ತೆರೆದುಕೊಂಡ ವೆಬ್ ಪೇಜ್‌ನಲ್ಲಿ ಜಿ-ಮೇಲ್, ಮೊಬೈಲ್ ಸಂಖ್ಯೆ ಹಾಗೂ ಸರ್ಕಾರದ ವಿಶಿಷ್ಟ ಗುರುತಿನ ಚೀಟಿ (UIDAI) ಸಂಖ್ಯೆಯನ್ನು ನಮೂದಿಸುವಂತೆ ಕೇಳಲಾಗಿತ್ತು. ಯುವಕ ಆ ವಿವರಗಳನ್ನು ನಮೂದಿಸುತ್ತಿದ್ದಂತೆ ಅವರ ವಾಟ್ಸಾಪ್ ಕೆಲಸ ಮಾಡುವುದನ್ನು ನಿಲ್ಲಿಸಿದೆ. ಅಷ್ಟೇ ಅಲ್ಲದೆ ಮೊಬೈಲ್‌ನ ಸಿಮ್ ಕಾರ್ಡ್ ಹಾಗೂ UIDAI ಸಂಖ್ಯೆ ಕೂಡ ಬ್ಲಾಕ್ ಆಗಿದೆ.
ಇದರಿಂದ ಆತಂಕಗೊಂಡ ಯುವಕ ತಕ್ಷಣ ಸಂಬಂಧಪಟ್ಟ ಕಚೇರಿಗಳಿಗೆ ತೆರಳಿ ಅದೇ ನಂಬರ್‌ನ ಹೊಸ ಸಿಮ್ ಪಡೆದು ಆಕ್ಟಿವೇಟ್ ಮಾಡಿಕೊಂಡಿದ್ದಾರೆ. ಆದರೆ, ಏಪ್ರಿಲ್ 28 ರಂದು ಮಧ್ಯಾಹ್ನ ಅವರ ಮೊಬೈಲ್‌ಗೆ ಬ್ಯಾಂಕ್ ಖಾತೆಯಿಂದ ಸರಣಿ ಹಣ ಕಡಿತವಾದ (Debit) ಮೆಸೇಜ್‌ಗಳು ಬರಲು ಪ್ರಾರಂಭವಾಗಿವೆ.
ತಕ್ಷಣ ಯುವಕ ಬ್ಯಾಂಕ್ ಆಫ್ ಬರೋಡಾ ಶಾಖೆಗೆ ತೆರಳಿ ವಿಚಾರಿಸಿದಾಗ, ವಂಚಕರು ಇವರ ಖಾತೆಯಿಂದ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಖಾತೆಯೊಂದಕ್ಕೆ (6099000100227365) ಮೂರು ಬಾರಿ ಸೇರಿ ₹99,800 ಹಾಗೂ ಆಕ್ಸಿಸ್ ಬ್ಯಾಂಕ್‌ನ ಮತ್ತೊಂದು ಖಾತೆಗೆ (10001291012156) ನಾಲ್ಕು ಬಾರಿ ಸೇರಿ ₹1,25,000 ಸೇರಿದಂತೆ ಒಟ್ಟು ₹2,24,800 ಹಣವನ್ನು ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಸಂತ್ರಸ್ತರು ನೀಡಿದ ದೂರಿನ ಮೇರೆಗೆ ಸೆನ್ (CEN) ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ಬ್ಯಾಂಕ್ ಖಾತೆ ಹಾಗೂ ಟ್ರಾನ್ಸಾಕ್ಷನ್ ಐಡಿಗಳ ಆಧಾರದ ಮೇಲೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.