ಇರಾನ್ ಮೇಲಿನ ಸೈನಿಕ ದಾಳಿ ತಾತ್ಕಾಲಿಕ ಮುಂದೂಡಿಕೆ; ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ!

ವಾಷಿಂಗ್ಟನ್: ಇರಾನ್ ವಿರುದ್ಧ ಇಂದು ಮಂಗಳವಾರ (ಮೇ 19) ನಡೆಸಲು ತೀರ್ಮಾನಿಸಲಾಗಿದ್ದ ಬೃಹತ್ ಸೈನಿಕ ದಾಳಿಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಇರಾನ್ ಜೊತೆಗಿನ ರಾಜತಾಂತ್ರಿಕ ಮಾತುಕತೆಗಳು ಜಾರಿಯಲ್ಲಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಟ್ರಂಪ್ ಪೋಸ್ಟ್: ಸೋಮವಾರ ತಡರಾತ್ರಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಟ್ರಂಪ್, “ಮೇ 19 ರಂದು ಇರಾನ್ ಮೇಲೆ ದಾಳಿ ನಡೆಸಲು ಯೋಜನೆ ರೂಪಿಸಲಾಗಿತ್ತು. ಆದರೆ, ಕತಾರ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (UAE) ನಾಯಕರ ವಿಶೇಷ ಮನವಿಯ ಮೇರೆಗೆ ಈ ಯೋಜಿತ ದಾಳಿಯನ್ನು ಸದ್ಯಕ್ಕೆ ಕೈಬಿಡಲಾಗಿದೆ” ಎಂದು ತಿಳಿಸಿದ್ದಾರೆ. ದಾಳಿಯ ನಿಖರ ಸ್ವರೂಪದ ಬಗ್ಗೆ ಅವರು ಹೆಚ್ಚಿನ ವಿವರ ನೀಡಿಲ್ಲ.
‘ಕ್ಷಣಾರ್ಧದಲ್ಲೇ ಧ್ವಂಸ’ – ಸೇನೆಗೆ ಕಟ್ಟುನಿಟ್ಟಿನ ಆದೇಶ: ದಾಳಿ ಮುಂದೂಡಿದ್ದರೂ ಇರಾನ್‌ಗೆ ಕಠಿಣ ಸಂದೇಶ ರವಾನಿಸಿರುವ ಟ್ರಂಪ್, “ಇರಾನ್‌ಗೆ ಒಪ್ಪಂದಕ್ಕೆ ಬರಲು ಇನ್ನು ಹೆಚ್ಚು ಸಮಯವಿಲ್ಲ. ಒಂದು ವೇಳೆ ನಿಗದಿತ ಅವಧಿಯಲ್ಲಿ ಸ್ವೀಕಾರಾರ್ಹ ಒಪ್ಪಂದ ಸಾಧ್ಯವಾಗದಿದ್ದರೆ, ಕ್ಷಣಾರ್ಧದಲ್ಲೇ ಇರಾನ್ ಮೇಲೆ ಸಂಪೂರ್ಣ ಮತ್ತು ಭಾರಿ ಮಟ್ಟದ ಮಿಲಿಟರಿ ದಾಳಿ ನಡೆಸಲು ಸನ್ನದ್ಧರಾಗಿರಿ” ಎಂದು ಅಮೆರಿಕದ ಸಶಸ್ತ್ರ ಪಡೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಕಳೆದ ಏಪ್ರಿಲ್ ಮಧ್ಯಭಾಗದಲ್ಲಿ ಜಾರಿಗೆ ಬಂದಿದ್ದ ಯುದ್ಧ ವಿರಾಮವು ಈಗ ಅಸ್ಥಿರಗೊಂಡಿದ್ದು, ಇರಾನ್ ಬೇಗ ನಿರ್ಧಾರ ಕೈಗೊಳ್ಳದಿದ್ದರೆ ಆ ದೇಶದಲ್ಲಿ ಏನೂ ಉಳಿಯುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.