ವಿಜಯಪುರ: ಮನೆಯ ಮೇಲ್ಛಾವಣಿ ಕುಸಿದು ಒಂದೇ ಕುಟುಂಬದ ನಾಲ್ವರು ದುರ್ಮರ*ಣ

ವಿಜಯಪುರ : ಮೊರಗಟಿ ಗ್ರಾಮದಲ್ಲಿ ಗುರುವಾರ ರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ಮನೆಯ ಮೇಲ್ಛಾವಣಿ ಕುಸಿದು ಬಿದ್ದು, ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಸಂಭವಿಸಿದೆ.

ಗ್ರಾಮದ ಗುರುನಾಥ ಬಡಿಗೇರ (35), ಅವರ ಪತ್ನಿ ಜ್ಯೋತಿ ಬಡಿಗೇರ (28), ಮಕ್ಕಳಾದ ಕಾಳಮ್ಮ ಬಡಿಗೇರ (13) ಮತ್ತು ಕೀರ್ತಿ ಬಡಿಗೇರ (9) ಮೃತಪಟ್ಟ ದುರ್ದೈವಿಗಳು. ಗುರುನಾಥ ಅವರು ತಮ್ಮ ಸ್ವಂತ ಮನೆಯ ದುರಸ್ತಿ ಕೆಲಸ ನಡೆಯುತ್ತಿದ್ದ ಕಾರಣ, ಹಳೆಯ ಮನೆಯೊಂದರಲ್ಲಿ ಬಾಡಿಗೆಗೆ ವಾಸವಿದ್ದರು. ಗುರುವಾರ ರಾತ್ರಿ ಸುರಿದ ಮಳೆಗೆ ಹಳೆಯ ಮನೆಯ ಮೇಲ್ಛಾವಣಿ ಏಕಾಏಕಿ ಕುಸಿದು ಬಿದ್ದಿದೆ. ಪರಿಣಾಮ ಮನೆಯೊಳಗೆ ಮಲಗಿದ್ದ ನಾಲ್ವರು ಅವಶೇಷಗಳಡಿ ಸಿಲುಕಿ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಸಿಂದಗಿ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿದ್ದು, ಅವಶೇಷಗಳ ಅಡಿಯಲ್ಲಿದ್ದ ಶವಗಳನ್ನು ಹೊರತೆಗೆಯುವ ಕಾರ್ಯಾಚರಣೆ ನಡೆಸಿದ್ದಾರೆ. ಇಡೀ ಕುಟುಂಬವನ್ನೇ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದೆ.