ಮುಲಾಯಂ ಸಿಂಗ್ ಪುತ್ರ, ಅಖಿಲೇಶ್ ಯಾದವ್ ಸಹೋದರ ಪ್ರತೀಕ್ ಯಾದವ್ ನಿಧನ

ಲಖನೌ: ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರ ಕಿರಿಯ ಪುತ್ರ ಹಾಗೂ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರ ಮಲಸಹೋದರ ಪ್ರತೀಕ್ ಯಾದವ್ ಬುಧವಾರ ಇಲ್ಲಿ ನಿಧನರಾದರು ಎಂದು ಮೂಲಗಳು ತಿಳಿಸಿವೆ. ಅವರಿಗೆ 38 ವರ್ಷ ವಯಸ್ಸಾಗಿತ್ತು. ಅವರು ಬಿಜೆಪಿ ನಾಯಕಿ ಅಪರ್ಣಾ ಯಾದವ್ ಅವರ ಪತಿ.
ಮೂಲಗಳ ಪ್ರಕಾರ, ಬುಧವಾರ ಬೆಳಿಗ್ಗೆ ಸುಮಾರು 6 ಗಂಟೆಗೆ ಪ್ರತೀಕ್ ಯಾದವ್ ಅವರನ್ನು ಚಿಕಿತ್ಸೆಗಾಗಿ ಲಕ್ಕೋ ನ ಸಿವಿಲ್ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಆಸ್ಪತ್ರೆಗೆ ತಲುಪುವಷ್ಟರಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.

ಪ್ರತೀಕ್ ಯಾದವ್ ಕೆಲಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಕೆಲವು ವಾರಗಳ ಹಿಂದೆ ಅವರನ್ನು ಲಕ್ಕೋ ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ವೇಳೆ ಅಖಿಲೇಶ್ ಯಾದವ್ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. ಬಳಿಕ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡುಬಂದ ಹಿನ್ನೆಲೆಯಲ್ಲಿ ಮನೆಗೆ ಕರೆತರಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಸಮಾಜವಾದಿ ಪಕ್ಷವು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಸಂತಾಪ ಸೂಚಿಸಿ, “ಪ್ರತೀಕ್ ಯಾದವ್ ಅವರ ನಿಧನ ತೀವ್ರ ದುಃಖಕರ ಸಂಗತಿ. ದೇವರು ಅಗಲಿದ ಆತ್ಮಕ್ಕೆ ಶಾಂತಿ ನೀಡಲಿ” ಎಂದು ಹೇಳಿದೆ.
ದೇಶದ ಪ್ರಮುಖ ರಾಜಕೀಯ ಕುಟುಂಬಗಳಲ್ಲಿ ಒಂದಕ್ಕೆ ಸೇರಿದವರಾಗಿದ್ದರೂ, ಪ್ರತೀಕ್ ಯಾದವ್ ಸಕ್ರಿಯ ರಾಜಕೀಯದಿಂದ ದೂರವೇ ಉಳಿದಿದ್ದರು. ಅವರು ಯುನೈಟೆಡ್ ಕಿಂಗ್‌ಡಮ್ ನ ಲೀಡ್ಸ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ರಿಯಲ್ ಎಸ್ಟೇಟ್ ಮತ್ತು ಫಿಟೈಸ್ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದರು.
ಲಕ್ಕೋ ನಲ್ಲಿ ‘ದಿ ಫಿಟೈಸ್ ಪ್ಲಾನೆಟ್ ಹೆಸರಿನ ಜಿಮ್ ನಡೆಸುತ್ತಿದ್ದ ಅವರು, ಫಿಟೈಸ್ ಉದ್ಯಮದಲ್ಲಿ ಸಕ್ರಿಯರಾಗಿದ್ದರು. ಜೊತೆಗೆ ಬೀದಿ ನಾಯಿಗಳ ರಕ್ಷಣೆ, ಚಿಕಿತ್ಸೆ ಆಹಾರ ಮತ್ತು ಆರೈಕೆಗೆ ಕೆಲಸ ಮಾಡುತ್ತಿದ್ದ ‘ಜೀವ್ ಆಶ್ರಯ’ ಸಂಸ್ಥೆಯ ಮೂಲಕ ಪ್ರಾಣಿ ಕಲ್ಯಾಣ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಂಡಿದ್ದರು.
ಕೆಲವು ತಿಂಗಳ ಹಿಂದೆ ಅಪರ್ಣಾ ಯಾದವ್ ಅವರೊಂದಿಗಿನ ಭಿನ್ನಾಭಿಪ್ರಾಯಗಳ ಕುರಿತ ವರದಿಗಳು ಹರಿದಾಡಿದ್ದವು. ಬಳಿಕ ಕುಟುಂಬ ಸದಸ್ಯರು ಒಟ್ಟಿಗೆ ರಜೆ ಕಳೆದ ಚಿತ್ರಗಳನ್ನು ಪ್ರತೀಕ್ ಯಾದವ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.
ಅಪರ್ಣಾ ಯಾದವ್ ಪ್ರಸ್ತುತ ಉತ್ತರ ಪ್ರದೇಶ ಮಹಿಳಾ ಆಯೋಗದ ಉಪಾಧ್ಯಕ್ಷೆಯಾಗಿದ್ದು, ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದಾರೆ.
ಬಿಗಿ ಭದ್ರತೆಯಲ್ಲಿ ಮರಣೋತ್ತರ ಪರೀಕ್ಷೆ :
ಲಕ್ಕೋ ನ ಕೆಜಿಎಂಯು ಶವಾಗಾರದಲ್ಲಿ ಬಿಗಿ ಭದ್ರತೆಯ ನಡುವೆ ಪ್ರತೀಕ್ ಯಾದವ್ ಅವರ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. ಮುಖ್ಯ ವೈದ್ಯಾಧಿಕಾರಿ (ಸಿಎಂಒ) ಮೇಲ್ವಿಚಾರಣೆಯಲ್ಲಿ ಈ ಪ್ರಕ್ರಿಯೆ ನಡೆಯುತ್ತಿದೆ.
ಮರಣೋತ್ತರ ಪರೀಕ್ಷೆಯ ಸಂಪೂರ್ಣ ಪ್ರಕ್ರಿಯೆಯನ್ನು ವೀಡಿಯೊಗ್ರಾಫ್ ಮಾಡಲಾಗುತ್ತಿದ್ದು, ದಾಖಲಾತಿ ಪ್ರಕ್ರಿಯೆಯ ಭಾಗವಾಗಿ ಎಲ್ಲ ಹಂತಗಳನ್ನು ಸಂಗ್ರಹಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ನಡುವೆ, ಅಪರ್ಣಾ ಯಾದವ್ ಅವರ ಸಹೋದರ ಅಮನ್ ಬಿಸ್ತ್ ಸೇರಿದಂತೆ ಕುಟುಂಬ ಸದಸ್ಯರು ಶವಾಗಾರಕ್ಕೆ ಆಗಮಿಸಿದ್ದಾರೆ. ಶವಾಗಾರದ ಸುತ್ತಮುತ್ತ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ವ್ಯಾಪಕ ಭದ್ರತಾ ಕ್ರಮ ಕೈಗೊಳ್ಳಲಾಗಿದೆ.