ಬಾವಿಯೊಳಗೆ ಸಿಲುಕಿದ್ದ ಮೂವರ ರಕ್ಷಣೆ; ಅಗ್ನಿಶಾಮಕ ದಳದ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

ಕಾರ್ಕಳ : ಬಾವಿಯ ಮಣ್ಣು ತೆಗೆಯಲು ಹೋಗಿ ಅಪಾಯಕ್ಕೆ ಸಿಲುಕಿದ್ದ ಮೂವರನ್ನು ಕಾರ್ಕಳ ಅಗ್ನಿಶಾಮಕ ದಳದ ಸಿಬ್ಬಂದಿ ಯಶಸ್ವಿಯಾಗಿ ರಕ್ಷಿಸಿದ ಘಟನೆ ಕುಕ್ಕುಂದೂರು ಅಶ್ವಥಪುರದಲ್ಲಿ ನಡೆದಿದೆ. ಮೇ 10ರಂದು ನಡೆದ ಈ ಘಟನೆಯಲ್ಲಿ ರಾಜೇಶ್ (42), ಪವನ್ (29) ಹಾಗೂ ಗೋಪಾಲ್ ನಾಯ್ಕ್ (52) ರಕ್ಷಿಸಲ್ಪಟ್ಟವರು.

ಬಾವಿಯ ಮಣ್ಣು ತೆಗೆಯಲೆಂದು ಇಳಿದಿದ್ದ ರಾಜೇಶ್ ಅವರು ಮೇಲಕ್ಕೆ ಬರುವಾಗ ಅಕಸ್ಮಿಕವಾಗಿ ಬಿದ್ದು ಗಾಯಗೊಂಡಿದ್ದರು. ಅವರನ್ನು ರಕ್ಷಿಸಲು ಮುಂದಾದ ಪವನ್ ಮತ್ತು ಗೋಪಾಲ್ ನಾಯ್ಕ್ ಕೂಡ ಬಾವಿಯಿಂದ ಮೇಲೆ ಬರಲಾಗದೆ ಒಳಗೆ ಸಿಲುಕಿಕೊಂಡಿದ್ದರು. ಮಾಹಿತಿ ಪಡೆದ ತಕ್ಷಣ ಸ್ಥಳಕ್ಕೆ ಧಾವಿಸಿದ ಕಾರ್ಕಳ ಅಗ್ನಿಶಾಮಕ ಠಾಣಾಧಿಕಾರಿ ಅಲ್ಬರ್ಟ್ ಮೋನಿಸ್ ನೇತೃತ್ವದ ತಂಡ, ಹರಸಾಹಸ ಪಟ್ಟು ಮೂವರನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿದ್ದಾರೆ. ಗಾಯಗೊಂಡ ರಾಜೇಶ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಗ್ನಿಶಾಮಕ ದಳದ ಈ ತ್ವರಿತ ಕಾರ್ಯಾಚರಣೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.