ಕ್ರೂಸ್ ಹಡಗಿನಲ್ಲಿ ಹಾಂಟ ವೈರಸ್ ಅಟ್ಟಹಾಸ: ಮೂವರು ಸಾವು, ಐವರಲ್ಲಿ ಸೋಂಕು ದೃಢ

ಜಿನೀವಾ: ಅಟ್ಲಾಂಟಿಕ್ ಸಾಗರದಲ್ಲಿ ಸಂಚರಿಸುತ್ತಿರುವ ಡಚ್ ಧ್ವಜದ ಕ್ರೂಸ್ ಹಡಗು ಎಂವಿ ಹೊಂಡಿಯಸ್‌ನಲ್ಲಿ ಹಾಂಟ ವೈರಸ್‌ನ ಐದು ಪ್ರಕರಣಗಳು ದೃಢಪಟ್ಟಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಗುರುವಾರ ತಿಳಿಸಿದೆ. ಇನ್ನೂ ಮೂರು ಪ್ರಕರಣಗಳು ಶಂಕಿತವಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದೆ.
ಈವರೆಗೆ ಒಟ್ಟು ಎಂಟು ಪ್ರಕರಣಗಳು ವರದಿಯಾಗಿದ್ದು, ಅವುಗಳಲ್ಲಿ ಐದು ಹಾಂಟ ವೈರಸ್ ಎಂದು ದೃಢಪಟ್ಟಿವೆ. ಉಳಿದ ಮೂರು ಪ್ರಕರಣಗಳ ಪರೀಕ್ಷಾ ವರದಿ ನಿರೀಕ್ಷಿಸಲಾಗಿದೆ. ಸೋಂಕಿನಿಂದ ಮೂವರು ಮೃತಪಟ್ಟಿದ್ದಾರೆ.

ಆದರೆ, ಇದು ಕೋವಿಡ್-19 ಮಾದರಿಯ ಹೊಸ ಸಾಂಕ್ರಾಮಿಕ ರೋಗದ ಆರಂಭವಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟಪಡಿಸಿದೆ. “ಎಂವಿ ಹೊಂಡಿಯಸ್‌ನಲ್ಲಿನ ಹಾಂಟ ವೈರಸ್ ಪ್ರಕರಣಗಳನ್ನು ಮತ್ತೊಂದು ಜಾಗತಿಕ ಸಾಂಕ್ರಾಮಿಕದ ಆರಂಭಎಂದು ಭಾವಿಸುವ ಅಗತ್ಯವಿಲ್ಲ” ಎಂದು ಸಂಸ್ಥೆ ತಿಳಿಸಿದೆ.
“ಈ ಪ್ರಕರಣಗಳಲ್ಲಿ ಪತ್ತೆಯಾಗಿರುವ ವೈರಸ್ ಪ್ರಭೇದವು ಲ್ಯಾಟಿನ್ ಅಮೆರಿಕದಲ್ಲಿ ಕಂಡುಬರುವ ಆಂಡಿಸ್ ವೈರಸ್ ಆಗಿದೆ” ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಟ್ರೋಸ್ ಅಧಾನೋಮ್ ಫೆಬ್ರೆಯಸ್ ಹೇಳಿದ್ದಾರೆ.
“ಪ್ರಸ್ತುತ ಹಡಗಿನಲ್ಲಿ ಇರುವ ಉಳಿದ ಪ್ರಯಾಣಿಕರು ಅಥವಾ ಸಿಬ್ಬಂದಿಯಲ್ಲಿ ಯಾರಿಗೂ ರೋಗಲಕ್ಷಣಗಳು ಕಂಡುಬಂದಿಲ್ಲ. ಆದರೆ, ಮಾನವನಿಂದ ಮಾನವನಿಗೆ ಹರಡುವ ಏಕೈಕ ಹಾಂಟ ವೈರಸ್ ತಳಿಯಾದ ಆಂಡಿಸ್ ವೈರಸ್‌ನ ಕಾವು ಕಾಲಾವಧಿ ಆರು ವಾರಗಳವರೆಗೆ ಇರಬಹುದು. ಹೀಗಾಗಿ ಇನ್ನಷ್ಟು ಪ್ರಕರಣಗಳು ವರದಿಯಾಗುವ ಸಾಧ್ಯತೆಯನ್ನು ತಳ್ಳಿ ಹಾಕಲಾಗುವುದಿಲ್ಲ” ಎಂದು ಅವರು ಹೇಳಿದ್ದಾರೆ.
ಎಂವಿ ಹೊಂಡಿಯಸ್ ಹಡಗು ಎಪ್ರಿಲ್ 1ರಂದು ಅರ್ಜೆಂಟಿನಾದ ದಕ್ಷಿಣ ತುದಿಯ ಉಶುವಾಯದಿಂದ ಪಶ್ಚಿಮ ಆಫ್ರಿಕಾದ ಕೇಪ್ ವರ್ಡೆ ಕಡೆಗೆ ಪ್ರಯಾಣ ಆರಂಭಿಸಿತ್ತು. ಮೇ 6ರಂದು ಕೇಪ್ ವರ್ಡೆಯಿಂದ ಉತ್ತರದ ಟೆನೆರೈಫ್ ಕಡೆಗೆ ಹೊರಟಿದ್ದು, ಅಲ್ಲಿಂದ ಪ್ರಯಾಣಿಕರನ್ನು ಅವರ ಸ್ವದೇಶಗಳಿಗೆ ಕಳುಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿಗಳು ಹಡಗಿನ ಕ್ಯಾಪ್ಟನ್ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಮೇ 7ರಿಂದ ಹಡಗು ಮತ್ತೆ ಸಂಚಾರ ಆರಂಭಿಸಿದ ಬಳಿಕ ಪ್ರಯಾಣಿಕರಲ್ಲಿ ಆತಂಕ ಕಡಿಮೆಯಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಹಾಂಟ ವೈರಸ್ ಸಾಮಾನ್ಯವಾಗಿ ಸೋಂಕಿತ ಇಲಿಗಳ ಮೂತ್ರ, ಮಲ ಮತ್ತು ಲಾಲಾರಸದ ಮೂಲಕ ಹರಡುತ್ತದೆ. ಆಂಡಿಸ್ ವೈರಸ್ ತಳಿ ಮಾತ್ರ ಮಾನವನಿಂದ ಮಾನವನಿಗೆ ಹರಡುವ ಸಾಮರ್ಥ್ಯ ಹೊಂದಿರುವುದಾಗಿ ವೈದ್ಯಕೀಯ ದಾಖಲೆಗಳು ಸೂಚಿಸುತ್ತವೆ.
ಮೊದಲ ಪ್ರಕರಣಗಳಾದ ಡಚ್ ದಂಪತಿ ಹಡಗೇರಿಸುವ ಮೊದಲು ಅರ್ಜೆಂಟಿನಾ, ಚಿಲಿ ಮತ್ತು ಉರುಗೈಯಲ್ಲಿ ಪಕ್ಷಿ ವೀಕ್ಷಣಾ ಪ್ರವಾಸ ಕೈಗೊಂಡಿದ್ದರು. ಆಂಡಿಸ್ ವೈರಸ್ ಹೊತ್ತೊಯ್ಯುವ ಇಲಿ ಪ್ರಭೇದಗಳು ಕಂಡುಬರುವ ಪ್ರದೇಶಗಳಿಗೂ ಅವರು ಭೇಟಿ ನೀಡಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ದಂಪತಿಯಿಬ್ಬರೂ ಮೃತಪಟ್ಟಿದ್ದಾರೆ.
ಈ ಪ್ರಕರಣದ ಕುರಿತು ಅರ್ಜೆಂಟಿನಾ ಸರ್ಕಾರದ ಜೊತೆ ವಿಶ್ವ ಆರೋಗ್ಯ ಸಂಸ್ಥೆ ತನಿಖೆ ನಡೆಸುತ್ತಿದೆ. ಜೊತೆಗೆ ಅರ್ಜೆಂಟಿನಾದಿಂದ ಐದು ದೇಶಗಳ ಪ್ರಯೋಗಾಲಯಗಳಿಗೆ 2,500 ರೋಗನಿರ್ಣಯ ಕಿಟ್ ಗಳನ್ನು ಕಳುಹಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ.
ಕೋವಿಡ್-19 ಅವಧಿಯಲ್ಲಿ ಸಾಂಕ್ರಾಮಿಕ ಸಿದ್ಧತೆ ಮತ್ತು ತಡೆಗಟ್ಟುವಿಕೆ ಕಾರ್ಯಗಳಲ್ಲಿ ಪ್ರಮುಖ ಪಾತ್ರವಹಿಸಿದ್ದ ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಕಿ ಮಾರಿಯಾ ವ್ಯಾನ್ ಕೆರ್ಖೋವ್, “ಇದು ಕೋವಿಡ್ ಅಲ್ಲ. ಇದು ಇನ್ನೂಯೆನ್ನಾ ಕೂಡ ಅಲ್ಲ. ಹರಡುವಿಕೆಯ ಸ್ವರೂಪ ಸಂಪೂರ್ಣ ಭಿನ್ನವಾಗಿದೆ” ಎಂದು ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ, ಸ್ಪಿಟ್ಟರ್‌ಲ್ಯಾಂಡ್ ಮತ್ತು ಡಾಕರ್‌ನ ಪ್ರಯೋಗಾಲಯಗಳಿಂದ ವೈರಸ್‌ನ ಪೂರ್ಣ ಜಿನೋಮ್ ಅನುಕ್ರಮಣಿಕೆಯ ವರದಿಗಾಗಿ ಕಾಯಲಾಗುತ್ತಿದೆ. ದಕ್ಷಿಣ ಆಫ್ರಿಕಾದಲ್ಲಿ ನಿಗಾದಲ್ಲಿರುವ ವ್ಯಕ್ತಿಯ ಆರೋಗ್ಯ ಸ್ಥಿರವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.