ಹೆಲಿಕಾಪ್ಟರ್‌ನಿಂದ ಹಡಗು ನಿಗ್ರಹ ಕ್ಷಿಪಣಿ ಉಡಾವಣೆ ಯಶಸ್ವಿ; ಡಿಆರ್‌ಡಿಒ ಸಾಧನೆ

ಹೊಸದಿಲ್ಲಿ: ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಹಾಗೂ ನೌಕಾಪಡೆ ಜಂಟಿಯಾಗಿ ಬಂಗಾಳ ಕೊಲ್ಲಿಯ ಒಡಿಶಾ ಕರಾವಳಿಯಲ್ಲಿ ಹೆಲಿಕಾಪ್ಟರ್ ಪ್ಲಾಟ್‌ಫಾರ್ಮ್‌ನಿಂದ ಹಡಗಿನ ಮೇಲೆ ಕ್ಷಿಪಣಿ ದಾಳಿ ನಡೆಸುವ ಪರೀಕ್ಷಾರ್ಥ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರೈಸಿವೆ. ಇದರೊಂದಿಗೆ ಭಾರತೀಯ ನೌಕಾಪಡೆಯ ಹಡಗು ನಿಗ್ರಹ ಯುದ್ಧ ಸಾಮರ್ಥ್ಯ ಮತ್ತಷ್ಟು ಬಲಗೊಂಡಂತಾಗಿದೆ.
ಈ ಪರೀಕ್ಷಾರ್ಥ ಪ್ರಯೋಗದಲ್ಲಿ ಅಲ್ಪ ಅವಧಿಯಲ್ಲಿ ಒಂದೇ ಹೆಲಿಕಾಪ್ಟರ್‌ನಿಂದ ಎರಡು ಕ್ಷಿಪಣಿಗಳನ್ನು ಉಡಾಯಿಸಲಾಯಿತು. ಇದು ಅತ್ಯಾಧುನಿಕ ವಾಯುವಿನಿಂದ ಉಡಾಯಿಸಲಾಗುವ ಹಡಗು ನಿಗ್ರಹ ಕ್ಷಿಪಣಿ ವ್ಯವಸ್ಥೆಯ ಪ್ರಥಮ ಪ್ರಯೋಗವಾಗಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.

ಎನ್‌ಎಎಸ್‌ಎಂ-ಎಸ್‌ಆರ್ (ನೌಕಾಪಡೆಯ ಹಡಗು ನಿಗ್ರಹ ಕ್ಷಿಪಣಿ – ಅಲ್ಪದೂರ ಸಾಮರ್ಥ್ಯ) ಭಾರತದ ಪ್ರಪ್ರಥಮ ದೇಶೀ ನಿರ್ಮಿತ ವಾಯುವಿನಿಂದ ಉಡಾಯಿಸಲಾಗುವ ಹಡಗು ನಿಗ್ರಹ ಕ್ಷಿಪಣಿಯಾಗಿದೆ. ಇದು ಅತ್ಯಂತ ಕೆಳಮಟ್ಟದಲ್ಲಿ ಸಮುದ್ರದ ಮೇಲೆ ಚಲಿಸುತ್ತದೆ ಹಾಗೂ 55 ಕಿಲೋಮೀಟರ್ ದೂರಸಾಮರ್ಥ್ಯ ಹೊಂದಿದೆ. ಇದು ಎಲ್ಲ ಹವಾಮಾನ ವ್ಯವಸ್ಥೆಯಲ್ಲೂ ಯಾವುದೇ ಸಮಯದಲ್ಲಿ ‘ಫೈರ್-ಅಂಡ್-ಫರ್ಗೆಟ್’ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿದೆ.
ದೂರಸಾಮರ್ಥ್ಯವನ್ನು ಟ್ಯಾಕ್ ಮಾಡುವ ಸಾಧನಗಳಾದ ರಾಡಾರ್, ಎಲೆಕ್ಟೋ-ಆಪ್ಟಿಕಲ್ ಸಿಸ್ಟಮ್ ಮತ್ತು ಟೆಲೆಮೆಟ್ರಿ ಸೌಲಭ್ಯಗಳನ್ನು ಬಳಸಿಕೊಂಡು ಚಂಡೀಪುರದ ಸಮಗ್ರ ಪರೀಕ್ಷಾ ಕ್ಷೇತ್ರ (ಐಟಿಆರ್‌ದಲ್ಲಿ ದತ್ತಾಂಶಗಳನ್ನು ಸೆರೆಹಿಡಿಯಲಾಗಿದ್ದು, ಕ್ಷಿಪಣಿಯ ಎಲ್ಲ ಮಾನದಂಡಗಳಿಗೆ ಅನುಗುಣವಾಗಿ ಪರೀಕ್ಷೆ ನಡೆದಿದೆ ಎಂದು ಪ್ರಕಟಣೆ ಹೇಳಿದೆ.
ಇದರ ಉಡಾವಣಾ ಸಾಮರ್ಥ್ಯವನ್ನು ಈ ಪರೀಕ್ಷಾರ್ಥ ಕಾರ್ಯಾಚರಣೆ ನಿರೂಪಿಸಿದ್ದಲ್ಲದೇ, ಜಲಮಟ್ಟದಲ್ಲಿ ದಾಳಿ ಮಾಡುವ ಸಾಮರ್ಥ್ಯವನ್ನು ದೃಢಪಡಿಸಿದೆ ಎಂದು ಹೇಳಲಾಗಿದೆ.