ಇರಾನ್ ಸಂಪೂರ್ಣ ಕುಸಿತದ ಹಾದಿಯಲ್ಲಿದೆ: ಹಾರ್ಮುಜ್ ಜಲಸಂಧಿ ತೆರೆಯಲು ಟೆಹ್ರಾನ್ ಮೊರೆ – ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಇರಾನ್ ದೇಶವು ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಸಂಪೂರ್ಣವಾಗಿ ಕುಸಿಯುವ ಸ್ಥಿತಿಯಲ್ಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ತೀವ್ರ ನಾಯಕತ್ವದ ಬಿಕ್ಕಟ್ಟು ಎದುರಿಸುತ್ತಿರುವ ಇರಾನ್, ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾದ ‘ಹಾರ್ಮುಜ್ ಜಲಸಂಧಿ’ಯನ್ನು ಪುನಃ ತೆರೆಯಲು ಅಮೆರಿಕದ ಮುಂದೆ ಬೇಡಿಕೊಂಡಿದೆ ಎಂದು ಅವರು ತಿಳಿಸಿದ್ದಾರೆ.

ಟ್ರಂಪ್ ವಾಗ್ದಾಳಿ: ತಮ್ಮ ‘ಟ್ರೂತ್ ಸೋಶಿಯಲ್’ ಜಾಲತಾಣದಲ್ಲಿ ಈ ಕುರಿತು ಬರೆದುಕೊಂಡಿರುವ ಟ್ರಂಪ್, “ಇರಾನ್ ನಾಯಕತ್ವದ ಬಿಕ್ಕಟ್ಟಿನಲ್ಲಿದೆ. ಪರಿಸ್ಥಿತಿ ಹದಗೆಡುತ್ತಿರುವುದರಿಂದ ಜಲಸಂಧಿಯನ್ನು ತೆರೆಯಲು ಅವರು ನಮಗೆ ಸಂದೇಶ ರವಾನಿಸಿದ್ದಾರೆ. ಆದರೆ ಅವರ ಪ್ರಸ್ತಾಪವನ್ನು ಒಪ್ಪಿಕೊಳ್ಳುವ ಸಾಧ್ಯತೆ ಕಡಿಮೆ,” ಎಂದು ಸುಳಿವು ನೀಡಿದ್ದಾರೆ.
ಜಾಗತಿಕ ತೈಲ ಮಾರುಕಟ್ಟೆಗೆ ಆಘಾತ: ಕಳೆದ ಎರಡು ತಿಂಗಳಿನಿಂದ ಇರಾನ್ ಹಾರ್ಮುಜ್ ಜಲಸಂಧಿಯನ್ನು ನಿರ್ಬಂಧಿಸಿದ್ದು, ಇದರಿಂದಾಗಿ ವಿಶ್ವದ ತೈಲ ಮತ್ತು ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಜಾಗತಿಕ ಆರ್ಥಿಕತೆ ತಲ್ಲಣಗೊಂಡಿದೆ. ಇಸ್ರೇಲ್ ಮತ್ತು ಅಮೆರಿಕದ ದಾಳಿಗೆ ಪ್ರತಿಯಾಗಿ ಇರಾನ್ ಈ ಕ್ರಮ ಕೈಗೊಂಡಿತ್ತು.
ಇರಾನ್ನ ಪ್ರಸ್ತಾಪವೇನು?: ತನ್ನ ಬಂದರುಗಳ ಮೇಲಿನ ದಿಗ್ಬಂಧನ ತೆರವುಗೊಳಿಸಿದರೆ ಮತ್ತು ಮಧ್ಯಪ್ರಾಚ್ಯ ಯುದ್ಧ ನಿಲ್ಲಿಸಿದರೆ, ಜಲಸಂಧಿಯನ್ನು ಮುಕ್ತಗೊಳಿಸುವುದಾಗಿ ಇರಾನ್ ಹೇಳಿದೆ. ಅಲ್ಲದೆ, ಪರಮಾಣು ಕಾರ್ಯಕ್ರಮದ ಬಗ್ಗೆ ಚರ್ಚೆ ನಡೆಸಲು ಸಿದ್ಧವಿರುವುದಾಗಿ ತಿಳಿಸಿದೆ. ಆದರೆ ಟ್ರಂಪ್ ಈ ಒಪ್ಪಂದಕ್ಕೆ ಸುಲಭವಾಗಿ ಮಣಿಯುವಂತೆ ಕಾಣುತ್ತಿಲ್ಲ ಎಂದು ರಾಜತಾಂತ್ರಿಕ ಮೂಲಗಳು ತಿಳಿಸಿವೆ.