ಮುಂಬೈ: ವಿಷಾಹಾರ ಸೇವನೆಗೆ ಒಂದೇ ಕುಟುಂಬದ ನಾಲ್ವರು ಬಲಿ; ಬಿರಿಯಾನಿ ಮತ್ತು ಕಲ್ಲಂಗಡಿ ಸೇವಿಸಿದ ಬೆನ್ನಲ್ಲೇ ದುರಂತ

ಮುಂಬೈ: ನಗರದ ಪೈಧೋನಿ ಪ್ರದೇಶದಲ್ಲಿ ವಿಷಾಹಾರ ಸೇವನೆಯಿಂದ ಒಂದೇ ಕುಟುಂಬದ ನಾಲ್ವರು ಸದಸ್ಯರು ಮೃತಪಟ್ಟಿದ್ದಾರೆ. ಮೃತರನ್ನು ಅಬ್ದುಲ್ಲಾ ಡೋಕಾಡಿಯಾ (40), ಅವರ ಪತ್ನಿ ನಸ್ರೀನ್ ಡೋಕಾಡಿಯಾ (35), ಮತ್ತು ಅವರ ಪುತ್ರಿಯರಾದ ಆಯಿಶಾ (16) ಹಾಗೂ ಜೈನಾಬ್ (13) ಎಂದು ಗುರುತಿಸಲಾಗಿದೆ.

ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಏಪ್ರಿಲ್ 25ರ ಶನಿವಾರ ರಾತ್ರಿ ಸುಮಾರು 10:30ಕ್ಕೆ ಸಂಬಂಧಿಕರು ಸೇರಿದಂತೆ ಒಟ್ಟು ಒಂಬತ್ತು ಮಂದಿ ಒಟ್ಟಾಗಿ ಬಿರಿಯಾನಿ ಊಟ ಮಾಡಿದ್ದರು. ಊಟದ ನಂತರ ಸಂಬಂಧಿಕರು ತಮ್ಮ ಮನೆಗಳಿಗೆ ಮರಳಿದ್ದರು. ಆದರೆ ಅಬ್ದುಲ್ಲಾ ಅವರ ಕುಟುಂಬದ ನಾಲ್ವರು ಸದಸ್ಯರು ತಡರಾತ್ರಿ 1:00 ರಿಂದ 1:30 ರ ಸುಮಾರಿಗೆ ಕಲ್ಲಂಗಡಿ ಹಣ್ಣನ್ನು ಸೇವಿಸಿದ್ದರು ಎಂದು ತಿಳಿದುಬಂದಿದೆ.
ಏಪ್ರಿಲ್ 26ರ ಭಾನುವಾರ ಮುಂಜಾನೆ 5:30 ರ ಸುಮಾರಿಗೆ ನಾಲ್ವರಿಗೂ ತೀವ್ರ ವಾಂತಿ ಮತ್ತು ಭೇದಿ ಆರಂಭವಾಗಿದೆ. ಕೂಡಲೇ ಅವರನ್ನು ಕುಟುಂಬ ವೈದ್ಯರ ಬಳಿ ಕರೆದೊಯ್ಯಲಾಗಿತ್ತು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜೆಜೆ (JJ) ಆಸ್ಪತ್ರೆಗೆ ದಾಖಲಿಸಲಾಯಿತು. ಭಾನುವಾರ ಬೆಳಿಗ್ಗೆ 10:15ಕ್ಕೆ ಕಿರಿಯ ಪುತ್ರಿ ಜೈನಾಬ್ ಮೃತಪಟ್ಟಳು. ಅದೇ ದಿನ ರಾತ್ರಿ 10:30ಕ್ಕೆ ತಂದೆ ಅಬ್ದುಲ್ಲಾ ಕೊನೆಯುಸಿರೆಳೆದರು. ಚಿಕಿತ್ಸೆ ಫಲಕಾರಿಯಾಗದೆ ಪತ್ನಿ ನಸ್ರೀನ್ ಮತ್ತು ಹಿರಿಯ ಪುತ್ರಿ ಆಯಿಶಾ ಕೂಡ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಈ ಬಗ್ಗೆ ಜೆಜೆ ಮಾರ್ಗ್ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವು (AD) ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಸಾವಿಗೆ ನಿಖರ ಕಾರಣ ತಿಳಿಯಲು ಹಿಸ್ಟೋಪಾಥಲಾಜಿಕಲ್ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ಬಿರಿಯಾನಿ ಸೇವನೆಯಿಂದ ಅಸ್ವಸ್ಥರಾಗಿದ್ದಾರೆಯೇ ಅಥವಾ ನಂತರ ತಿಂದ ಕಲ್ಲಂಗಡಿ ಹಣ್ಣಿನಿಂದ ತೊಂದರೆಯಾಗಿದೆಯೇ ಎಂಬುದು ತನಿಖೆಯಿಂದ ತಿಳಿಯಬೇಕಿದೆ.