ಪತ್ನಿಯ ಕುತ್ತಿಗೆ ಸೀಳಿ, ಕತ್ತರಿಸಿದ ತಲೆಯೊಂದಿಗೆ ಗ್ರಾಮವಿಡೀ ಅಲೆದಾಡಿದ ಪಾಪಿ ಪತಿ

ಛತ್ತೀಸ್‌ಗಢ: ಪತ್ನಿಯ ಚಾರಿತ್ರ್ಯದ ಮೇಲಿನ ಅನುಮಾನದಿಂದ ಪತಿಯೇ ಪತ್ನಿಯನ್ನೇ ಕ್ರೂರವಾಗಿ ಹತ್ಯೆ ಮಾಡಿದ್ದಾನೆ. ಆಘಾತಕಾರಿ ಸಂಗತಿಯೆಂದರೆ, ಕೊಲೆಯ ನಂತರವೂ ಅವನ ಕೋಪ ಕಡಿಮೆಯಾಗದೆ, ಆಕೆಯ ಕತ್ತರಿಸಿದ ತಲೆಯೊಂದಿಗೆ ಅವನು ಗ್ರಾಮದಲ್ಲಿ ಅಲೆದಾಡುತ್ತಲೇ ಇದ್ದ ಘಟನೆ .ಛತ್ತೀಸ್ ಗಡ್ ನಲ್ಲಿ ಸಂಭವಿಸಿದೆ. ಸದ್ಯ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.

ಸ್ಥಳೀಯ ಕೋಳಿ ಸಾಕಣೆ ಕೇಂದ್ರವೊಂದರಲ್ಲಿ ಕಾವಲುಗಾರನಾಗಿ ಕಾರ್ಯನಿರ್ವಹಿಸುತ್ತಿದ್ದ ಸಲಿಕ್ ರಾಮ್ ಯಾದವ್ (58) ಎಂಬಾತ ತನ್ನ ಪತ್ನಿ ಸುಮತಿ (50) ಅವರನ್ನು ಹರಿತವಾದ ಆಯುಧದಿಂದ ಶಿರಚ್ಛೇದ ಮಾಡಿ ಕೊಲೆ ಮಾಡಿದ್ದಾನೆ. ಕಳೆದ ಮೂರು ವರ್ಷಗಳಿಂದ ಈ ದಂಪತಿಗಳು ಕೋಳಿ ಸಾಕಣೆ ಕೇಂದ್ರದ ಆವರಣದಲ್ಲಿಯೇ ವಾಸವಾಗಿದ್ದರು. ಬುಧವಾರ ಸಂಜೆ ಮಗನ ನಡವಳಿಕೆ ಹಾಗೂ ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿದಂತೆ ದಂಪತಿಗಳ ನಡುವೆ ತೀವ್ರ ವಾಗ್ವಾದ ನಡೆದಿದೆ. ಈ ವೇಳೆ ಮದ್ಯದ ಅಮಲಿನಲ್ಲಿದ್ದ ಸಲಿಕ್, ಕೋಳಿ ಕತ್ತರಿಸಲು ಬಳಸುವ ಮಾಂಸದ ಚಾಕುವಿನಿಂದ ಪತ್ನಿಯ ಕುತ್ತಿಗೆಗೆ ಬಲವಾಗಿ ಏಟು ನೀಡಿದ್ದಾನೆ.
ಹತ್ಯೆ ಮಾಡಿದ ನಂತರ ಆರೋಪಿ ಒಂದು ಕೈಯಲ್ಲಿ ಪತ್ನಿಯ ಕತ್ತರಿಸಿದ ತಲೆ ಹಾಗೂ ಮತ್ತೊಂದು ಕೈಯಲ್ಲಿ ರಕ್ತಸಿಕ್ತ ಆಯುಧ ಹಿಡಿದು ಸಲಿಕ್ ಗ್ರಾಮದ ಬೀದಿಗಳಲ್ಲಿ ಓಡಾಡಿದ್ದಾನೆ. ತದನಂತರ, ಕತ್ತರಿಸಿದ ರುಂಡವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಕೊಂಡು ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.