ಅಡುಗೆ ಮನೆ ಪಾತ್ರೆಯಲ್ಲಿ ಸಿಲುಕಿ ಹೊರಬರಲಾರದೆ ಒದ್ದಾಡಿದ ಕಂದಮ್ಮ: ರಕ್ಷಕರಾಗಿ ಬಂದ ಅಗ್ನಿಶಾಮಕ ದಳ

ತಿರುವನಂತಪುರಂ: ಆಟವಾಡುತ್ತಿದ್ದಾಗ ಪಾತ್ರೆಯೊಳಗೆ ಸಿಲುಕಿಕೊಂಡಿದ್ದ ಪುಟ್ಟ ಮಗುವೊಂದನ್ನು ಕೇರಳದ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಅತ್ಯಂತ ನಾಜೂಕಾಗಿ ರಕ್ಷಿಸಿದ್ದಾರೆ. ಇವರ ಈ ಸಮಯೋಚಿತ ಕಾರ್ಯಕ್ಕೆ ಈಗ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಮನೆಯಲ್ಲಿ ಆಟವಾಡುತ್ತಿದ್ದ ಎರಡು ವರ್ಷದ ಮಗು ಅಡುಗೆ ಮನೆಯಲ್ಲಿದ್ದ ದೊಡ್ಡದಾದ ಅಲ್ಯೂಮಿನಿಯಂ ಪಾತ್ರೆಯೊಳಗೆ ಇಳಿದಿದೆ. ಆದರೆ, ಹೊರಬರಲು ಪ್ರಯತ್ನಿಸಿದಾಗ ಮಗುವಿನ ಸೊಂಟದ ಭಾಗ ಪಾತ್ರೆಯಲ್ಲಿ ಸಿಲುಕಿಕೊಂಡಿದೆ. ಮಗುವಿನ ಅಳು ಕೇಳಿ ಓಡಿ ಬಂದ ಪೋಷಕರು ಎಷ್ಟೇ ಪ್ರಯತ್ನಿಸಿದರೂ ಮಗುವನ್ನು ಹೊರತೆಗೆಯಲು ಸಾಧ್ಯವಾಗಲಿಲ್ಲ. ಪೋಷಕರು ಕೂಡಲೇ ಪೊಲೀಸರು ಮತ್ತು ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ವಿಷಯವನ್ನು ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಮಗುವಿಗೆ ಯಾವುದೇ ನೋವಾಗದಂತೆ ಅತ್ಯಂತ ಎಚ್ಚರಿಕೆ ವಹಿಸಿ, ಹೈಡ್ರಾಲಿಕ್ ಕಟ್ಟರ್ಗಳನ್ನು ಬಳಸಿ ಅಲ್ಯೂಮಿನಿಯಂ ಪಾತ್ರೆಯನ್ನು ನಿಧಾನವಾಗಿ ಕತ್ತರಿಸುವ ಮೂಲಕ ಮಗುವನ್ನು ಸುರಕ್ಷಿತವಾಗಿ ಹೊರತೆಗೆದರು. ಮಗು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದು, ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ. ಕಷ್ಟದ ಸಮಯದಲ್ಲಿ ದೇವರಂತೆ ಬಂದು ನೆರವಾದ ಪೊಲೀಸರ ಈ ಕಾರ್ಯ ‘ಮಾನವೀಯತೆಯ ಸುಂದರ ನೋಟ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
