ಇಲ್ಲಿಂದ ತೊಲಗಿ, ಜನರಿಗೆ ತೊಂದರೆ ಕೊಡಬೇಡಿ”: ದಟ್ಟಣೆಯಲ್ಲಿ ಸಿಲುಕಿದ ತಾಯಿಯ ಆಕ್ರೋಶಕ್ಕೆ ಸಚಿವರು ಸೈಲೆಂಟ್

ಮುಂಬೈ: ಪೊರ್ಲಿ ಪ್ರದೇಶದಲ್ಲಿ ಗುರುವಾರ ನಡೆದ ರಾಜಕೀಯ ಯಾಲಿಯಿಂದಾಗಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದ್ದು, ದಟ್ಟಣೆಯಲ್ಲಿ ಸಿಲುಕಿಕೊಂಡ ಮಹಿಳೆಯೊಬ್ಬರು ಮಹಾರಾಷ್ಟ್ರ ಜಲಸಂಪನ್ಮೂಲ ಖಾತೆ ಸಚಿವ ಗಿರೀಶ್ ಮಹಾಜನ್ ಹಾಗೂ ಸ್ಥಳೀಯ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಅಪರೂಪದ ಘಟನೆ ವರದಿಯಾಗಿದೆ.
ಮಹಾರಾಷ್ಟ್ರದ ಆಡಳಿತಾರೂಢ ಮಹಾಯುತಿ ಮೈತ್ರಿಕೂಟದ ಬಿಜೆಪಿ ಆಯೋಜಿಸಿದ್ದ ಪ್ರತಿಭಟನಾ ರ್ಯಾಲಿಯ ವೇಳೆ ಮಹಿಳೆ ಸಚಿವರ ಜತೆ ನೇರ ಸಂಘರ್ಷಕ್ಕೆ ಇಳಿದರು. ಮಹಾ ವಿಕಾಸ ಆಗಾಡಿ ಮೈತ್ರಿಕೂಟದ ಕಾಂಗ್ರೆಸ್ ಹಾಗೂ ಇತರ ವಿರೋಧ ಪಕ್ಷಗಳನ್ನು ಗುರಿಯಾಗಿಸಿ ಈ ಪ್ರತಿಭಟನೆ ಆಯೋಜಿಸಲಾಗಿತ್ತು. ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಪ್ರತಿಪಕ್ಷಗಳು ವಿರೋಧಿಸಿದ ಕಾರಣದಿಂದ ಮೂರನೇ ಎರಡು ಬಹುಮತ ಪಡೆಯಲು ವಿಫಲವಾಗಿ ಮಸೂದೆ ಅಂಗೀಕಾರವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಬಿಜೆಪಿ ಪ್ರತಿಭಟನಾ ರ್ಯಾಲಿ ಆಯೋಜಿಸಿತ್ತು.ಸಂಜೆ 5 ಗಂಟೆಗೆ ಆಯೋಜನೆಗೊಂಡಿದ್ದ ರ್ಯಾಲಿಯಲ್ಲಿ ದೊಡ್ಡ ಸಂಖ್ಯೆಯ ಮಹಿಳೆಯರು ಎಂವಿಎ ವಿರುದ್ಧ ಘೋಷಣೆಗಳನ್ನು ಕೂಗಿದರು. ವೊರ್ಲಿಯ ಜಂಬೂರಿ ಮೈದಾನದಿಂದ ಡೋಮ್ ವರೆಗೆ ರ್ಯಾಲಿ ಆಯೋಜಿಸಲಾಗಿತ್ತು. ಈ ಜನನಿಬಿಡ ಪ್ರದೇಶದಲ್ಲಿ ರ್ಯಾಲಿ ಸಂಚಾರ ದಟ್ಟಣೆಗೆ ಕಾರಣವಾಯಿತು.
ಮಗುವನ್ನು ಶಾಲೆಯಿಂದ ಕರೆತರಲು ಕಾರು ಚಾಲನೆ ಮಾಡಿಕೊಂಡು ಹೊರಟ ಮಹಿಳೆಯೊಬ್ಬರು ಯಾಲಿಯಿಂದ ಉಂಟಾದ ಸಂಚಾರ ದಟ್ಟಣೆಯಲ್ಲಿ ಹಲವು ಗಂಟೆಗಳ ಕಾಲ ಸಿಕ್ಕಿಹಾಕಿಕೊಂಡರು. ಹಲವು ಗಂಟೆಗಳ ಕಾಲ ಸಂಚಾರ ದಟ್ಟಣೆಯಲ್ಲಿ ಅವರು ಸಿಲುಕಿಕೊಂಡರು. ಈ ಹಂತದಲ್ಲಿ ತಾಳ್ಮೆ ಕಳೆದುಕೊಂಡ ಮಹಿಳೆ, ವಾಹನದಿಂದ ಇಳಿದು ಪಾದಯಾತ್ರೆಯ ಮಧ್ಯಕ್ಕೆ ತೆರಳಿ ಮಹಾಜನ್ ಜತೆ ವಾಗ್ವಾದಕ್ಕೆ ಇಳಿದರು. ರಾಜಕೀಯ ರ್ಯಾಲಿಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಕುರಿತು ಪ್ರಶ್ನಿಸಿದ ಅವರು, ಗುಂಪು ಚದುರಿಸುವಂತೆ ಆಗ್ರಹಿಸಿದರು. ಇಲ್ಲಿಂದ ತೊಲಗಿ” ಎಂದು ಸಚಿವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಕೆಂಡಾಮಂಡಲವಾದರು.
ಮಹಾಜನ್ ಅವರಿಗೆ ಪಕ್ಕದ ಖಾಲಿ ಜಾಗವೊಂದನ್ನು ತೋರಿಸಿದ ಮಹಿಳೆ, “ನೂರಾರು ಮಂದಿ ಕಾಯುತ್ತಿದ್ದಾರೆ. ಅಲ್ಲಿ ಖಾಲಿ ಮೈದಾನ ಇದೆ” ಎಂದು ಹೇಳಿದರು. ಪೊಲೀಸರು ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗ ಮುಂಬೈ ಪೊಲೀಸರ ವಿರುದ್ಧವೂ ಮಹಿಳೆ ಆಕ್ರೋಶ ವ್ಯಕ್ತಪಡಿಸಿದರು.
