ಬಾಕ್ಸ್ ಆಫೀಸ್‌ನಲ್ಲಿ ‘ಧುರಂಧರ್ 2’ ಅಟ್ಟಹಾಸ: 1700 ಕೋಟಿ ಗಳಿಸಿದ ಮೊದಲ ಹಿಂದಿ ಚಿತ್ರ ಎಂಬ ಹೆಗ್ಗಳಿಕೆ!

ಮುಂಬೈ: ‘ಧುರಂಧರ್2: ದಿ ರಿವೇಂಜ್ ಚಿತ್ರ ನಾಲ್ಕನೇ ವಾರಾಂತ್ಯದಲ್ಲಿ 1700 ಕೋಟಿ ರೂಪಾಯಿ ಗಳಿಕೆಯ ಗಡಿ ದಾಟಿದ್ದು ಈ ಮೈಲುಗಲ್ಲು ಸ್ಥಾಪಿಸಿದ ಮೊದಲ ಹಿಂದಿ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ವರದಿಯಾಗಿದೆ.
ನಾಲ್ಕನೇ ವಾರಾಂತ್ಯವಾದ ರವಿವಾರ ಚಿತ್ರ 14.75 ಕೋಟಿ ರೂಪಾಯಿ ನಿವ್ವಳ ಮತ್ತು 17.68 ಕೋಟಿ ರೂಪಾಯಿ ಒಟ್ಟಾರೆ ಆದಾಯ ಗಳಿಸಿದೆ ಎಂದು ಸ್ನಾನ್ಸಿಕ್ ವರದಿ ಮಾಡಿದೆ.
ಆದಿತ್ಯ ಧರ್ ನಿರ್ದೇಶನದ ರಣವೀರ್ ಸಿಂಗ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಗೂಢಚರ್ಯ-ಆ್ಯಕ್ಷನ್ ಚಿತ್ರ ನಾಲ್ಕನೇ ವಾರ 35.25 ಕೋಟಿ ರೂಪಾಯಿ ನಿವ್ವಳ ಹಾಗೂ 42.25 ಕೋಟಿ ರೂಪಾಯಿ ಒಟ್ಟು ಆದಾಯ ಗಳಿಸಿದೆ ಎಂದು ಅಂದಾಜಿಸಲಾಗಿದೆ.
ಆದಾಗ್ಯೂ ಧುರಂಧರ್ ಚಿತ್ರ ನಾಲ್ಕನೇ ವಾರ ಸೃಷ್ಟಿಸಿದ್ದ ದಾಖಲೆಯನ್ನು ಹಿಂದಿಕ್ಕುವಲ್ಲಿ ಧುರಂಧರ್-2 ವಿಫಲವಾಗಿದೆ. ಸರಣಿಯ ಮೊದಲ ಚಿತ್ರ ನಾಲ್ಕನೇ ವಾರ ನಿವ್ವಳ 35.25 ಕೋಟಿ ಹಾಗೂ ಒಟ್ಟಾರೆ 58 ಕೋಟಿ ರೂಪಾಯಿ ಆದಾಯ ಗಳಿಸಿತ್ತು. ಮಾರ್ಚ್ 19ರಂದು ಚಿತ್ರ ಬಿಡುಗಡೆಯಾದ ಬಳಿಕ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ನಿಧಾನ ಇಳಿಕೆ ಕಾಣುತ್ತಾ ಬಂದಿದೆ. ಮೊದಲ ವಾರ 574.17 ಕೋಟಿ ಆದಾಯ ಗಳಿಸಿದ್ದ ಚಿತ್ರ 2 ಹಾಗೂ 3ನೇ ವಾರದಲ್ಲಿ ಕ್ರಮವಾಗಿ 263.65 ಹಾಗೂ 110.60 ಕೋಟಿ ಆದಾಯ ಗಳಿಸಿತು. ಭಾರತದಲ್ಲಿ ಈ ಚಿತ್ರದ ಗಳಿಕೆ ಒಟ್ಟು 1083.67 ಕೋಟಿ ರೂಪಾಯಿ. ಚಿತ್ರ ನಿವ್ವಳ 1297.48 ಕೋಟಿ ಆದಾಯ ಗಳಿಸಿದ್ದು, 415.50 ಕೋಟಿ ರೂಪಾಯಿ ಸಾಗರೋತ್ತರ ಆದಾಯ ಗಳಿಸಿದೆ. ಧುರಂಧರ್-2 ಒಟ್ಟು ಆದಾಯ 1700 ಕೋಟಿ ರೂಪಾಯಿ ದಾಟಿದೆ.
ಚಿತ್ರದ ವಿಶ್ವವ್ಯಾಪಿ ಗಳಿಕೆ 1712.98 ಕೋಟಿ ಆಗಿದ್ದು ಗಲ್ಸ್ ದೇಶಗಳಲ್ಲಿ ಬಿಡುಗಡೆಯಾಗದಿದ್ದರೂ, 25 ದಿನಗಳಲ್ಲಿ ವಿಶ್ವಾದ್ಯಂತ 1700 ಕೋಟಿ ರೂಪಾಯಿ ಗಳಿಸಿದ ಮೊದಲ ಚಿತ್ರ ಎನಿಸಿದೆ ಎಂದು ವರದಿಯಾಗಿದೆ.
